ಮಹಾತ್ಮರ ಚಾರಿತ್ರ್ಯ ಹನನ ಮಾಡುವ ವಿಕೃತರು

ನುಡಿಯ ಪಾವಿತ್ರ್ಯ ಅರಿತು ಬರಹ ಮಾಡುವ ವ್ಯಕ್ತಿ, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಸಾಲನ್ನು ಬಸವಣ್ಣನವರ ಚಾರಿತ್ರ್ಯಹನನ ಮಾಡಲು ಬಳಸಿಕೊಳ್ಳುತ್ತಿರಲಿಲ್ಲ. ಬಸವಣ್ಣನವರ ನಿಲುವಿನಲ್ಲಿ ದ್ವಂದ್ವ ಇದ್ದಿದ್ದರೆ ನುಡಿಯ ಮಹತ್ವ ಪ್ರತಿಪಾದಿಸುವ- ‘‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಖೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ’’ ಎಂದು ಆತ್ಮ ನಿರೀಕ್ಷಣೆಯ ಮಾತುಗಳನ್ನು ಆಡುತ್ತಿರಲಿಲ್ಲ.
‘‘ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ವ
ತಾಳೋಷ್ಠ ಸಂಪುಟವೆಂಬುದು
ನಾದಬಿಂದು ಕಳಾತೀತ
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ’’
-ಅಲ್ಲಮ
ಬಸವಾದಿ ಶರಣರಿಗೆ ಮಹಾಗುರುವಂತಿದ್ದ, ಅನುಭವ ಮಂಟಪದ ನೇತೃತ್ವ ವಹಿಸಿದ್ದ: ಅನುಬಾವಿ ಕವಿ, ಮಹಾ ದಾರ್ಶನಿಕ ಅಲ್ಲಮ ಪ್ರಭುಗಳು ಮಾತುಗಳನ್ನು ಜ್ಯೋತಿರ್ಲಿಂಗವೆಂದು ಭಾವಿಸಿದವರು. ಆದರೆ ಮಾತು ಕೆಲವರ ಬಾಯಲ್ಲಿ ವಿಕೃತ ರೂಪ ತಾಳಿ, ನಂಜು ಕಾರುವ ನುಡಿಗಳಾಗುತ್ತವೆ. ಕುತರ್ಕ, ಅಪ್ರಬುದ್ಧತೆ ಮತ್ತು ಅಜ್ಞಾನವೇ ಮಾತುಗಳ ಬಂಡವಾಳವಾದಾಗ, ಬೆಳಕಾಗಬೇಕಾದ ಮಾತುಗಳು ದೊಂದಿಗಳಾಗಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತವೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತವೆ. ಅಶಾಂತಿಗೆ ಕಾರಣವಾಗುತ್ತವೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರವಿ ಹಂಜಗಿಮಠ ಸದ್ಯ ಅಮೆರಿಕದ ಶಿಕಾಗೋ ನಿವಾಸಿ. ರವಿ ಹಂಜ್ ಹೆಸರಲ್ಲಿ ಬರವಣಿಗೆ ಮಾಡುವ ಈತನ ಮಾತುಗಳನ್ನು, ತರ್ಕ ಸರಣಿಯನ್ನು ಗಮನಿಸಿ. ವಿಶ್ವವಾಣಿ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಆಡಿದ ಮಾತುಗಳು, ಈತ ವಿಶ್ವವಾಣಿಯಲ್ಲಿ ಬರೆಯುತ್ತಿದ್ದ ಅಂಕಣ ಬರಹದ ಪುಸ್ತಕ ‘ಬಸವ ಮಂಟಪ’ ಬಿಡುಗಡೆಯ ನಂತರ ನಡೆಸಿದ ವಿಶೇಷ ಸಂದರ್ಶನದಲ್ಲಿ ಆಡಿದ ಮಾತುಗಳು ಬಸವಾದಿ ಶರಣರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿವೆ. ಆ ಮಾತುಗಳು ಹೀಗಿವೆ -‘‘ಇಡೀ ಶರಣ ಸಂಕುಲದ ವಚನಗಳಲ್ಲಿ ಸಾಕಷ್ಟು ವೈರುಧ್ಯಗಳಿವೆ. ಬಸವಣ್ಣನ ವಚನಗಳು ವೈರುಧ್ಯಗಳಿಂದ ಹೊರತಾಗಿಲ್ಲ. ಜೀವನಕ್ಕೂ ಬಸವಣ್ಣನ ವಚನಗಳಿಗೂ ಸಾಕಷ್ಟು ವೈರುಧ್ಯವಿದೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನ ವಚನವನ್ನೇ ಗಮನಿಸಿ. ಐತಿಹಾಸಿಕವಾಗಿ ನೋಡಿದರೆ ಬಸವಣ್ಣ ಬಿಜ್ಜಳನ ಖಜಾನೆಯನ್ನು ಲೂಟಿ ಮಾಡಿ ಜಂಗಮರ ದಾಸೋಹಕ್ಕೆ ಬಳಸಿದ್ದಾನೆ. ಅದರ ಅರ್ಥವೇನು.? ಬಸವಣ್ಣ ವಿತ್ತ ಮಂತ್ರಿಯಾಗಿರಬಹುದು. ಆದರೆ ಆತನಿಗೆ ಖಜಾನೆಯ ಮೇಲೆ ಹಕ್ಕು ಇತ್ತೆ? ಕಳಬೇಡ ಅನ್ನೋದಕ್ಕೆ ವೈರುಧ್ಯ ಈ ಪ್ರಸಂಗ. ಕೊಲಬೇಡ ಅನ್ನೋದಕ್ಕೆ, ಬಿಜ್ಜಳನ ಕೊಲ್ಲಿಸಿದ ಅಂತ ಹೇಳ್ತಾರೆ. ಕೊಲಬೇಡ ಅಂತ ಹೇಳಿ ಕೊಲ್ಲಿಸಿದ ಅಂತ ಇವರೇ ಹೇಳ್ತಾರೆ. ಕೊಲಬೇಡ ಎಂಬ ಮಾತಿಗೆ ವೈರುಧ್ಯ. ಹೀಗಿದ್ದಾಗ, ಆಮೇಲೆ ಹುಸಿಯ ನುಡಿಯಲು ಬೇಡ. ಖಜಾನೆ ಹಣ ಏನಾಯಿತಪ್ಪ ಅಂತ ಕೇಳಿದ್ದಕ್ಕೆ, ಯಾವ್ಯಾವುದಕ್ಕೋ ಖರ್ಚಾಗಿದೆ ಅಂತ ಹುಸಿನೂ ನುಡಿದಿದ್ದಾನೆ. ವಚನೆಗಳೇ ಧರ್ಮ ಗ್ರಂಥ ಅಂತ ಲಿಂಗಾಯತರು ಹೇಳುತ್ತಾರೆ. ಕೆಲವು ಕಡೆ ವಚನಗಳಲ್ಲಿ ದ್ವಂದ್ವಗಳಿವೆ. ಬಸವಣ್ಣ ಆಂಡ್ ಕಂಪೆನಿ ಸನಾತನ ಧರ್ಮವನ್ನು ವಿರೋಧಿಸಿಲ್ಲ’’ ಎಂದು ಬಸವಣ್ಣನವರ ಬಗ್ಗೆ, ವಚನ ಸಾಹಿತ್ಯದ ಬಗ್ಗೆ ಬಾಯಿಗೆ ಬಂದಂತೆ ನಾಲಿಗೆ ಹರಿ ಬಿಟ್ಟಿದ್ದಾರೆ. ಆ ಅಪದ್ಧ ಮಾತುಗಳನ್ನೇ ಮಹಾನ್ ಸಂಶೋಧನೆ ಎಂಬಂತೆ ಬಿಂಬಿಸಿಕೊಂಡಿದ್ದಾರೆ. (ವಿಶ್ವವಾಣಿ ಯೂಟ್ಯೂಬ್ ಚಾನೆಲ್ನ ರವಿ ಹಂಜ್ ಸಂದರ್ಶನದ ಆಯ್ದ ಮಾತುಗಳು)
ರವಿ ಹಂಜ್ ಎಂಬ ವಿಕೃತ ಸಂಶೋಧಕನ ಮಾತುಗಳ ಒಟ್ಟು ಸಾರ: ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಇದೆ. ಬಸವಣ್ಣ ಕೊಲೆಗಡುಕ.ಆದರೂ ಕೊಲಬೇಡ ಅಂತ ಹೇಳಿದ. ಬಿಜ್ಜಳನ ಖಜಾನೆಯನ್ನು ಬಸವಣ್ಣ ಲೂಟಿ ಮಾಡಿದ. ಆದರೂ ಕಳಬೇಡ ಅಂತ ಹೇಳಿದ. ಹಾಗೆ ಲೂಟಿ ಮಾಡಿದ ಹಣವನ್ನು ಜಂಗಮರ ದಾಸೋಹಕ್ಕೆ ಬಳಸಿದ. ಲೆಕ್ಕ ಕೇಳಿದಾಗ ಸುಳ್ಳು ಲೆಕ್ಕ ಕೊಟ್ಟ. ಆದರೂ ಹುಸಿಯ ನುಡಿಯಲು ಬೇಡ ಎಂದು ಹೇಳಿದ ಎನ್ನುವುದು. ಬಸವಣ್ಣನ ನಡೆ ಮತ್ತು ನುಡಿಯಲ್ಲಿ ವೈರುಧ್ಯವಿದೆ ಎಂಬುದು ರವಿ ಹಂಜ್ ಕುತರ್ಕ. ಈ ಕುತರ್ಕದ ಸಂಶೋಧನೆಗೆ ಸಾಕಷ್ಟು ದಾಖಲೆಗಳನ್ನು ಇಟ್ಟುಕೊಂಡಿದ್ದಾರಂತೆ.
ರವಿ ಹಂಜ್ ಅವರು ವಿಶ್ವವಾಣಿ ಮತ್ತು ಫೇಸ್ಬುಕ್ನಲ್ಲಿ ವಚನ ಸಾಹಿತ್ಯ ಮತ್ತು ವಚನಗಳ ಕುರಿತು ನಡೆದ ಸಂಶೋಧನೆಗಳ ಮೇಲೆ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಅವರ ಸಂಶೋಧನಾ ಭಾಷೆ, ನಿರೂಪಣೆಯ ಕ್ರಮ ಮತ್ತು ವಾದಸರಣಿಯ ಮಟ್ಟ ಅರಿಯಲು ಅವರೆ ಬರೆದ ಒಂದು ಪ್ಯಾರಾ ನಿದರ್ಶನಕ್ಕಾಗಿ ಗಮನಿಸಬಹುದು. ಡಾ. ಎಂ.ಎಂ ಕಲಬುರ್ಗಿಯವರ ಬಗ್ಗೆ, ಅವರ ಸಂಶೋಧನೆ ಬಗ್ಗೆ ಹಂಜ್ ಬರೆದ ಈ ಸಾಲು ಆತನ ವಿಕೃತ ಸಂಶೋಧನೆಗೆ ಹಿಡಿದ ಕನ್ನಡಿಯಂತಿದೆ. ‘‘ಆತುರಗೇಡಿ ಶೀಘ್ರ ಸ್ಕಲನಿ -ಸಂಶೋಧನೆಗಳ ಪಿತಾಮಹ ಎಂ. ಎಂ. ಕಲಬುರ್ಗಿಯವರ ಬೆತ್ತಲೆಗೆ ಬಟ್ಟೆ ತೊಡಿಸುವ ಮತ್ತೋರ್ವ ಶೀಘ್ರ ಸ್ಕಲನಿ ಶೃಂಖಲೆ -ಅಭಿಪ್ರಾಯಗಳ ಕಲ್ಲು ಗುಂಡು (ಶಿಶ್ನ ರೂಪದ )ಪೂಜಿಸಿ ತೊಟ್ಟಿಲಶಾಸ್ತ್ರ ಮಾಡುವ ಶಿರಹಟ್ಟಿಮಠ ಅವರ ಎಲ್ಲ ಪೊಳ್ಳು ವಾದವನ್ನು ಗಾಳಿಗೆ ತೂರುವ ದಾರಿದೀಪದ....’’-ಇತ್ಯಾದಿ ವಾದದಲ್ಲಿ ಯಾವ ಹೊಸ ಒಳನೋಟ ಇದೆ ಎಂಬುದನ್ನು ಕನ್ನಡದ ಪ್ರಾಜ್ಞರೇ ನಿರ್ಧರಿಸಬೇಕು.
ವಚನ ಸಾಹಿತ್ಯವನ್ನು ಕೇವಲ ಜಾತಿ ವಿರೋಧಿ ಸಾಮಾಜಿಕ ಕ್ರಾಂತಿ ಎಂದು ವ್ಯಾಖ್ಯಾನಿಸುವ ಕನ್ನಡದ ಸಂಶೋಧನೆಗಳ ಬಗ್ಗೆ ಡೆಂಕಿನ್ ಝಳಕಿ ಮತ್ತು ಎಸ್. ಎನ್. ಬಾಲಗಂಗಾಧರ್ ಎಂಬ ಇಬ್ಬರು ಸಂಶೋಧಕರು ಈ ಹಿಂದೆಯೇ ತಕರಾರು ಎತ್ತಿದ್ದರು. ಅವರಿಬ್ಬರ ಆಂಗ್ಲ ಬರಹವನ್ನು ರಾಜಾರಾಮ್ ಹೆಗಡೆಯವರು ಕನ್ನಡಕ್ಕೆ ಅನುವಾದಿಸಿದ್ದರು. ಎಸ್.ಎನ್. ಬಾಲಗಂಗಾಧರ್ ರಚಿಸಿರುವ ಪುಸ್ತಕವೊಂದನ್ನು ರಾಜಾರಾಮ್ ಹೆಗಡೆಯವರು ‘ಬುದ್ಧಿಜೀವಿಗಳ ಮೂಢನಂಬಿಕೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯಂತೂ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲ ಎಂದು ವಾದ ಮಂಡಿಸುತ್ತದೆ. ಮುಂದುವರಿದು, ಡೆಂಕಿನ್ ಝಳಕಿ ಮತ್ತು ಬಾಲಗಂಗಾಧರ ಅವರು ವಚನಗಳಲ್ಲಿ ವೈದಿಕ ವಿರೋಧಿ ಅಂಶಗಳು ಕಡಿಮೆ ಇವೆ. ಅನುಭಾವ ಮತ್ತು ಭಾರತೀಯ ದರ್ಶನ ಕುರಿತ ವಿಚಾರಧಾರೆಗಳು ಸಾಕಷ್ಟಿವೆ. ಆ ವಿಚಾರಧಾರೆಗಳನ್ನು ಒಂದು ವರ್ಗದ ಬುದ್ಧಿಜೀವಿಗಳು-ಸಂಶೋಧಕರು ಪಕ್ಕಕ್ಕೆ ಸರಿಸಿದ್ದಾರೆ ಎಂಬುದು ಅವರ ವಾದದ ಮುಖ್ಯ ತಿರುಳು. ಒಂದೆರಡು ವರ್ಷಗಳ ಹಿಂದೆ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳ ಗೌರವ ಸಂಪಾದಕತ್ವದಲ್ಲಿ ವಚನ ದರ್ಶನ ಎಂಬ ಗ್ರಂಥ ಬಿಡುಗಡೆಗೊಂಡಿತು. ಜನಮೇಜಯ ಉಮರ್ಜಿ, ಡಾ. ನಿರಂಜನ ಪೂಜಾರ್, ಚಂದ್ರಪ್ಪ ಬಾರಂಗಿ, ಡಾ. ಸಂತೋಷ್ ಕುಮಾರ್ ಪಿ.ಕೆ. ಈ ಗ್ರಂಥದ ಸಂಪಾದಕರಾಗಿದ್ದರು. ಈ ಗ್ರಂಥದ ಕುರಿತು ವ್ಯಾಪಕ ಚರ್ಚೆ ಸಂವಾದ ನಡೆಯಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿಶೇಷ ಮುತುವರ್ಜಿ ವಹಿಸಿದ್ದರು. ವಚನ ದರ್ಶನ ಗ್ರಂಥವೂ ‘ವಚನಗಳು ವೈದಿಕ ವಿರೋಧಿಯಲ್ಲ. ಲಿಂಗಾಯತ ಹಿಂದೂ ಧರ್ಮದ ಒಂದು ಭಾಗ’ ಎಂಬ ವಾದಸರಣಿಯನ್ನೇ ಮಂಡಿಸುತ್ತಿತ್ತು. ಅದನ್ನೇ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಶೈವ, ವೀರಶೈವ ಮತ್ತು ಲಿಂಗಾಯತ-ಕುರಿತು ವಿದ್ವತ್ಪೂರ್ಣ ಚರ್ಚೆ ನಡೆಯುವುದು ಬೇರೆ, ಒಟ್ಟು ವಚನ ಸಾಹಿತ್ಯದ ಮೂಲ ಆಶಯವನ್ನು ವಿರೂಪಗೊಳಿಸಿ ಬೇರೊಂದು ಆಯಾಮದಲ್ಲಿ ಚರ್ಚೆಯಾಗುವಂತೆ ಮಾಡುವುದು ಬೇರೆ. ಕನ್ನಡದ ಪ್ರತಿಭಾವಂತ ಚಿಂತಕ ಡಾ. ಡಿ.ಆರ್. ನಾಗರಾಜ್ ಅವರು ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಎಂಬ ಹೆಸರಿನ ವಿದ್ವತ್ಪೂರ್ಣ ಪುಸ್ತಕ ಬರೆದರು. ಅಭಿನವ್ ಗುಪ್ತ, ಗೋರಖನಾಥ್, ಅಲ್ಲಮ, ನಾಗಾರ್ಜುನ ಮತ್ತು ಶೈವ ಪಂಥದ ಬಗೆಗಿನ ಅವರ ಪ್ರಮೇಯಗಳನ್ನು ಸಂಪೂರ್ಣ ಒಪ್ಪಿಕೊಳ್ಳಲಿಲ್ಲ. ಆದರೆ ಆ ಪುಸ್ತಕ ಅಲ್ಲಮಪ್ರಭುಗಳನ್ನು ಬೇರೊಂದು ಕಣ್ಣೋಟದಲ್ಲಿ ಗ್ರಹಿಸುವಂತೆ ಪ್ರೆರೇಪಿಸಿತ್ತು. ಡಾ. ಎಂ. ಚಿದಾನಂದ ಮೂರ್ತಿ, ಡಾ. ಎಂ. ಎಂ. ಕಲಬುರ್ಗಿ, ಡಾ. ಕೆ.ಜಿ. ನಾಗರಾಜಪ್ಪ, ಡಾ. ವೀರಣ್ಣ ರಾಜೂರ್, ಡಾ. ಬಸವರಾಜ್ ಕಲ್ಗುಡಿ, ಡಾ. ಓ.ಎಲ್. ನಾಗಭೂಷಣ್ ಸೇರಿದಂತೆ ವಚನ ಸಾಹಿತ್ಯದ ಮೇಲೆ ಸಂಶೋಧನೆ ಕೈಗೊಂಡ ಬಹುತೇಕ ವಿದ್ವಾಂಸರು ಸಂಶೋಧನೆಯನ್ನು ಒಂದು ಸಾಧ್ಯತೆ ಎಂದೇ ಭಾವಿಸಿದ್ದರು. ಎಷ್ಟೇ ಪೂರಕ ದಾಖಲೆಗಳಿದ್ದರೂ ಸಂಶೋಧನೆಯ ಫಲಿತವನ್ನು ಇದಮಿತ್ತಂ ಎಂದು ಷರಾ ಬರೆಯಲು ಸಾಧ್ಯವಾಗುವುದಿಲ್ಲ.
ಹೀಗಿರುವಾಗ ರವಿ ಹಂಜ್ ಕನ್ನಡದ ಹಿರಿಯ ಸಂಶೋಧಕರನ್ನು, ಅದರಲ್ಲೂ ವಚನ ಸಾಹಿತ್ಯದ ಮೇಲೆ ಸಂಶೋಧನೆ ಕೈಗೊಂಡ ಸಂಶೋಧಕರನ್ನು ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಗ್ರಹಿಸಿ ನಿಂದಿಸುವುದೇ ಮಹಾನ್ ಸಂಶೋಧನೆ ಎಂದು ಭ್ರಮಿಸಿದರೆ ಯಾರು ತಾನೇ ಒಪ್ಪಿಕೊಳ್ಳಲು ಸಾಧ್ಯ? ಸಂಶೋಧನೆ ವಸ್ತುನಿಷ್ಠವಾಗಿರಬೇಕು. ಸಂಶೋಧಕ ಪೂರ್ವಾಗ್ರಹಪೀಡಿತನಾಗಿರಬಾರದು. ಹೊಸ ಆಕರಗಳು ಲಭ್ಯವಾದಾಗ ತನ್ನ ಹಳೆಯ ನಿಲುವನ್ನು ಬದಲಿಸಿಕೊಳ್ಳುವ ಸೌಜನ್ಯ ತೋರಬೇಕು. ಡೆಂಕಿನ್ ಝಳಕಿ ಮತ್ತು ಬಾಲಗಂಗಾಧರ್ ಅವರ ವಚನಗಳ ಮರು ಓದಿನ ಮರ್ಮ ಸ್ಪಷ್ಟವಿತ್ತು. ವಚನ ದರ್ಶನ ಗ್ರಂಥ ಪ್ರತಿಷ್ಠಾಪನೆ ಮಾಡಲು ಯತ್ನಿಸಿದ ತಾತ್ವಿಕತೆಯ ಮಿತಿ ಮೇಲ್ನೋಟಕ್ಕೆ ಮನವರಿಕೆಯಾಗುತ್ತಿತ್ತು. ಆದರೆ ರವಿ ಹಂಜ್ ಅವರ ವಿಕೃತ ಸಂಶೋಧನೆ ಕುಚೇಷ್ಟೆಯ ಸ್ವರೂಪದ್ದಾಗಿದೆ ಹೊರತು ಘನವಾದ ಉದ್ದೇಶ ಹೊಂದಿಲ್ಲ ಎಂಬುದು ಸ್ವಯಂ ಸ್ಪಷ್ಟವಾಗಿದೆ.
ನುಡಿಯ ಪಾವಿತ್ರ್ಯ ಅರಿತು ಬರಹ ಮಾಡುವ ವ್ಯಕ್ತಿ, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಸಾಲನ್ನು ಬಸವಣ್ಣನವರ ಚಾರಿತ್ರ್ಯಹನನ ಮಾಡಲು ಬಳಸಿಕೊಳ್ಳುತ್ತಿರಲಿಲ್ಲ.ಬಸವಣ್ಣನವರ ನಿಲುವಿನಲ್ಲಿ ದ್ವಂದ್ವ ಇದ್ದಿದ್ದರೆ ನುಡಿಯ ಮಹತ್ವ ಪ್ರತಿಪಾದಿಸುವ- ‘‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಖೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ’’ ಎಂದು ಆತ್ಮ ನಿರೀಕ್ಷಣೆಯ ಮಾತುಗಳನ್ನು ಆಡುತ್ತಿರಲಿಲ್ಲ.
ಬಸವಣ್ಣನವರು ಸನಾತನ ಧರ್ಮ ವಿರೋಧಿಯಾಗಿರಲಿಲ್ಲ ಎಂದು ರುಜುವಾತುಪಡಿಸುವುದೇ ರವಿ ಹಂಜ್ ಅವರ ಪ್ರಧಾನ ಕಾಳಜಿ ಇದ್ದಂತಿದೆ. ಬಸವಣ್ಣನವರ ಸಾಮಾಜಿಕ ನಿಲುವು ಸ್ಪಷ್ಟವಾಗಿತ್ತು. ‘‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿಯಿರಿ ಕೂಡಲಸಂಗಯ್ಯ’’ ಎಂಬ ವಚನದ ಸಾಲು ತಳ ಸಮುದಾಯದ ಬಗೆಗಿರುವ ಅವರ ಕಾಳಜಿ ಕಕ್ಕುಲಾತಿ ಖಚಿತಪಡಿಸುತ್ತದೆ.ವೇದ, ಶಾಸ್ತ್ರ, ಆಗಮಗಳನ್ನೇ ರವಿ ಹಂಜ್ ಸನಾತನ ಧರ್ಮ ಎಂದು ಪರಿಭಾವಿಸಿದರೆ ಅವರ ಗ್ರಹಿಕೆಯ ಮಿತಿ ಎನಿಸಿಕೊಳ್ಳುತ್ತದೆ. ವೇದ, ಶಾಸ್ತ್ರ, ಆಗಮಗಳು ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯ ಅವರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಅದಕ್ಕೆ ಬಸವಣ್ಣನವರು- ‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯ ಮಹಾದಾನಿ ಕೂಡಲಸಂಗಮದೇವಾ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ’’ ಎಂದು ಆಕ್ರೋಶಭರಿತರಾಗಿ ಮಾತನಾಡುತ್ತಾರೆ. ಮಾದಾರ ಚೆನ್ನಯ್ಯನ ಮನೆಯ ಮಗನಾಗಿರುವುದರಿಂದ ಅಸಮಾನತೆ ಬೋಧಿಸುವ ವೇದ, ಶಾಸ್ತ್ರ, ಆಗಮಗಳ ವಿರೋಧಿಸುವುದು ಬಸವಣ್ಣನವರ ಅದ್ಯ ಕರ್ತವ್ಯವಾಗಿತ್ತು. ಜಾತೀಯತೆ, ಮೌಢ್ಯ ಪ್ರತಿಪಾದಿಸುವ ಸನಾತನ ಧರ್ಮವನ್ನು ವಿರೋಧಿಸುವುದು ಅವರ ನಂಬಿಕೆಯ ಭಾಗವಾಗಿತ್ತು. ‘‘ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ, ರಾಶಿ ಕೂಟ ಋಣ ಸಂಬಂಧವುಂಟೆಂದು ಹೇಳಿರಯ್ಯ, ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯ, ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ’’ ಎಂಬುದು ಬಸವಣ್ಣವರ ಅಚಲ ನಂಬಿಕೆ. ಮೌಢ್ಯ ಜನಸಾಮಾನ್ಯರ ಶೋಷಣೆಗೆ ಮಾಡುತ್ತಿದ್ದ ದಿನಮಾನಗಳಲ್ಲಿ ಅದನ್ನು ವಿರೋಧಿಸುವುದನ್ನು ಅನಿವಾರ್ಯವಾಗುತ್ತದೆ.
ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಸದಾ ಸಮಕಾಲಿನ ತಲ್ಲಣಗಳಿಗೆ ಧ್ವನಿಯಾದವರು. ಮಹಾತ್ಮರ ಚಾರಿತ್ರ್ಯಹನನ ಮಾಡುವ ವಿಕೃತಿ ಇತ್ತೀಚೆಗೆ ಹೆಚ್ಚುತ್ತಿದೆ. ರವಿ ಹಂಜ್ ಬಸವಣ್ಣನವರ ಬಗ್ಗೆ ಅತ್ಯಂತ ಕೀಳು ಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿ ಅದೇ ಮಹಾನ್ ಸಂಶೋಧನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪ ಎಂಬ ಇನ್ನೊಬ್ಬ ವ್ಯಕ್ತಿ ಮಹಾತ್ಮಾ ಗಾಂಧೀಜಿಯವರ ಕೊಲೆಯನ್ನು ಸಮರ್ಥಿಸುವ, ಅವರ ಚಾರಿತ್ರ್ಯ ಹನನ ಮಾಡುವ ವಿಕೃತಿಯಲ್ಲಿ ತೊಡಗಿದ್ದಾರೆೆ. ರವಿ ಹಂಜ್ ಅವರ ವಿಕೃತ ಸಂಶೋಧನೆಯನ್ನು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಉಗ್ರವಾಗಿ ಖಂಡಿಸಿದ್ದಾರೆ. ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ರವಿ ಹಂಜ್ ಸಂಶೋಧನೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೂ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ಬಸವಾನುಯಾಯಿಗಳು ಎಲ್ಲ ಸಮುದಾಯಗಳಲ್ಲಿದ್ದಾರೆ. ಅವರೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ. ರಚನಾತ್ಮಕ ಟೀಕೆ, ವಿಮರ್ಶೆ ಮತ್ತು ಸಂಶೋಧನೆ ಹೇಗಿರಬೇಕು ಎಂಬುದು ಅರಿಯಲು ರವಿ ಹಂಜ್, ಅಡ್ಡಂಡ ಕಾರ್ಯಪ್ಪ ತರಹದ ಅರೆ ಬೆಂದ ವ್ಯಕ್ತಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯನ್ನು ಓದಬೇಕು. ಕರ್ನಾಟಕ ಸರಕಾರ ರವಿ ಹಂಜ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ರವಿ ಹಂಜ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ವಿವಾದಿತ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಲು ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಮಹಾತ್ಮರ ಚಾರಿತ್ರ್ಯ ಹನನ ಮಾಡುವ ವಿಕೃತಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯ ಪಡೆ ರಚಿಸಬೇಕು. ಮಹಾತ್ಮರು ಮಾತ್ರವಲ್ಲ, ಯಾರೊಬ್ಬರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡುವುದು ಅಪರಾಧ ಎಂದೇ ಪರಿಗಣಿಸಬೇಕು. ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿಯವರ ಕುರಿತು ಅತ್ಯಂತ ಕೀಳು ಅಭಿರುಚಿಯ ಮಾತುಗಳನ್ನಾಡಿದ್ದರು. ಇಲ್ಲಿಯವರೆಗೆ ಯತ್ನಾಳ್ ವಿರುದ್ಧ ಕ್ರಮ ಜರುಗಿಸಿಲ್ಲ. ಇದೇ ಯತ್ನಾಳ್ ಹಿಂದೊಮ್ಮೆ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡು ಜೀವ ಬಿಟ್ಟಿದ್ದರು ಎಂದು ಹೇಳಿಕೆ ಕೊಟ್ಟಿದ್ದರು. ರವಿ ಹಂಜ್, ಅಡ್ಡಂಡ ಕಾರ್ಯಪ್ಪ ಮತ್ತು ಯತ್ನಾಳ್ ಅವರಂತಹ ಉಡಾಫೆ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಿದರೆ ಜವಾಬ್ದಾರಿಯುತ ಸಂಶೋಧನೆ ಮತ್ತು ಹೊಣೆಯರಿತ ಹೇಳಿಕೆಗಳು ಬರುತ್ತವೆ.
(ಅಂಕಣಕಾರರು ಹಿರಿಯ ಲೇಖಕರು, ಪತ್ರಕರ್ತರು)






