Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ರಾಜ್ಯ ರಾಜಕಾರಣದ ಸಂಕ್ರಮಣ ಕಾಲ

ರಾಜ್ಯ ರಾಜಕಾರಣದ ಸಂಕ್ರಮಣ ಕಾಲ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ30 May 2026 9:30 AM IST
share
ರಾಜ್ಯ ರಾಜಕಾರಣದ ಸಂಕ್ರಮಣ ಕಾಲ

ಕರ್ನಾಟಕ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿದೆ. ಕರ್ನಾಟಕದ ಬಿಜೆಪಿ ಈಗ ಹೆಚ್ಚು ಮತೀಯವಾದಿಯಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬೇರೆ ಸೆಕ್ಯುಲರ್ ಪಕ್ಷಗಳು ಉಳಿದಿಲ್ಲ. ಕಾಂಗ್ರೆಸ್ ವಿರೋಧಿ ಅಲೆ ನೇರ ಬಿಜೆಪಿಗೆ ಲಾಭ ತಂದು ಕೊಡುತ್ತದೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ದಲಿತ ಮುಖ್ಯಮಂತ್ರಿಯ ಅಗತ್ಯವಿತ್ತು.

ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರಂಥ ಹಿರಿಯರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ ಮತೀಯ ಶಕ್ತಿಗಳ ಅಟ್ಟಹಾಸ ನಿಯಂತ್ರಿಸಬಹುದಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಿ ಬಂದರೆ ಆಡಳಿತ ವಿರೋಧಿ ಅಲೆಯ ಪ್ರಮಾಣ ತಗ್ಗಬಹುದಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೂತನ ಮುಖ್ಯಮಂತ್ರಿ ಆಯ್ಕೆಗೆ ಹಾದಿ ಸುಗಮಗೊಳಿಸಿದ್ದಾರೆ. 2013ರಿಂದ 2018ರವರೆಗೆ ಐದು ವರ್ಷಗಳ ಕಾಲ ಮತ್ತು 2023ರಿಂದ 2026ರವರೆಗೆ ಮೂರು ವರ್ಷ ಹದಿನೈದು ದಿನಗಳ ಕಾಲ -ಒಟ್ಟು ಎಂಟು ವರ್ಷ ಹದಿನೈದು ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ ಹಿಂದಿನ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ದಾಖಲೆ ಡಿ. ದೇವರಾಜ ಅರಸು ಅವರದಾಗಿತ್ತು. ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಮೊದಲ ಮುಖ್ಯಮಂತ್ರಿ. ಹಿಂದುಳಿದ ಸಮುದಾಯಕ್ಕೆ ಸೇರಿದ ನಾಲ್ಕನೇ ಮುಖ್ಯಮಂತ್ರಿ.

ಅಷ್ಟು ಮಾತ್ರವಲ್ಲ; ಅತಿ ಹೆಚ್ಚು ಅವಧಿಗೆ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 2009ರಿಂದ 2013ರವರೆಗೆ ನಾಲ್ಕು ವರ್ಷಗಳ ಕಾಲ ಮತ್ತು 2019ರಿಂದ 2023ರವರೆಗೆ ನಾಲ್ಕು ವರ್ಷಗಳು -ಒಟ್ಟು ಎಂಟು ವರ್ಷಗಳ ಕಾಲ ಅತ್ಯಂತ ಪ್ರಭಾವಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 2006ಕ್ಕೂ ಮುಂಚೆ ಜನತಾ ಪರಿವಾರದಲ್ಲಿದ್ದ ಸಿದ್ದರಾಮಯ್ಯ ಅವರು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದರು. 1983ರ ವಿಧಾನಸಭಾ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಗೆದ್ದ ಸಿದ್ದರಾಮಯ್ಯ ಅವರು ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 1985ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ರಾಮಕೃಷ್ಣ ಹೆಗಡೆ ಮತ್ತು ಎಸ್. ಆರ್. ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುವ ಭಾಗ್ಯ ಅವರದಾಗಿತ್ತು. 1989 ಮತ್ತು 1999ರ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದರು. ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಾಗಲೆಲ್ಲ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2006ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ಸಿದ್ದರಾಮಯ್ಯ ಅವರು ಕೇವಲ ಏಳು ವರ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸದಾವಕಾಶ ಪಡೆದುಕೊಂಡವರು. ಕರ್ನಾಟಕದ ರಾಜಕಾರಣಿಗಳಲ್ಲೇ ಸಿದ್ದರಾಮಯ್ಯ ಅವರು ಹೆಚ್ಚು ಅದೃಷ್ಟವಂತರು. ಎಲ್ಲಕ್ಕೂ ಮಿಗಿಲಾಗಿ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ವಿಶೇಷವಾಗಿ ಅಹಿಂದ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದರು. ಈಗ ಅಹಿಂದ ಸಮುದಾಯಗಳ ಋಣ ತೀರಿಸುವ ಸಾಮಾಜಿಕ ಹೊಣೆಗಾರಿಕೆ ಅವರ ಮೇಲಿತ್ತು. ಅಲ್ಪಸಂಖ್ಯಾತ ಸಮುದಾಯದವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವ ಮನಸ್ಥಿತಿ ಕಾಂಗ್ರೆಸ್ ಹೈಕಮಾಂಡ್‌ಗೆ ಸದ್ಯಕ್ಕಂತೂ ಇದ್ದಂತಿಲ್ಲ. ಹಿಂದುಳಿದ ಸಮುದಾಯದ ಹಲವು ಜನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.ಮುಂದಿನ ವರ್ಷಕ್ಕೆ ಸ್ವಾತಂತ್ರ್ಯ ಲಭಿಸಿ ಎಂಭತ್ತು ವರ್ಷಗಳಾಗಲಿವೆ. ‘‘ಕರ್ನಾಟಕದಲ್ಲಿ... ಎಂಬ ಹೆಸರಿನ ನಾನು ಮುಖ್ಯಮಂತ್ರಿಯಾಗಿ’’ ಅಂತ 39 ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದು ಬಾರಿಯೂ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶ ಪಡೆಯಲಿಲ್ಲ. ಕರ್ನಾಟಕವನ್ನು ಅತ್ಯಂತ ಪ್ರಗತಿಪರ ರಾಜ್ಯ ಎಂದು ಹೇಳುತ್ತೇವೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಪ್ರಭಾವ ಕರ್ನಾಟಕದ ಸಾಮಾಜಿಕ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಸಮಾಜವಾದಿ, ದಲಿತ, ಕಮ್ಯುನಿಸ್ಟ್ ಚಳವಳಿಗಳು ಕರ್ನಾಟಕದಲ್ಲಿ ಸುದೀರ್ಘ ಕಾಲ ಕ್ರಿಯಾಶೀಲವಾಗಿದ್ದವು. ದಲಿತಪರ ಕಾಳಜಿಯುಳ್ಳ ನಾಲ್ವಡಿ ಕೃಷ್ಣರಾಜ ಅವರು ಆಡಳಿತ ನಡೆಸಿದ ನೆಲವಿದು. ಎಲ್ಲಕ್ಕೂ ಮಿಗಿಲಾಗಿ ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾದವರು. ದಲಿತ ಸಮುದಾಯದ ಅರ್ಹ ವ್ಯಕ್ತಿಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವುದು ಸಾಮಾಜಿಕ ನ್ಯಾಯಕ್ಕೆ ಬಲ ತುಂಬಲು ಅನಿವಾರ್ಯವಾಗಿದೆ ಎಂದೇ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲರೂ ಮನಗಾಣಲಿಲ್ಲ. ಸಿದ್ದರಾಮಯ್ಯ ಅವರೇ ಇನ್ನು ಎರಡು ವರ್ಷಗಳ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದು ಚುನಾವಣೆ ಎದುರಿಸಿದರೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ. 1985ರಿಂದ ಇಲ್ಲಿಯವರೆಗೆ ಯಾವ ಪಕ್ಷವೂ ಕರ್ನಾಟಕದಲ್ಲಿ ಸತತ ಎರಡು ಅವಧಿಗೆ ಜನಾದೇಶ ಪಡೆದುಕೊಂಡ ನಿದರ್ಶನ ಇಲ್ಲ. ಆಡಳಿತ ವಿರೋಧಿ ನಿಲುವು ತಳೆಯುವುದು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮತದಾರರ ಮನಸ್ಥಿತಿಯೇ ಆಗಿದೆ.

ಸಿದ್ದರಾಮಯ್ಯ ಅವರ ಜಾಗದಲ್ಲಿ ಲಿಂಗಾಯತ, ಒಕ್ಕಲಿಗ ಅಥವಾ ಬೇರೆ ಯಾವ ಸಮುದಾಯದ ವ್ಯಕ್ತಿಯನ್ನು ಕೂರಿಸಿದರೂ 2028ರ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪರ ಇರುತ್ತದೆ ಎಂದು ಭಾವಿಸಲಾಗದು. ಹೀಗಿರುವಾಗ ದಲಿತ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಯಾವ ಹಾನಿಯೂ ಇರುತ್ತಿರಲ್ಲ. ಬದಲಿಗೆ ಅಹಿಂದ ಮತದಾರರ ಋಣ ತೀರಿಸಿದಂತಾಗುತ್ತಿತ್ತು. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ಪಕ್ಷ ದಲಿತ ಸಮುದಾಯದ ಹಿತ ಕಾಪಾಡುವ ಏಕೈಕ ಪಕ್ಷ ಎಂಬ ಮಾತಿಗೆ ಮತ್ತಷ್ಟು ಬಲ ಬರುತ್ತಿತ್ತು. ಸ್ವಾತಂತ್ರ್ಯ ಲಭಿಸಿದ ಆರಂಭದ ದಿನಗಳಲ್ಲಿ ದಲಿತ ಮುಖ್ಯಮಂತ್ರಿ ಪರಿಕಲ್ಪನೆ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ 25-10-1947ರಲ್ಲಿ ಕೆ. ಚಂಗಲ್ ರಾಯರೆಡ್ಡಿಯವರು ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಆಗ ಕರ್ನಾಟಕ ಏಕೀಕರಣಗೊಂಡಿರಲಿಲ್ಲ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಭೂಭಾಗಗಳು ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಭಾಗವಾಗಿದ್ದವು. 30-03-1952ರವರೆಗೆ ಕೆ. ಚಂಗಲ್ ರಾಯರೆಡ್ಡಿಯವರೇ ಐದು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 30-03-1952ರಿಂದ 19-08-1956ರವರೆಗೆ ನಾಲ್ಕು ವರ್ಷಗಳ ಕಾಲ ಕೆಂಗಲ್ ಹನುಮಂತಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ಏಕೀಕರಣವಾಗಿದ್ದು. ನಂತರ ಭಾಷಾವಾರು ಪ್ರಾಂತಗಳ ರಚನೆಯಾಗಿ, ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಆರಂಭದ ಒಂದೂವರೆ ತಿಂಗಳ ಮಟ್ಟಿಗೆ (19-08-1956ರಿಂದ 31-10-1956ರವರೆಗೆ )ಕಡಿದಾಳ ಮಂಜಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. 1956ರಿಂದ 1958ರವರೆಗೆ ಮತ್ತು 1962ರಿಂದ 1968ರವರೆಗೆ ಎಸ್. ನಿಜಲಿಂಗಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಎಸ್. ನಿಜಲಿಂಗಪ್ಪ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ದರಿಂದ ಮೂರು ತಿಂಗಳ ಮಟ್ಟಿಗೆ ಎಸ್. ಆರ್. ಕಂಠಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. 1958ರಿಂದ 1962ರವರೆಗೆ ನಾಲ್ಕು ವರ್ಷಗಳ ಕಾಲ ಬಿ.ಡಿ. ಜತ್ತಿಯವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. 1968ರಲ್ಲಿ ಎಸ್. ನಿಜಲಿಂಗಪ್ಪ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ತಮ್ಮ ಉತ್ತರಾಧಿಕಾರಿಯನ್ನಾಗಿ ಅತ್ಯಂತ ಕಿರಿಯ ವಯಸ್ಸಿನ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುತ್ತಾರೆ. 1968ರಿಂದ 1971ರವರೆಗೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಿದ್ದರ ಪರಿಣಾಮವಾಗಿ ಡಿ. ದೇವರಾಜ ಅರಸು ಅವರು ಮುನ್ನೆಲೆಗೆ ಬರುತ್ತಾರೆ. ದೇವರಾಜ ಅರಸು ಪ್ರವರ್ಧಮಾನಕ್ಕೆ ಬರುವವರೆಗೆ ಏಕೀಕರಣಗೊಂಡ ಕರ್ನಾಟಕದಲ್ಲಿ ಲಿಂಗಾಯತ ಮುಖ್ಯಮಂತ್ರಿಗಳದೇ ಕಾರುಬಾರು ಇತ್ತು. ಮೊದಲ ಬಾರಿಗೆ ದೇವರಾಜ ಅರಸು ಅವರು ಕರ್ನಾಟಕದಲ್ಲಿ ಅಹಿಂದ ಮತ ಸಮೀಕರಣ ಮಾಡಿ ಜನಾದೇಶ ಪಡೆದು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ.

ದೇವರಾಜ ಅರಸು ನಾಯಕತ್ವ ಇರದಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಳ್ಳುತ್ತಿತ್ತು. ಅರವತ್ತರ ದಶಕದಲ್ಲೇ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣ ಶುರುವಾಗಿತ್ತು. 1972 ಮತ್ತು 1978ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತಂದುಕೊಟ್ಟ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲಬೇಕು. ಹಾಗೆ ನೋಡಿದರೆ 1975ರಲ್ಲಿ ಕಾಂಗ್ರೆಸ್ ಅಧಿನಾಯಕಿ ತುರ್ತು ಪರಿಸ್ಥಿತಿ ಹೇರಿದ್ದರಿಂದ ದೇಶಾದ್ಯಂತ ಕಾಂಗ್ರೆಸ್ ಹೆಸರು ಕೆಡಿಸಿಕೊಂಡು ಜನರ ಅವಕೃಪೆಗೆ ಒಳಗಾಗಿತ್ತು. ಆದರೆ ಅರಸು ಕಾರಣಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಶ್ವಾಸಾರ್ಹತೆ ಉಳಿಸಿಕೊಂಡಿತ್ತು. 1980ರಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಚಾಡಿಕೋರರ ಮಾತಿಗೆ ಕಿವಿಗೊಟ್ಟು ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿ ಮಾಡುತ್ತದೆ. ಅವರ ಬದಲಿಗೆ ಬ್ರಾಹ್ಮಣ ಸಮುದಾಯದ ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುತ್ತದೆ. ಗುಂಡೂರಾವ್ ಅವರ ಮೂರು ವರ್ಷದ ಅಧಿಕಾರಾವಧಿ ಕಾಂಗ್ರೆಸ್ ಪಾಲಿಗೆ ಶಾಪವಾಗಿ ಪರಿಣಮಿಸುತ್ತದೆ. 1983ರಿಂದ 1989ರವರೆಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬರುತ್ತದೆ. ರಾಮಕೃಷ್ಣ ಹೆಗಡೆ ಐದು ವರ್ಷಗಳ ಕಾಲ, ಎಸ್.ಆರ್. ಬೊಮ್ಮಾಯಿ ಎಂಟು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾಂಗ್ರೆಸ್ ಮರು ಜೀವ ಪಡೆದದ್ದು 1989ರಲ್ಲಿ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ. ಹಿಂದುಳಿದ ಸಮುದಾಯದ ಎಸ್. ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿಯವರು ತಲಾ ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಎಚ್.ಡಿ. ದೇವೇಗೌಡರು ಒಂದೂವರೆ ವರ್ಷ, ಜೆ. ಎಚ್. ಪಟೇಲರು ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಸ್. ಎಂ. ಕೃಷ್ಣ ಐದು ವರ್ಷಗಳ ಕಾಲ, ಧರಂಸಿಂಗ್ ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಎಚ್.ಡಿ. ಕುಮಾರಸ್ವಾಮಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ಆಡಳಿತ ನಡೆಸಿದ್ದು ಎರುಡುವರೆ ವರ್ಷ ಮಾತ್ರ. ಯಡಿಯೂರಪ್ಪ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರೂ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದು ಐದು ವರ್ಷಗಳ ಕಾಲ. ಡಿ. ವಿ. ಸದಾನಂದಗೌಡರು ಹನ್ನೊಂದು ತಿಂಗಳು, ಜಗದೀಶ್ ಶೆಟ್ಟರ್ ಒಂದು ವರ್ಷ ಎರಡು ತಿಂಗಳು, ಬಸವರಾಜ ಬೊಮ್ಮಾಯಿ ಒಂದು ವರ್ಷ ಹತ್ತು ತಿಂಗಳು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕರ್ನಾಟಕದಲ್ಲಿ ಮೇಲುಜಾತಿಯ ನಾಯಕತ್ವ ಮಾತ್ರ ಚುನಾವಣೆಯಲ್ಲಿ ಗೆಲುವು ತಂದು ಕೊಡುತ್ತದೆ ಎಂಬ ಮಿಥ್ ಬಲವಾಗಿ ಬೇರೂರಿತ್ತು. ಅದನ್ನು ಸುಳ್ಳು ಮಾಡಿದವರು ಹಿಂದುಳಿದ ಸಮುದಾಯದ ನಾಯಕರಾದ ಡಿ. ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರು. 1972 ಮತ್ತು 1978ರ ವಿಧಾನಸಭಾ ಚುನಾವಣೆಗಳನ್ನು ದೇವರಾಜ ಅರಸು ನೇತೃತ್ವದಲ್ಲಿ ಎದುರಿಸಲಾಗಿತ್ತು. ಆ ಎರಡೂ ಚುನಾವಣೆಗಳಲ್ಲಿ ದೇವರಾಜ ಅರಸು ಜನಾದೇಶ ಪಡೆದುಕೊಂಡಿದ್ದರು. 2013ರಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿತ್ತು. ಆಗಲೂ ಸಿದ್ದರಾಮಯ್ಯ ನೇತೃತ್ವಕ್ಕೆ ಮತದಾರ ಮಾನ್ಯ ಮಾಡಿದ್ದರು. 2023ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಪಷ್ಟ ಜನಾದೇಶ ಪಡೆದುಕೊಂಡಿದ್ದರು. ಹಿಂದುಳಿದ ನಾಯಕರಿಗೆ ಮಣೆ ಹಾಕಿ, ನೇತೃತ್ವ ನೀಡಿದ ಕಾಂಗ್ರೆಸ್ ಪಕ್ಷ ಈಗ ಕರ್ನಾಟಕದಲ್ಲಿ ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ಸಾಮಾಜಿಕ ನ್ಯಾಯದ ವಿಸ್ತರಣೆಗೆ ಮುಂದಾಗಬೇಕಿತ್ತು. ಅಷ್ಟಕ್ಕೂ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳಿಂದ ದಲಿತ ಮುಖ್ಯಮಂತ್ರಿ ಅವಕಾಶ ನಿರೀಕ್ಷಿಸಲಾಗದು.

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತದೆ. ಕಾಂಗ್ರೆಸ್ ಪಕ್ಷದಿಂದ ದಲಿತ ಮತಗಳನ್ನು ದೂರ ಮಾಡಲು ಈ ತಂತ್ರ ಅನುಸರಿಸುತ್ತದೆ. 1980ರಲ್ಲಿ ಸ್ಥಾಪಿತವಾದ ಭಾರತೀಯ ಜನತಾ ಪಕ್ಷ ಕೇವಲ ಒಂದು ವರ್ಷದ ಅವಧಿಗೆ ಬಂಗಾರು ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು. ಈಗ ಬಿಜೆಪಿ ದಿಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಸೇರಿದಂತೆ ಒಟ್ಟು ಹದಿನೈದು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹದಿನೇಳು ರಾಜ್ಯಗಳ ಪೈಕಿ ಯಾವೊಂದು ರಾಜ್ಯದಲ್ಲಿಯೂ ಬಿಜೆಪಿ ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಸಿದ್ಧಾಂತ ಎತ್ತಿ ಹಿಡಿದಿಲ್ಲ. ಇನ್ನು ಐದು ರಾಜ್ಯಗಳಲ್ಲಿ ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಆ ಯಾವೊಂದು ರಾಜ್ಯದಲ್ಲೂ ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಿಲ್ಲ.

ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷ ಅಷ್ಟೋ ಇಷ್ಟೋ ದಲಿತಪರ ಕಾಳಜಿ ತೋರಿದೆ. ಭಾರತದಲ್ಲಿ ಮೊದಲ ದಲಿತ ಮುಖ್ಯಮಂತ್ರಿ ದಾಮೋದರಂ ಸಂಜೀವಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. 1960ರಿಂದ 1962ರವರೆಗೆ ಇವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಪಡೆದಿದ್ದರು. ಬೋಲಾ ಪಾಸ್ವಾನ್ ಶಾಸ್ತ್ರೀ ಬಿಹಾರ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ. ಮಾಂಝಿ ಅಲ್ಪ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಜಗನ್ನಾಥ್ ಪಹಾಡಿಯ ರಾಜಸ್ಥಾನ್ ರಾಜ್ಯದ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿ. ಚರಣಜಿತ್ ಸಿಂಗ್ ಚೆನ್ನಿಯವರನ್ನು ಕಾಂಗ್ರೆಸ್ ಪಕ್ಷ ಅಲ್ಪ ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಸುಶೀಲ್‌ಕುಮಾರ್ ಶಿಂಧೆಯವರನ್ನು ಒಂದು ವರ್ಷದ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಿತ್ತು. ಬಹುಜನ ಪಕ್ಷದ ಸ್ಥಾಪಕ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕ ಕಾನ್ಶೀರಾಮ್ ಅವರ ಛಲದಿಂದ ಉತ್ತರ ಪ್ರದೇಶದಂತಹ ಬಹು ದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಮಾಯಾವತಿಯವರು ಪಡೆದುಕೊಂಡಿದ್ದರು. ಉತ್ತರ ಪ್ರದೇಶದ ಮೊದಲ ಮತ್ತು ಕೊನೆಯ ದಲಿತ ಮುಖ್ಯಮಂತ್ರಿ ಮಾಯಾವತಿಯವರೇ. ಮಾಯಾವತಿಯವರನ್ನು ಆರಂಭದಲ್ಲಿ ಬೆಂಬಲಿಸಿದ ಬಿಜೆಪಿ ಅವರ ಅಧಃಪತನಕ್ಕೂ ಕಾರಣವಾಯಿತು.

ಕರ್ನಾಟಕದಲ್ಲಿ ಎಂದೋ ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ರಾಜ್ಯದ ಘನತೆ ಹೆಚ್ಚುವಂತೆ ಮಾಡಬಹುದಿತ್ತು. ಬಿ. ಬಸವಲಿಂಗಪ್ಪ, ಎನ್. ರಾಚಯ್ಯ, ಬಿ. ರಾಚಯ್ಯ, ಕೆ.ಎಚ್. ರಂಗನಾಥ್, ಶ್ರೀನಿವಾಸ್ ಪ್ರಸಾದ್ ಮುಂತಾದವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಎಲ್ಲ ಅರ್ಹತೆ ಹೊಂದಿದ್ದರು. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ಅವರೆಲ್ಲ ಅಪಾರ ಆಡಳಿತದ ಅನುಭವ ಪಡೆದುಕೊಂಡಿದ್ದರು. ಎಲ್ಲಕ್ಕೂ ಮಿಗಿಲಾಗಿ ಪ್ರಾಮಾಣಿಕರು, ದಕ್ಷರು, ಕ್ರಿಯಾಶೀಲರಾಗಿದ್ದರು. ಭಾರತದ ಸಂವಿಧಾನ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಈಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲು ಜಾತಿಯ ಯಾವ ನಾಯಕರಿಗೂ ಕಡಿಮೆ ಇಲ್ಲದ ಆಡಳಿತಾನುಭವ ಅವರಿಗೆ ಇತ್ತು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಎರಡು ದಶಕಗಳ ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು. ಚರಿತ್ರೆಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಈಗ ಕಾಂಗ್ರೆಸ್‌ಗಿದ್ದರೂ ಸರಿಪಡಿಸಿಕೊಳ್ಳಲಿಲ್ಲ.

ಕರ್ನಾಟಕ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿದೆ. ಕರ್ನಾಟಕದ ಬಿಜೆಪಿ ಈಗ ಹೆಚ್ಚು ಮತೀಯವಾದಿಯಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬೇರೆ ಸೆಕ್ಯುಲರ್ ಪಕ್ಷಗಳು ಉಳಿದಿಲ್ಲ. ಕಾಂಗ್ರೆಸ್ ವಿರೋಧಿ ಅಲೆ ನೇರ ಬಿಜೆಪಿಗೆ ಲಾಭ ತಂದು ಕೊಡುತ್ತದೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ದಲಿತ ಮುಖ್ಯಮಂತ್ರಿಯ ಅಗತ್ಯವಿತ್ತು.

ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರಂಥ ಹಿರಿಯರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ ಮತೀಯ ಶಕ್ತಿಗಳ ಅಟ್ಟಹಾಸ ನಿಯಂತ್ರಿಸಬಹುದಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಿ ಬಂದರೆ ಆಡಳಿತ ವಿರೋಧಿ ಅಲೆಯ ಪ್ರಮಾಣ ತಗ್ಗಬಹುದಿತ್ತು. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯಕ್ಕೆ ಬರುವ ಇರಾದೆ ಹೊಂದಿರದಿದ್ದರೆ, ಬೇರೆ ದಲಿತ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬಹುದಿತ್ತು.

ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಡಾ. ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನಿಭಾಯಿಸುವ ಎಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸುದೀರ್ಘ ರಾಜಕೀಯ ಅನುಭವ ಉಳ್ಳ ಕೆ. ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬಹುದಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಯುವ ಶಕ್ತಿಯ ಮೇಲೆ ನಂಬಿಕೆಯಿದ್ದರೆ ರಾಜಕೀಯ ಬದ್ಧತೆ ಮತ್ತು ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಪ್ರಿಯಾಂಕ್ ಖರ್ಗೆಯವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬಹುದಿತ್ತು. ಬಿಜೆಪಿ 45 ವರ್ಷದ ನಿತಿನ್ ನಬಿನ್ ಅವರಿಗೆ ರಾಷ್ಟ್ರಿಯ ಅಧ್ಯಕ್ಷ ಸ್ಥಾನ ನೀಡಿರುವಾಗ ಕಾಂಗ್ರೆಸ್ ಯುವ ನಾಯಕತ್ವವನ್ನು ಬೆಂಬಲಿಸುವುದರಲ್ಲಿ ತಪ್ಪಿರುತ್ತಿರಲಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಗೆ ಅರ್ಹರಾದವರು ಇದ್ದಾರೆ. ವಿಶೇಷವಾಗಿ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ದಲಿತ ಮುಖ್ಯಮಂತ್ರಿ ಕನಸು ನನಸಾಗಿಸಲು ತುಸು ತ್ಯಾಗಕ್ಕೆ ಸಿದ್ದರಾಗಬೇಕಿತ್ತು. ಲಿಂಗಾಯತ ಮತ್ತು ಒಕ್ಕಲಿಗ ನಾಯಕತ್ವಕ್ಕೆ 2028ರ ವಿಧಾನಸಭಾ ಚುನಾವಣೆಯ ಹೊಣೆಗಾರಿಕೆ ವಹಿಸಬೇಕು. ಆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮುಖ್ಯಮಂತ್ರಿ ಹುದ್ದೆ ಆ ಸಮುದಾಯಗಳಿಗೆ ನೀಡಬಹುದಿತ್ತು. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದಲಿತ ವ್ಯಕ್ತಿಯ ಹೆಸರನ್ನು ಬಿಂಬಿಸಿ ಜನಾದೇಶ ಪಡೆದುಕೊಳ್ಳುವಷ್ಟು ಜನತಂತ್ರ ಪ್ರೌಢ ಸ್ಥಿತಿ ತಲುಪಿಲ್ಲ. ಈಗ ಕರ್ನಾಟಕದ ಸಮಾಜ ಹಿಂದುಳಿದ ವರ್ಗದ ನೇತೃತ್ವ ಒಪ್ಪಿಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಈಗ ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿ ಅವರು ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡರೆ ಮುಂದೊಂದು ದಿನ ದಲಿತ ನಾಯಕತ್ವವನ್ನು ಎಲ್ಲ ಸಮುದಾಯಗಳು ಒಪ್ಪಿಕೊಳ್ಳಬಹುದಿತ್ತು. ಆದರೆ ಇವೆಲ್ಲವೂ ಈಗ ಮುಗಿದ ಮಾತಾಗುತ್ತಿದೆ.

Tags

Transition PeriodState Politics
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X