ಸರಕಾರಿ ಆಸ್ಪತ್ರೆಗಳ ದುರವಸ್ಥೆ

ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯದೆ ಇರುವುದಕ್ಕೆ ಮುಖ್ಯ ಕಾರಣ ತಜ್ಞ ವೈದ್ಯರ ಖಾಸಗಿ ಪ್ರಾಕ್ಟೀಸ್. ಸರಕಾರಿ ಆಸ್ಪತ್ರೆ, ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಬಹುತೇಕ ತಜ್ಞ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ. ಖಾಸಗಿ ಪ್ರಾಕ್ಟೀಸ್ ಮಾಡುವುದರಿಂದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಹಲವು ವೈದ್ಯರು ತಮ್ಮ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆ ನೀಡುತ್ತಾರೆ. ಖಾಸಗಿ ಪ್ರಾಕ್ಟೀಸ್‌ಗೆ ಕಡಿವಾಣ ಬೀಳದ ಹೊರತು ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನಿರೀಕ್ಷಿಸಲಾಗದು.
ಸರಕಾರಿ ಆಸ್ಪತ್ರೆ, ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು, ಸರಕಾರಿ ಸಾರಿಗೆ ವ್ಯವಸ್ಥೆಯೆಂದರೆ ಭಯ ಪಡುವಂತಾಗಿದೆ. ಮೂವತ್ತು -ನಲವತ್ತು ವರ್ಷಗಳ ಹಿಂದೆ ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳು ಸರಕಾರಿ ಆಸ್ಪತ್ರೆ, ಸರಕಾರಿ ಶಾಲಾ ಕಾಲೇಜುಗಳನ್ನೇ ಅವಲಂಬಿಸಿದ್ದರು. ಆಗ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆ ಸೇವಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದವು. ಅಷ್ಟು ಮಾತ್ರವಲ್ಲ ಅತ್ಯಂತ ಪವಿತ್ರ ಸೇವಾ ಕ್ಷೇತ್ರವೆಂದೇ ಪರಿಗಣಿಸಿದ್ದರು. ಖಾಸಗಿ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳು, ಖಾಸಗಿ ಆಸ್ಪತ್ರೆಗಳು ಅದರಲ್ಲೂ ಕಾರ್ಪೊರೇಟ್ ಆಸ್ಪತ್ರೆಗಳು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಸೇವೆ ಎಂಬ ಪದ ದಂಧೆಯಾಗಿ ಬದಲಾಗಿದೆ. ವ್ಯಾಪಾರ ಪದದಲ್ಲಿ ಕನಿಷ್ಠ ವೃತ್ತಿಪರ ಕಾಳಜಿ ಇರುತ್ತದೆ. ದಂಧೆ ಪದ ಅಕ್ಷರಶಃ ಲೂಟಿಕೋರ ಮನೋಧರ್ಮ ಸೂಚಿಸುತ್ತದೆ.
ಒಂದು ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಈ ಪ್ರಮಾಣದಲ್ಲಿ ದುಬಾರಿಯಾಗಿರಲಿಲ್ಲ. ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾಬಲ್ಯ ಮೆರೆಯುತ್ತಿರುವಂತೆ ಇಡೀ ವೈದ್ಯಕೀಯ ವ್ಯವಸ್ಥೆಯೇ ದಂಧೆಯ ಸ್ವರೂಪಕ್ಕೆ ತಿರುಗಿಕೊಂಡಿತು. ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್ ಹೋಮ್‌ಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳ ಜಾಲ ವಿಸ್ತರಣೆಯಾಗತೊಡಗಿತು. ಈ ಮೊದಲು ವೈದ್ಯರನ್ನು ದೇವರೆಂದೇ ಭಾವಿಸಲಾಗುತ್ತಿತ್ತು. ರೋಗ ಗುಣಪಡಿಸುವ ಏಕೈಕ ಗುರಿ ಹೊಂದಿದ್ದ ವೈದ್ಯರು ಪ್ರತಿಯಾಗಿ ಹಣ (ಸಂಬಳ)ಪಡೆದುಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ರೋಗಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವುದು ಈಗ ಮೊದಲ ಆದ್ಯತೆಯಾಗಿ ಉಳಿದಿಲ್ಲ. ಒಬ್ಬ ರೋಗಿಯಿಂದ ಚಿಕಿತ್ಸೆಯ ಹೆಸರಲ್ಲಿ ಎಷ್ಟು ಹಣ ಕಿತ್ತುಕೊಳ್ಳಬಹುದು ಎಂಬುದು ಎಲ್ಲ ಖಾಸಗಿ ಆಸ್ಪತ್ರೆಗಳ ಮೊದಲ ಆದ್ಯತೆಯಾಗಿದೆ. ಬಿಲ್ಲಿಂಗ್‌ಗೆ ಕೊಡುವ ಮಹತ್ವ ಅತ್ಯುತ್ತಮ ಚಿಕಿತ್ಸೆಗೆ ಕೊಡುವುದಿಲ್ಲ. ಇಂತಹ ದುರಿತ ಕಾಲದಲ್ಲಿ ಸರಕಾರಿ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿತ್ತು.
ಹಾಗೆ ನೋಡಿದರೆ, ಕರ್ನಾಟಕದ ಸರಕಾರಿ ವೈದ್ಯಕೀಯ ವ್ಯವಸ್ಥೆ ಒಂದು ಕಾಲದಲ್ಲಿ ಅತ್ಯುತ್ತಮ ಗುಣಮಟ್ಟಕ್ಕೆ ಹೆಸರಾಗಿತ್ತು. ಖಾಸಗಿ ಆಸ್ಪತ್ರೆಗಳು ಮತ್ತು ದುಬಾರಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಿಂದಾಗಿ ಸರಕಾರಿ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ವೈದ್ಯಕೀಯ ವ್ಯವಸ್ಥೆ ನೆಪ ಮಾತ್ರಕ್ಕೆ ಇದೆ.
ಒಂದು ಕಾಲದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸುಸಜ್ಜಿತ ಜಿಲ್ಲಾ ಆಸ್ಪತ್ರೆ, ಅದರ ಪಕ್ಕದಲ್ಲೇ ವೈದ್ಯರ ವಸತಿ ಗೃಹಗಳು ಇರುತ್ತಿದ್ದವು. ಬಡವರಿಗೂ, ಶ್ರೀಮಂತರಿಗೂ ಸರಕಾರಿ ಆಸ್ಪತ್ರೆಗಳೇ ಗತಿಯಾಗಿದ್ದವು. ತಾಲೂಕು ಆಸ್ಪತ್ರೆಗಳು, ಕಮ್ಯೂನಿಟಿ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಂದು ಕಾಲದಲ್ಲಿ ಸದಾ ತೆರೆದಿರುತ್ತಿದ್ದವು. ಎ.ಎನ್.ಎಂ.ಗಳು, ನರ್ಸ್‌ಗಳು, ವೈದ್ಯರು ಕೇಂದ್ರ ಸ್ಥಾನದಲ್ಲೇ ಇದ್ದು ಸದಾ ಸೇವೆಗೆ ಸಿದ್ಧರಾಗಿರುತ್ತಿದ್ದರು. ಶಿಕ್ಷಣ, ಅರೋಗ್ಯ ಮತ್ತು ಪೊಲೀಸ್ ಇಲಾಖೆಯ ಖಾಲಿಯಾದ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದವು.
ಈಗ ಸರಕಾರಿ ವೈದ್ಯಕೀಯ ವ್ಯವಸ್ಥೆಯೇ ಬದಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಣಗುಟ್ಟುತ್ತಿವೆ. ಕಮ್ಯೂನಿಟಿ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಸಿಬ್ಬಂದಿ ಬಂದಾಗ ಕಾರ್ಯ ನಿರ್ವಹಿಸುತ್ತವೆ. ಯಾವ ವೈದ್ಯರೂ ಗ್ರಾಮೀಣ ಭಾಗದಲ್ಲಿ ವಾಸ ಮಾಡಲು ಇಷ್ಟ ಪಡುವುದಿಲ್ಲ. ಕಾಟಾಚಾರಕ್ಕೆ ಗ್ರಾಮೀಣ ಸೇವೆ ಮಾಡುತ್ತಾರೆ. ಕಡ್ಡಾಯ ಗ್ರಾಮೀಣ ಸೇವೆಯ ಕಾನೂನು ಇರದಿದ್ದರೆ ಯಾರೂ ಬರುವುದಿಲ್ಲ. ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿವೆ. ವೈದ್ಯರು ಇದ್ದರೆ ನರ್ಸ್ ಇರುವುದಿಲ್ಲ. ಎಲ್ಲರೂ ಇದ್ದಾಗ ಔಷಧಿ ಇರುವುದಿಲ್ಲ. ಕೆಲವೊಮ್ಮೆ ಲ್ಯಾಬ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ.
ಕರ್ನಾಟಕದಲ್ಲಿ ಒಟ್ಟು 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅವುಗಳ ಪೈಕಿ 2,132 ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೇವಲ 400 ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಗರ ಪ್ರದೇಶದಲ್ಲಿವೆ. ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಕಮ್ಯೂನಿಟಿ ಆರೋಗ್ಯ ಕೇಂದ್ರಗಳು ಅಸ್ತಿತ್ವದಲ್ಲಿವೆಯಾದರೂ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವಲ್ಲಿ ವಿಫಲವಾಗಿವೆ. ಗ್ರಾಮೀಣ ಭಾಗದ ಜನತೆಗೆ ಈಗಲೂ ತಜ್ಞ ವೈದ್ಯರಿಗಿಂತ ಆರ್.ಎಂ.ಪಿ.ಗಳೇ ಆಪದ್ಬಾಂಧವರಾಗಿ ಒದಗಿ ಬರುತ್ತಾರೆ. ಅವರ ಗುಳಿಗೆ, ಇಂಜೆಕ್ಷನ್ ದಿವ್ಯ ಔಷಧಿ. ಅವರ ಸಲಹೆ ಮೇರೆಗೆ ಜಿಲ್ಲಾ-ತಾಲೂಕು ಕೇಂದ್ರದಲ್ಲಿನ ತಜ್ಞ ವೈದ್ಯರನ್ನು ಭೇಟಿ ಮಾಡುತ್ತಾರೆ. ವಿಪರ್ಯಾಸವೆಂದರೆ, ಸರಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಹಾಗೂ ಸರಕಾರಿ ಆಸ್ಪತ್ರೆಗಳು ವಿಶ್ವಾಸಾರ್ಹತೆ ಕಳೆದುಕೊಂಡ ದಿನಮಾನಗಳಲ್ಲೂ ಸರಕಾರಿ ಮೆಡಿಕಲ್ ಕಾಲೇಜುಗಳು ಬೇಡಿಕೆ ಉಳಿಸಿಕೊಂಡಿವೆ.
ವೈದ್ಯಕೀಯ ವೃತ್ತಿಗೆ ಬರಲು ಇಚ್ಛಿಸುವ ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವುದಿಲ್ಲ. ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿ ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಬಳ್ಳಾರಿ ಮೆಡಿಕಲ್, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಂಬಲಿಸುತ್ತಾರೆ. ಅವರ ಮೆರಿಟ್‌ಗೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗದೇ ಹೋದಾಗ ಅನಿವಾರ್ಯವಾಗಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹೋಗುತ್ತಾರೆ.
ಕರ್ನಾಟಕ ಸರಕಾರ ಸರಕಾರಿ ಮೆಡಿಕಲ್ ಕಾಲೇಜುಗಳ ನಿರ್ವಹಣೆಯಲ್ಲಿ ತೋರುವ ಕಾಳಜಿ ಸರಕಾರಿ ಆಸ್ಪತ್ರೆಗಳ ನಿರ್ವಹಣೆಯಲ್ಲಿ ಯಾಕೆ ತೋರುತ್ತಿಲ್ಲ? ಈ ಮೊದಲು ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇರುವ ಎಲ್ಲ ಪದವಿ ಸೀಟುಗಳು ಮೆರಿಟ್ ವಿದ್ಯಾರ್ಥಿಗಳ ಪಾಲಾಗುತ್ತಿದ್ದವು. ಕಳೆದ ವರ್ಷದಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲರು ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ಒಟ್ಟು ಸೀಟುಗಳ ಪೈಕಿ ಪ್ರತಿಶತ ಹದಿನೈದರಷ್ಟು ಎನ್.ಆರ್.ಐ. ಅಭ್ಯರ್ಥಿಗಳಿಗೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಅದು ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳಿಗೆ. ಸರಕಾರಿ ಮೆಡಿಕಲ್ ಕಾಲೇಜುಗಳಿಂದ ಪ್ರತಿವರ್ಷ ಸಾವಿರಾರು ಎಂ.ಬಿ.ಬಿ.ಎಸ್. ಪದವೀಧರರು ಹೊರ ಬರುತ್ತಾರೆ. ಅವರ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಸರಕಾರ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಆದರೆ ಅವರು ಯಾರೂ ಕರ್ನಾಟಕದ ಹಳ್ಳಿಗಳಿಗೆ ಹೋಗಿ ವೈದ್ಯಕೀಯ ಸೇವೆ ನೀಡಬೇಕೆಂದು ಬಯಸುವುದಿಲ್ಲ. ಕರ್ನಾಟಕ ಸರಕಾರದ ಎಲ್ಲ ಸೌಲಭ್ಯ ಪಡೆದುಕೊಂಡು ವೈದ್ಯಕೀಯ ಪದವಿ ಪೂರೈಸುವ ಪ್ರತಿಭಾವಂತರು ಒಂದೋ ಸ್ನಾತಕೋತ್ತರ ಪದವಿಗೆ ಸೇರಲು ಹಾತೊರೆಯುತ್ತಾರೆ. ಇಲ್ಲ ಖಾಸಗಿ ನರ್ಸಿಂಗ್ ಹೋಮ್ ಅಥವಾ ಕಾರ್ಪೊರೇಟ್ ಆಸ್ಪತ್ರೆ ಸೇರಿಕೊಳ್ಳಲು ಬಯಸುತ್ತಾರೆ. ಮೆರಿಟ್ ಕೋಟಾದಲ್ಲೇ ಸ್ನಾತಕೋತ್ತರ ಪದವಿ ಪೂರೈಸುವ ವೈದ್ಯ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಲು ಆಸೆ ಪಡುತ್ತಾರೆ. ಆ ಅವಕಾಶ ಸಿಗದಿದ್ದರೆ ಕರ್ನಾಟಕದಲ್ಲೇ ಅದರಲ್ಲೂ ಬೆಂಗಳೂರು ನಗರದ ಪ್ರತಿಷ್ಠಿತ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಬಳಕ್ಕೆ ಕಾರ್ಯ ನಿರ್ವಹಿಸುತ್ತಾರೆ.
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೆರಿಟ್ ಸೀಟು ಪಡೆದುಕೊಂಡು ಪದವಿ-ಸ್ನಾತಕೋತ್ತರ ಪದವಿ ಪೂರೈಸುವವರು ಸರಕಾರಿ ಆಸ್ಪತ್ರೆಗಳತ್ತ ತಿರುಗಿ ನೋಡುವುದಿಲ್ಲ. ಕರ್ನಾಟಕ ಸರಕಾರವೇ ಜನತೆಯ ತೆರಿಗೆ ಹಣದಲ್ಲಿ ತಯಾರು ಮಾಡುವ ಅಸಂಖ್ಯಾತ ತಜ್ಞ ವೈದ್ಯರು ಸಾಮಾನ್ಯ ಜನತೆಯ ಸೇವೆಗೆ ಲಭ್ಯವಾಗುವುದಿಲ್ಲ.
ಕರ್ನಾಟಕ ಸರಕಾರ ಮೈಸೂರು, ಕಲಬುರಗಿ, ಧಾರವಾಡ ನಗರಗಳಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡಗಳನ್ನು ನಿರ್ಮಿಸಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ನೀಡಿದೆ. ದುರಂತವೆಂದರೆ ತಜ್ಞ ವೈದ್ಯರು ಸರಕಾರಿ ಸಂಬಳಕ್ಕೆ ಕೆಲಸ ಮಾಡಲು ಬರುತ್ತಿಲ್ಲ. ಅವರಿಗೆ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈನ ಪ್ರತಿಷ್ಠಿತ ಕಾರ್ಪೊರೇಟ್ ಆಸ್ಪತ್ರೆಗಳು ನೀಡುವ ದುಬಾರಿ ಪ್ಯಾಕೇಜ್ ಆಕರ್ಷಣೆ ಮಾಡುತ್ತಿವೆ. ಬೆಂಗಳೂರು ಜಯದೇವ ಹೇಗೋ ತಜ್ಞ ವೈದ್ಯರ ಆಕರ್ಷಣೆಯ ಕೇಂದ್ರವಾಗಿದೆ. ಬೆಂಗಳೂರು ಜಯದೇವ ಸಂಸ್ಥೆ ಇಡೀ ಏಶ್ಯದಲ್ಲೇ ಅತ್ಯುತ್ತಮ ಸಂಸ್ಥೆ ಎಂದು ಹೆಸರು ಮಾಡಿರುವುದರಿಂದ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಇನ್ನು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ದುಬಾರಿ ಕಾಪಿಟೇಷನ್ ಫೀಸು ನೀಡಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸುವ ವೈದ್ಯಕೀಯ ವಿದ್ಯಾರ್ಥಿಗಳು ನರ್ಸಿಂಗ್ ಹೋಮ್ ತೆರೆಯಲು ಉತ್ಸುಕರಾಗಿರುತ್ತಾರೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಮೆರಿಟ್ ಸೀಟು ಪಡೆದುಕೊಂಡು ಹೊರಬರುವವರೇ ಇವರಿಗೆ ತಜ್ಞ ವೈದ್ಯರಾಗಿ ಲಭ್ಯವಾಗುತ್ತಾರೆ.
ಸರಕಾರಿ ಆಸ್ಪತ್ರೆಗಳ ಬಗ್ಗೆ, ಬಡ ರೋಗಿಗಳ ಬಗ್ಗೆ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅತ್ಯುತ್ಸಾಹ ತೋರುತ್ತಿರುವುದರಿಂದ ಅವುಗಳ ಕುರಿತು ಬರೆಯುವ ಪ್ರಮೇಯ ಬಂದಿದೆ. ಇಡೀ ವೈದ್ಯಕೀಯ ವ್ಯವಸ್ಥೆಯೇ ದಂಧೆಕೋರರ ಕೈಗೆ ಸಿಲುಕಿ ನರಳುತ್ತಿರುವ ಇಂದಿನ ದಿನಮಾನಗಳಲ್ಲಿ ಸರಕಾರಿ ಆಸ್ಪತ್ರೆಗಳ ಬಗ್ಗೆ ಬರೆಯುವುದು, ಚಿಂತಿಸುವುದು ಹಾಸ್ಯಾಸ್ಪದ ಎನಿಸಿಕೊಳುತ್ತದೆ.
ನಮ್ಮ ಪಕ್ಕದ ಕೇರಳ ಪುಟ್ಟ ರಾಜ್ಯ. ಅಲ್ಲಿಯ ವೈದ್ಯಕೀಯ ವ್ಯವಸ್ಥೆ ಅನುಕರಣೀಯ. ಕೇರಳದಲ್ಲಿ ಪಾರಂಪರಿಕ ವೈದ್ಯ ಚಿಕಿತ್ಸೆಗೆ ಹೆಚ್ಚು ಬೇಡಿಕೆಯಿದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳು, ಕಾರ್ಪೊರೇಟ್ ಆಸ್ಪತ್ರೆಗಳು ಇವೆ. ಶ್ರೀಮಂತರು ಅವುಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಲಭ್ಯ ಇರುವುದು ಗಮನಾರ್ಹ. ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸಿಬ್ಬಂದಿ ಸೇವೆಗೆ ಸಜ್ಜಾಗಿರುತ್ತಾರೆ. ಪಾರಂಪರಿಕ ವೈದ್ಯ ಪದ್ಧತಿ ಜೊತೆಗೆ ಆಧುನಿಕ ಆಸ್ಪತ್ರೆಗಳು ಅಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿವೆ. ಕೇರಳ ರಾಜ್ಯದ ಜನಸಂಖ್ಯೆ ಕಡಿಮೆ ಇರುವುದು ಅವರಿಗೆ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಸರಳವಾಗಿರಬಹುದು.
ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂರಚನೆ ವ್ಯವಸ್ಥಿತವಾಗಿದೆ. ಒಟ್ಟು ವ್ಯವಸ್ಥೆಯನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿ ಯು.ಟಿ. ಖಾದರ್ ಅವರಿಗೆ ನಿಜವಾಗಲೂ ಜನಸಾಮಾನ್ಯರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಇರಾದೆ ಇದ್ದರೆ ವ್ಯವಸ್ಥೆ ಸರಿಪಡಿಸಬೇಕು.
ಗ್ರಾಮೀಣ ಪ್ರದೇಶದಲ್ಲಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ, ಕಮ್ಯೂನಿಟಿ ಆರೋಗ್ಯ ಕೇಂದ್ರಗಳ ಕಟ್ಟಡಗಳು ಆಸ್ಪತ್ರೆಯ ಭಾವನೆ ಮೂಡಿಸುವುದಿಲ್ಲ. ಕಮಿಷನ್ ಆಸೆಗೆ ಕಟ್ಟಿದ ಕಟ್ಟಡಗಳಾಗಿವೆ ಎಂಬುದನ್ನು ಮನಗಾಣಬೇಕು. ತಾಲೂಕು ಆಸ್ಪತ್ರೆಗಳು ಸೇರಿದಂತೆ ಕೆಳಹಂತದ ವೈದ್ಯಕೀಯ ವ್ಯವಸ್ಥೆಯಲ್ಲಿ ಗುಣಾತ್ಮಕ ಸುಧಾರಣೆ ಕಾಣಬೇಕೆಂದರೆ ಅತ್ಯುತ್ತಮ ಕಟ್ಟಡ, ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಎಂ.ಬಿ.ಬಿ.ಎಸ್. ಪದವಿ ಪೂರೈಸಿದ ವೈದ್ಯರು ಬರುವುದಿಲ್ಲ ಎಂಬುದು ಮನದಟ್ಟಾದ ಸಂಗತಿ. ಅದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ವೈದ್ಯಕೀಯ ವೃತ್ತಿಯ ಕನಸು ಕಾಣುವ ಎಲ್ಲರಿಗೂ ಎಂ.ಬಿ. ಬಿ.ಎಸ್. ಸೀಟು ಸಿಗುವುದಿಲ್ಲ. ಮೂರು ಅಥವಾ ನಾಲ್ಕು ವರ್ಷದ ವೈದ್ಯಕೀಯ ಡಿಪ್ಲೊಮಾ ಕೋರ್ಸ್ ಆರಂಭಿಸಿದರೆ ಗ್ರಾಮೀಣ ಭಾಗದ ಅಗತ್ಯಗಳನ್ನು ಪೂರೈಸುತ್ತಾರೆ. ಬಿ.ಎಸ್.ಸಿ. ನರ್ಸಿಂಗ್ ಕೋರ್ಸ್ ಪೂರೈಸಿದವರನ್ನು ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ಹಿಂದೆ ಗ್ರಾಮೀಣ ಪ್ರದೇಶದ ವೈದ್ಯಕೀಯ ಚಿಕಿತ್ಸೆಯ ಅಗತ್ಯಗಳನ್ನು ಎ.ಎನ್.ಎಂ.ಗಳೇ ನಿಭಾಯಿಸುತ್ತಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಮ್ಯೂನಿಟಿ ಆರೋಗ್ಯ ಕೇಂದ್ರಗಳನ್ನು ವೈದ್ಯಕೀಯದಲ್ಲಿ ಡಿಪ್ಲೊಮಾ ಪಡೆದವರಿಂದಲೇ ನಿರ್ವಹಿಸಬಹುದು. ಇವರನ್ನು ಕಿರಿಯ ವೈದ್ಯ ಎಂದೂ ಕರೆಯಬಹುದು. ಈ ಕಿರಿಯ ವೈದ್ಯರ ನೇತೃತ್ವದಲ್ಲಿ ಐದಾರು ಜನರ ತಂಡ ಕಟ್ಟಿದರೆ ಗ್ರಾಮೀಣ ಭಾಗದ ಜನತೆಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಬಹುದು. ಗ್ರಾಮೀಣ ಭಾಗದ ವೈದ್ಯಕೀಯ ಸೇವೆ ಉತ್ತಮ ಪಡಿಸಬೇಕೆಂದರೆ ಉತ್ತರ ದಾಯಿತ್ವ ವಹಿಸುವುದು ಮತ್ತು ಪ್ರಾಮಾಣಿಕ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ. ಔಷಧಿ ಖರೀದಿ ಮತ್ತು ವೈದ್ಯಕೀಯ ಉಪಕರಣ ಖರೀದಿಯಲ್ಲಿ ಪಾರದರ್ಶಕ ವ್ಯವಸ್ಥೆ ಅಳವಡಿಸಬೇಕು. ಪ್ರಾಮಾಣಿಕ ವ್ಯವಸ್ಥೆ ಬರದ ಹೊರತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಾರದು.
ತಾಲೂಕು ಆಸ್ಪತ್ರೆಗಳನ್ನು ಎಂ.ಬಿ.ಬಿ.ಎಸ್. ಪದವೀಧರರ ನೇತೃತ್ವದಲ್ಲಿ ಮುನ್ನಡೆಸಬಹುದು. ತಜ್ಞ ವೈದ್ಯರ ಸೇವೆಯನ್ನು ಜಿಲ್ಲಾ ಮತ್ತು ವಿಶೇಷ ಆಸ್ಪತ್ರೆಗಳಲ್ಲಿ ಮಾತ್ರ ಬಳಸಿಕೊಳ್ಳಬೇಕು. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಮಾದರಿಯಲ್ಲಿ ತಜ್ಞ ವೈದ್ಯರ ಸೇವೆಯನ್ನು ಬಳಸಿಕೊಳ್ಳಬೇಕು.
ಖಾಸಗಿ ನರ್ಸಿಂಗ್ ಹೋಮ್ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳ ನಡುವೆ ಸರಕಾರಿ ಆಸ್ಪತ್ರೆಗಳು ಅಸ್ತಿತ್ವ ಉಳಿಸಿಕೊಳ್ಳಬೇಕೆಂದರೆ ಉಚಿತ ಮತ್ತು ಹಣದ ಸೇವೆ ಎರಡನ್ನೂ ಪರಿಚಯಿಸಬೇಕು. ಕಾರ್ಪೊರೇಟ್ ಮತ್ತು ಖಾಸಗಿ ನರ್ಸಿಂಗ್ ಹೋಮ್‌ಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಸರಕಾರಿ ಆಸ್ಪತ್ರೆಗಳು ಪ್ರೀತಿಗೆ ಪಾತ್ರ ಆಗುವುದು ಸುಲಭ. ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗುತ್ತದೆ ಎಂಬ ಭರವಸೆ ಮೂಡಿಸಿದರೆ ಹಣ ಉಳ್ಳವರು ಸರಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಸೇವೆ ಮತ್ತು ವ್ಯಾಪಾರ ಎರಡೂ ಪರಿಕಲ್ಪನೆಗಳನ್ನು ಸೇರಿಸಿದರೆ ಸರಕಾರಿ ಆಸ್ಪತ್ರೆಗಳು ಲಾಭ ಮಾಡಬಹುದು. ಆ ಲಾಭದಲ್ಲಿ ತಜ್ಞ ವೈದ್ಯರಿಗೆ ಅತ್ಯುತ್ತಮ ಸಂಬಳ ನೀಡಬಹುದು. ಹಾಗೆ ಮಾಡಬೇಕಾದರೆ ಸರಕಾರಿ ಆಸ್ಪತ್ರೆಗಳು ಅತ್ಯುತ್ತಮ ಸೇವೆಗೆ ಬ್ರಾಂಡ್ ಆಗಬೇಕು. ಅಧಿಕಾರದಲ್ಲಿರುವ ರಾಜಕಾರಣಿಗಳು, ಚಲನಚಿತ್ರ ನಟರು, ಹಿರಿಯ ಸರಕಾರಿ ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆರಂಭಿಸಿದರೆ ಸಹಜವಾಗಿಯೇ ಅದು ಖ್ಯಾತಿ ಪಡೆಯುತ್ತದೆ. ನಂದಿನಿ ಉತ್ಪನ್ನಗಳು ಮತ್ತು ಕೆ.ಎಂ.ಎಫ್. ಜನಪ್ರಿಯತೆ, ವಿಶ್ವಾಸಾರ್ಹತೆ ಗಳಿಸಿದ್ದು ಹೀಗೆಯೇ.
ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯದೆ ಇರುವುದಕ್ಕೆ ಮುಖ್ಯ ಕಾರಣ ತಜ್ಞ ವೈದ್ಯರ ಖಾಸಗಿ ಪ್ರಾಕ್ಟೀಸ್. ಸರಕಾರಿ ಆಸ್ಪತ್ರೆ, ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಬಹುತೇಕ ತಜ್ಞ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ. ಖಾಸಗಿ ಪ್ರಾಕ್ಟೀಸ್ ಮಾಡುವುದರಿಂದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಹಲವು ವೈದ್ಯರು ತಮ್ಮ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆ ನೀಡುತ್ತಾರೆ. ಖಾಸಗಿ ಪ್ರಾಕ್ಟೀಸ್‌ಗೆ ಕಡಿವಾಣ ಬೀಳದ ಹೊರತು ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನಿರೀಕ್ಷಿಸಲಾಗದು.
ಕರ್ನಾಟಕ ಸರಕಾರ ಗ್ರಾಮೀಣ ಪ್ರದೇಶದಲ್ಲಿನ ನಕಲಿ ವೈದ್ಯರನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಿದೆ. ಆದರೆ ನಗರ ಪ್ರದೇಶಗಳಲ್ಲಿ ಪರ್ಯಾಯ ವೈದ್ಯಕೀಯ ಚಿಕಿತ್ಸೆಯ ಹೆಸರಲ್ಲಿ ಅಸಂಖ್ಯಾತ ನಕಲಿ ವೈದ್ಯರು ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ. ಬಣ್ಣದ ಥೆರಪಿ, ಕೈರೋಪ್ರಾಕ್ಟರ್, ಸಂಧಿವಾತ ಮುಂತಾದ ರೋಗಗಳಿಗೆ ಚಿಕಿತ್ಸೆ ನೀಡುವುದಾಗಿ ಯೂಟ್ಯೂಬ್ ಗಳಲ್ಲಿ ಸುಳ್ಳು ಪ್ರಚಾರ ಮಾಡಿಕೊಂಡು ಅಮಾಯಕ ರೋಗಿಗಳನ್ನು ವಂಚಿಸುತ್ತಿದ್ದಾರೆ. ಎಲ್ಲೂ ಗುಣವಾಗದ ಕಾಯಿಲೆಯನ್ನು ಅತ್ಯುತ್ತಮ ಚಿಕಿತ್ಸೆ ಮೂಲಕ ಗುಣಪಡಿಸುತ್ತೇವೆ ಎಂದು ಹೇಳಿ ಹಣ ಮಾಡುತ್ತಿದ್ದಾರೆ. ಯಾವುದೇ ವಿದ್ಯಾರ್ಹತೆ ಇಲ್ಲದೆ ಸುಳ್ಳು ಭರವಸೆ ನೀಡಿ ಅಮಾಯಕ ರೋಗಿಗಳನ್ನು ವಂಚಿಸುತ್ತಿರುವ ಬುರುಡೆ ವೈದ್ಯರನ್ನು ನಿಯಂತ್ರಿಸಲು ಸರಕಾರ ಮುಂದಾಗಬೇಕು. ಗರ್ಭದಲ್ಲಿರುವ ಶಿಶು ಹತ್ಯೆ ಈಗಲೂ ನಿಂತಿಲ್ಲ. ಶಿಶು ಹತ್ಯೆ, ನಕಲಿ ವೈದ್ಯರ ಹಾವಳಿ, ಪರ್ಯಾಯ ಚಿಕಿತ್ಸೆ ನೀಡುವವರ ಹಾವಳಿ ಮತ್ತು ವೈದ್ಯಕೀಯ ಚಿಕಿತ್ಸೆಯ ಹೆಸರಲ್ಲಿ ಮಸಾಜ್ ಕೇಂದ್ರಗಳು ಎಗ್ಗಿಲ್ಲದೆ ದುಡ್ಡು ಮಾಡುತ್ತಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಸರಕಾರಿ ಆಸ್ಪತ್ರೆಗಳ ಕಾರ್ಯಕ್ಷಮತೆ ಹೆಚ್ಚಿಸಬೇಕೆಂದರೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಮುಂದಾಗಬೇಕು. ಖಾಸಗಿ ಪ್ರಾಕ್ಟೀಸ್ ಸಂಪೂರ್ಣ ನಿಲ್ಲಬೇಕು. ನಗರ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಬೇಕು. ನೆಗಡಿ, ಜ್ವರ, ಕೆಮ್ಮುನಂತಹ ಸಾಮಾನ್ಯ ಕಾಯಿಲೆಗಳಿಗೆ ಸ್ಥಳೀಯ ಹಂತದಲ್ಲೇ ಸಮರ್ಪಕ ಚಿಕಿತ್ಸೆ ದೊರೆತರೆ ಬಡ ರೋಗಿಗಳು ಖಾಸಗಿ ಮತ್ತು ನಕಲಿ ವೈದ್ಯರಿಗೆ ಗಿರಾಕಿಯಾಗುವುದು ತಪ್ಪುತ್ತದೆ. ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಕರ್ನಾಟಕದಲ್ಲಿ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿರುವ ಗ್ರಾಮೀಣ ಪ್ರದೇಶದವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವುದಿಲ್ಲವೆಂದರೆ ಅದು ವೈದ್ಯಕೀಯ ವ್ಯವಸ್ಥೆ ತಲೆ ತಗ್ಗಿಸಬೇಕಾದ ಸಂಗತಿ.
ಸರಕಾರಿ ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತರೇ ನೇಮಕಗೊಳ್ಳುತ್ತಾರೆ. ಆದರೆ ನೌಕರಿಗೆ ಸೇರಿದ ಮೇಲೆ ವ್ಯವಸ್ಥೆಯ ದೋಷದಿಂದ ಮೈಗಳ್ಳರಾಗುತ್ತಾರೆ. ಹಾಗೆಯೇ ಪ್ರತಿಭಾವಂತ ವೈದ್ಯರು ಸರಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ತಜ್ಞತೆಯ ಫಲ ಬಡ ರೋಗಿಗಳಿಗೆ ಸಿಗುವುದಿಲ್ಲ. ಕಾರಣ ಆ ತಜ್ಞ ವೈದ್ಯರ ಖಾಸಗಿ ಪ್ರಾಕ್ಟೀಸ್ ಮತ್ತು ಅತಿಯಾದ ಧನದಾಹಿ ಗುಣ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಯು.ಟಿ. ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ಆರೋಗ್ಯ ಇಲಾಖೆಗೆ ಕಾಯಕಲ್ಪ ನೀಡಿ ಬಡಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಿದರೆ ಖಾದರ್ ಅವರ ಶ್ರಮ ಸಾರ್ಥಕವಾಗುತ್ತದೆ. ಖಾದರ್ ಅವರ ಅತ್ಯುತ್ಸಾಹ ಮೆಚ್ಚುವಂತಹದು. ಆದರೆ ಔಷಧಿ ಮತ್ತು ವೈದ್ಯಕೀಯ ಮಾಫಿಯಾ ಬಲಶಾಲಿಯಾಗಿದೆ. ಇಂತಹ ಶಕ್ತಿಶಾಲಿಯಾದ ವೈದ್ಯಕೀಯ ಮಾಫಿಯಾವನ್ನು ಅತ್ಯಂತ ಜಾಣತನದಿಂದ ನಿಭಾಯಿಸಬೇಕಿದೆ.
ಈ ಹಿಂದೆ ಬಸವರಾಜ ಹೊರಟ್ಟಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಎಲ್ಲ ಶಿಕ್ಷಕರು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯುವಂತೆ ನಿಯಮ ಮಾಡಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯಲ್ಲಿ ಕೆಲವರು ಮಹಾನಗರಗಳಲ್ಲೇ ನೆಲೆಯೂರಿದ್ದಾರೆ. ಸ್ಥಾನಪಲ್ಲಟ ಮಾಡುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯಂತ್ರವನ್ನು ಕ್ರಿಯಾಶೀಲಗೊಳಿಸಬೇಕು. ಸಾಮಾನ್ಯ ಜನರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆತರೆ ಸಹಜವಾಗಿಯೇ ಸರಕಾರದ ಬಗ್ಗೆ ಗೌರವ ಭಾವನೆ ಮೂಡುತ್ತದೆ. ಯು.ಟಿ. ಖಾದರ್ ಅವರ ಅಧಿಕಾರಾವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನೋಪಯೋಗಿ ಕೆಲಸ ಮಾಡುವಂತಾಗಲಿ.






