ಯುದ್ಧ: ಮನುಕುಲದ ಮಹಾ ವೈರಿಗಳು

ಪ್ರಪಂಚದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಸಮರ್ಥವಾಗಿ ವಿರೋಧಿಸುವ ಶಕ್ತಿಯೇ ಇಲ್ಲವೆಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ನಂಬಿದ್ದಾರೆ. ಅಮೆರಿಕದ ವಿರುದ್ಧ ಸಣ್ಣ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಟ್ರಂಪ್ ಸುಂಕ ವಿಧಿಸುವ, ನೆರವು ಹಿಂಪಡೆಯುವ ಬೆದರಿಕೆ ಹಾಕುವ ಹಂತ ತಲುಪಿದ್ದಾರೆ. ರಶ್ಯ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ಅದು ಸೂಪರ್ ಶಕ್ತಿಶಾಲಿ ದೇಶವಾಗಿತ್ತು. ಅಮೆರಿಕಕ್ಕೆ ಸೋವಿಯತ್ ಒಕ್ಕೂಟದ ಭಯವಿತ್ತು. ಸೋವಿಯತ್ ಒಕ್ಕೂಟದ ಬಲ ಕುಂದುತ್ತಿರುವಂತೆ ಅಮೆರಿಕದ ಹುಚ್ಚಾಟಗಳು ಜಾಸ್ತಿಯಾದವು. ಅಮೆರಿಕದ ಜೊತೆಗೆ ಇಸ್ರೇಲ್ ಸ್ನೇಹ ಗಾಢವಾಗುತ್ತಿದ್ದಂತೆ ಸರ್ವಾಧಿಕಾರಿ ಧೋರಣೆ ವಿಕೃತ ರೂಪ ಪಡೆಯತೊಡಗಿದೆ.
ನಿಜದ ನಾಯಕ
ಯುದ್ಧ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ ಜ್ವಾಲಾಮುಖಿ ಕಾಣಬಲ್ಲ
ಅದಕ್ಕೆ ಅ ನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ
-ಲಾವೋತ್ಸೆ (ಚೀನಾದ ಪ್ರಾಚೀನ ಕವಿ )
ಮಹಾ ಯುದ್ಧ ಇನ್ನೂ ಆರಂಭವಾಗಿಲ್ಲ. ಆರಂಭವಾಗುವುದು ಬೇಡ. ಜಗತ್ತಿನಲ್ಲಿ ಈ ಹಿಂದೆ ಸಂಭವಿಸಿದ ಎರಡು ಮಹಾಯುದ್ಧಗಳನ್ನು ಮತ್ತು ಆ ಯುದ್ಧಗಳಲ್ಲಿನ ಸಾವು ನೋವುಗಳನ್ನು ನೆನಪಿಸಿಕೊಂಡರೆ ಯುದ್ಧ ವಿರೋಧಿ ಮನಸ್ಥಿತಿ ಹೆಪ್ಪುಗಟ್ಟುತ್ತದೆ.
ಈಗ ಮೂರನೇ ಮಹಾಯುದ್ಧ ಸಂಭವಿಸಬಹುದೇನೋ ಎಂಬ ಭಯಾನಕ ವಾತಾವರಣ ನಿರ್ಮಾಣವಾಗಿದೆ. ಸಣ್ಣ ಪುಟ್ಟ ಕದನಗಳು, ಯುದ್ಧ ವಿರಾಮಗಳು, ರಾಜಿ ಒಪ್ಪಂದಗಳು ಸರ್ವೇ ಸಾಮಾನ್ಯ. ಎಂಟು ವರ್ಷಗಳ ಕಾಲ ನಡೆದ ಇರಾನ್-ಇರಾಕ್ ಯುದ್ಧ ಕೂಡಾ ಮೂರನೇ ಮಹಾ ಯುದ್ಧಕ್ಕೆ ವೇದಿಕೆ ನಿರ್ಮಿಸಲಿಲ್ಲ. ಕಳೆದ ವರ್ಷ ಆರಂಭವಾದ ರಶ್ಯ-ಉಕ್ರೆನ್ ಯುದ್ಧ ಪರಸ್ಪರ ಹೆದರಿಸುವ ತಂತ್ರದ ಭಾಗವಾಗಿಯೇ ಪರ್ಯಾವಸಾನದತ್ತ ಸಾಗಿದೆ. ಯುದ್ಧಗಳು ಎರಡು ದೇಶಗಳ ಸೈನಿಕರ ನಡುವೆ ನಡೆಯುತ್ತಿದ್ದವು. ಆದರೆ ಒಂದು ದೇಶದ ಮುಖ್ಯಸ್ಥನನ್ನು ಗುರಿಯಾಗಿಸಿ ನಡೆದ ಯುದ್ಧ ಸಹಜವಾಗಿಯೇ ಸಾರ್ವಜನಿಕರ ಗಮನ ಸೆಳೆಯುತ್ತದೆ. ಮೊದಲನೇ ಮಹಾಯುದ್ಧದಲ್ಲಿ ಆಸ್ಟ್ರೋ-ಹಂಗೇರಿಯನ್ ರಾಜಕುಮಾರ್ ಆರ್ಚುದ್ಕೆ ಫ್ರಾಂಜ ಫರ್ಡಿನಾಂಡ್ ಅವರ ಹತ್ಯೆಯಾಗಿತ್ತು. ಆದರೆ ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಸರ್ವಾಧಿಕಾರಿ, ನಾಝಿ ದೊರೆ ಅಡಾಲ್ಫ್ ಹಿಟ್ಲರ್‌ನನ್ನು ಹತ್ಯೆ ಮಾಡಿರಲಿಲ್ಲ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಮತ್ತು ಮಿತ್ರಪಕ್ಷಗಳ ಒಕ್ಕೂಟಕ್ಕೆ ಹೀನಾಯ ಸೋಲಾಗಿದ್ದರಿಂದ ಹಿಟ್ಲರ್‌ನೇ ಆತ್ಮ ಹತ್ಯೆ ಮಾಡಿಕೊಂಡ.
ಈಗ ನಡೆಯುತ್ತಿರುವ ಯುದ್ಧ ಇರಾನ್ ಮಹಾನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಭೀಕರ ಹತ್ಯೆಯಿಂದ ಆರಂಭವಾಗಿದೆ. ಖಾಮಿನೈ ಅವರ ಜೊತೆಗೆ ಅವರ ಕುಟುಂಬದ ಸದಸ್ಯರು, ಹಿರಿಯ ರಾಜತಾಂತ್ರಿಕ ಅಧಿಕಾರಿಗಳು, ಸೈನ್ಯದ ಕೆಲವು ಪ್ರಮುಖರನ್ನು ಹತ್ಯೆ ಮಾಡಲಾಗಿದೆ. ಇರಾನ್‌ನ ಮಹಾ ನಾಯಕ ಖಾಮಿನೈ ಅವರ ಹತ್ಯೆಯಾಗಿದೆ ಎಂದು ದೃಢಪಡಿಸಿದವರೇ ಇಸ್ರೇಲ್ ಮುಖ್ಯಸ್ಥ ನೆತನ್ಯಾಹು ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಂದರೆ ಆ ಎರಡೂ ದೇಶಗಳ ಮುಖ್ಯಸ್ಥರೇ ವ್ಯವಸ್ಥಿತ ಸಂಚು ರೂಪಿಸಿ ಇರಾನ್ ಮಹಾ ನಾಯಕ ಖಾಮಿನೈ ಅವರ ಹತ್ಯೆ ಮಾಡಿದ್ದಾರೆ ಎಂಬುದು ಸ್ವಯಂ ಸ್ಪಷ್ಟ. ಇಸ್ರೇಲ್-ಅಮೆರಿಕದ ವಿರುದ್ಧದ ಯುದ್ಧ ಇರಾನ್ ದೇಶಕ್ಕೆ ಅನಿವಾರ್ಯವಾಗಿಸಿದೆ. ಖಾಮಿನೈ ಅವರ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಯುದ್ಧಕ್ಕೆ ಧುಮುಕಿದೆ. ರಶ್ಯ, ಚೀನಾ ಮತ್ತು ಭಾರತದ ರಾಯಭಾರಿ ಕಚೇರಿಗಳು ಇರಾನ್‌ನ ಮಹಾನಾಯಕ ಖಾಮಿನೈ ಅವರ ಹತ್ಯೆಯನ್ನು ಖಂಡಿಸಿವೆ. ಅಮೆರಿಕ ಇಸ್ರೇಲ್ ದೇಶದ ಮುಖ್ಯಸ್ಥರು ಖಾಮಿನೈ ಅವರನ್ನು ಭಯೋತ್ಪಾದಕ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.
ಅಮೆರಿಕದ ಸ್ವಭಾವದಲ್ಲಿ ತಾನು ಮಹಾನ್ ಎಂಬ ಅಹಮಿಕೆ ಇದೆ. ನಿಜವಾದ ಅರ್ಥದಲ್ಲಿ ಅಮೆರಿಕ ಹಿರಿಯಣ್ಣನ ಪಾತ್ರ ನಿರ್ವಹಿಸಿದ್ದರೆ ಜಗತ್ತಿನ ಬಡತನ, ನಿರುದ್ಯೋಗದಂತಹ ಸಮಸ್ಯೆಗಳಿಗೆ ಎಂದೋ ಪರಿಹಾರ ಕಂಡುಕೊಳ್ಳಬಹುದಿತ್ತು. ಅಮೆರಿಕದ ಅಪಾರ ಪ್ರಮಾಣದ ಸಂಪತ್ತು ಬಡ ರಾಷ್ಟ್ರಗಳಿಗೆ ಕಾದಾಡಲು ಮದ್ದು ಗುಂಡು ರೂಪದಲ್ಲಿ ಪೂರೈಕೆಯಾಗುತ್ತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಂತಹ ದೇಶಗಳು ಆಮೆರಿಕದ ನೆರವಿನಿಂದಲೇ ಮಿಲ್ಟ್ರಿ ಬಲ ಸಂಪಾದಿಸಿದ್ದು.
ಪ್ರಪಂಚದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಸಮರ್ಥವಾಗಿ ವಿರೋಧಿಸುವ ಶಕ್ತಿಯೇ ಇಲ್ಲವೆಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ನಂಬಿದ್ದಾರೆ. ಅಮೆರಿಕದ ವಿರುದ್ಧ ಸಣ್ಣ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಟ್ರಂಪ್ ಸುಂಕ ವಿಧಿಸುವ, ನೆರವು ಹಿಂಪಡೆಯುವ ಬೆದರಿಕೆ ಹಾಕುವ ಹಂತ ತಲುಪಿದ್ದಾರೆ. ರಶ್ಯ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ಅದು ಸೂಪರ್ ಶಕ್ತಿಶಾಲಿ ದೇಶವಾಗಿತ್ತು. ಅಮೆರಿಕಕ್ಕೆ ಸೋವಿಯತ್ ಒಕ್ಕೂಟದ ಭಯವಿತ್ತು. ಸೋವಿಯತ್ ಒಕ್ಕೂಟದ ಬಲ ಕುಂದುತ್ತಿರುವಂತೆ ಅಮೆರಿಕದ ಹುಚ್ಚಾಟಗಳು ಜಾಸ್ತಿಯಾದವು. ಅಮೆರಿಕದ ಜೊತೆಗೆ ಇಸ್ರೇಲ್ ಸ್ನೇಹ ಗಾಢವಾಗುತ್ತಿದ್ದಂತೆ ಸರ್ವಾಧಿಕಾರಿ ಧೋರಣೆ ವಿಕೃತ ರೂಪ ಪಡೆಯತೊಡಗಿದೆ. ಚೀನಾ ಶಕ್ತಿಶಾಲಿ ದೇಶ ಎಂಬ ಪ್ರತೀತಿ ಬೆಳೆಸಿಕೊಂಡಿದೆ. ಆದರೆ ಅದರ ಶಕ್ತಿ ಅಮೆರಿಕದ ಹುಚ್ಚಾಟಗಳಿಗೆ ಕಡಿವಾಣ ಹಾಕುವಷ್ಟು ಬಲಶಾಲಿಯಾಗಿದೆ ಎಂಬುದನ್ನು ಖಾತ್ರಿ ಪಡಿಸುವ ಪುರಾವೆಗಳಿಲ್ಲ. ಅಷ್ಟಕ್ಕೂ ಚೀನಾ ದೇಶ ಸದ್ಯ ತನ್ನ ಮಾರುಕಟ್ಟೆ ವಿಸ್ತರಣೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಅಮೆರಿಕದ ಯಜಮಾನಿಕೆ ವಿರುದ್ಧ ನಿರಂತರ ಧ್ವನಿ ಎತ್ತಿದ್ದು ಮತ್ತು ಎದೆ ಸೆಟಿಸಿ ನಿಂತಿದ್ದು ಇರಾನ್ ದೇಶ. ಖಾಮಿನೈ ಅವರು ಇರಾನ್ ದೇಶದ ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ಯಾವತ್ತೂ ಅಮೆರಿಕಕ್ಕೆ ಒತ್ತೆ ಇಟ್ಟು ಆಡಳಿತ ನಡೆಸಲಿಲ್ಲ. ಆ ಒಂದು ಕಾರಣಕ್ಕೆ ಅಮೆರಿಕ ಖಾಮಿನೈ ಅವರನ್ನು ಮುಗಿಸುವ ಹುನ್ನಾರ ನಡೆಸಿತು. ಡೊನಾಲ್ಡ್ ಟ್ರಂಪ್ ಹುಚ್ಚಾಟದ ಜೊತೆಗೆ ಇಸ್ರೇಲ್ ಮುಖ್ಯಸ್ಥನ ಕುತಂತ್ರ ಸೇರಿ ಇರಾನ್ ಪ್ರಾಬಲ್ಯ ಕುಗ್ಗಿಸುವ ಸಂಚು ರೂಪಿತವಾಗಿದೆ. ಮೇಲ್ನೋಟಕ್ಕೆ ಇರಾನ್-ಇಸ್ರೇಲ್, ಅಮೆರಿಕದ ಸಂಘರ್ಷವನ್ನು ಶಿಯಾ-ಸುನ್ನಿ ಜಗಳವೆಂದು ಬಿಂಬಿಸುವ ಯತ್ನ ನಡೆದಿದೆ. ಆದರೆ ಆಳದಲ್ಲಿ ಅಮೆರಿಕದ ಶಕ್ತಿ ಪ್ರದರ್ಶನದ ಹುನ್ನಾರ ಅಡಗಿದೆ. ಅಷ್ಟು ಮಾತ್ರವಲ್ಲ ಇಸ್ರೇಲ್ ದೇಶದ ಸಮಯ ಸಾಧಕತನ ನಿಚ್ಚಳವಾಗಿ ಗೋಚರಿಸುತ್ತದೆ. ಅಮೆರಿಕ ಮತ್ತದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹುಂಬತನವನ್ನು ಇಸ್ರೇಲ್ ಮುಖ್ಯಸ್ಥ ತನ್ನ ಸ್ವಾರ್ಥ ಸಾಧನೆಗೆ ಜಾಣತನದಿಂದ ಬಳಸಿಕೊಳ್ಳುತ್ತಿದ್ದಾರೆ. ಇಸ್ರೇಲ್ ಕುಂತಂತ್ರದ ಆಳ ಅಗಲ ವಿಸ್ತಾರದ ಅರಿವಿಲ್ಲದ ದೇಶಗಳು ಇರಾನ್ ವಿರೋಧಿ ನಿಲುವು ಅನುಸರಿಸುತ್ತಿವೆ. ಗಲ್ಫ್ ದೇಶಗಳ ಅವಕಾಶವಾದಿ ನಿಲುವಿಗೆ ಇಸ್ರೇಲ್ ಹೆಣೆದ ಜಾಲ ಕಾರಣ ಎನ್ನುವುದು ಮುಂದೊಂದು ದಿನ ಮನವರಿಕೆಯಾಗುತ್ತದೆ.
ಎರಡು ದೇಶಗಳ ನಡುವಿನ ರಾಜತಾಂತ್ರಿಕ ಒಪ್ಪಂದಗಳು, ಮಾತುಕತೆ ವಿಫಲವಾದಾಗ ಬೆದರಿಕೆಯ ತಂತ್ರವಾಗಿ, ಮಿಲ್ಟ್ರಿ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಯುದ್ಧಗಳನ್ನು ಅನಿವಾರ್ಯ ಎಂದು ಭಾವಿಸಿ ಕಾದಾಡಿ ಸುಸ್ತಾದ ಸಾವಿರ ನಿದರ್ಶನಗಳು ದೊರೆಯುತ್ತವೆ. ಮೊದಲು ಯುದ್ಧಗಳು ದೇಶದ ಗಡಿಯಲ್ಲಿ ಸಂಭವಿಸುತ್ತಿದ್ದವು.
ಈಗ ನಡೆಯುತ್ತಿರುವ ಯುದ್ಧವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಸ್ರೇಲ್ ಮತ್ತು ಅಮೆರಿಕದ ರಾಕ್ಷಸಿ ಪ್ರವೃತ್ತಿ ಎದ್ದು ಕಾಣುತ್ತದೆ. ಇರಾನ್ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಯುದ್ಧ ಮುಂದುವರಿಸಿದೆ. ಆದರೆ ಇಸ್ರೇಲ್, ಅಮೆರಿಕ ದೇಶಗಳು ಇರಾನ್ ದೇಶದ ಅಮಾಯಕ ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿ ವಿಕೃತಿ ಮೆರೆಯುತ್ತಿವೆ.
ಇರಾನ್ ದೇಶವನ್ನು ಗುಲಾಮಿ ಸ್ಥಿತಿಯಲ್ಲಿ ನೋಡಬೇಕೆಂಬುದು ಅಮೆರಿಕದ ಬಹುದೊಡ್ಡ ಅಭಿಲಾಷೆ. ಇಸ್ರೇಲ್ ದೇಶ ಸಮಯ ಸಾಧಕತನ ಮೆರೆದು ಮುಂದೊಂದು ದಿನ ಪ್ರಪಂಚದ ಯಜಮಾನನಾಗುವ ಕನಸು ಕಾಣುತ್ತಿದೆ. ನಾಝಿ ಹಿಟ್ಲರ್ ಕಾರಣಕ್ಕೆ ನಿರಾಶ್ರಿತರಾದ ಯಹೂದಿಗಳು ಇಂದು ನೆಲೆ ನೀಡಿದವರ ವಿರುದ್ಧವೇ ತಿರುಗಿ ಬಿದ್ದು ಹಿಟ್ಲರ್‌ನಂತೆ ಕನಸು ಕಾಣುತ್ತಿರುವುದು ಚರಿತ್ರೆಯ ಬಹು ದೊಡ್ಡ ವ್ಯಂಗ್ಯ. ಇಸ್ರೇಲ್ ಆರ್ಥಿಕವಾಗಿ ಶಕ್ತಿಶಾಲಿ ದೇಶವಾಗಿ ರೂಪುಗೊಂಡಿದೆ. ಇಸ್ರೇಲ್ ತನ್ನ ಸಂಪತ್ತನ್ನು ಬಡ ಮತ್ತು ತನ್ನಂತೆ ನಿರಾಶ್ರಿತರಾಗಿರುವ ಸಮುದಾಯಗಳ ಏಳ್ಗೆಗಾಗಿ ಶ್ರಮಿಸಿದ್ದರೆ ಚರಿತ್ರೆಯಿಂದ ಪಾಠ ಕಲಿತ ನಡೆ ಎನಿಸಿಕೊಳ್ಳುತ್ತಿತ್ತು. ಇರಾನ್ ಕಾರಣಕ್ಕೆ ಮಾಧ್ಯಮದವರು ಇಸ್ರೇಲ್ ದೇಶವನ್ನು, ಅದರ ನಾಯಕ ನೆತನ್ಯಾಹು ಅವರನ್ನು ಹೀರೋ ಎಂಬಂತೆ ಬಿಂಬಿಸುತ್ತಿದ್ದಾರೆ. ಪ್ರಪಂಚದ ಪಾರುಪತ್ಯ ಯಾವತ್ತೂ ಒಂದು ದೇಶ ಒಬ್ಬ ನಾಯಕನ ಹಿಡಿತದಲ್ಲಿ ಇರಲು ಸಾಧ್ಯವಿಲ್ಲ. ಆರ್ಥಿಕ, ರಾಜಕೀಯ ಸಮೀಕರಣಗಳು ಬದಲಾದಂತೆ ಜಗತ್ತಿನ ಪಾರುಪತ್ಯವೂ ಬದಲಾಗುತ್ತಾ ಹೋಗಿದೆ. ಒಂದು ಕಾಲದಲ್ಲಿ ಇಟಲಿ, ಜರ್ಮನಿ ಜಗತ್ತಿನ ದೊಡ್ಡಣ್ಣ ಎಂದು ಬಿಂಬಿಸಿಕೊಂಡವು. ಕಾಲಾನಂತರದಲ್ಲಿ ಗ್ರೇಟ್ ಬ್ರಿಟನ್ ಪ್ರಪಂಚದ ಮೇಲೆ ಆಧಿಪತ್ಯ ಸಾಧಿಸಿತ್ತು. ಆಗ ಅಮೆರಿಕ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬಾಲಂಗೋಚಿಯಂತಿತ್ತು. ಈಗ ಅಮೆರಿಕ ಜಗತ್ತಿನ ದೊಡ್ಡಣ್ಣನ ಸ್ಥಾನದಲ್ಲಿ ನಿಂತಿದೆ. ಆರ್ಥಿಕವಾಗಿ, ರಾಜಕೀಯವಾಗಿ, ಮಿಲ್ಟ್ರಿ ಶಕ್ತಿಯಾಗಿ ಬೆಳೆದು ನಿಂತಿದೆ. ಎಲ್ಲ ದೇಶಗಳು ಅಮೆರಿಕದ ಮರ್ಜಿಯಂತೆ ನಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆಗಿನ ಗ್ರೇಟ್ ಬ್ರಿಟನ್ ಈಗ ಯುನೈಟೆಡ್ ಕಿಂಗ್‌ಡಮ್ ಆಗಿ ಅಸ್ತಿತ್ವ ಉಳಿಸಿಕೊಂಡಿದೆ. ಬ್ರಿಟನ್ ಆರ್ಥಿಕವಾಗಿ ಶಕ್ತಿಶಾಲಿಯಾಗಿದ್ದರೂ ರಾಜಕೀಯವಾಗಿ ಅಮೆರಿಕದ ಹಿರಿತನ ಮಾನ್ಯ ಮಾಡಿ ಆ ದೇಶದ ಮರ್ಜಿಯಲ್ಲಿದೆ. ಇರಾನ್ ಅಮೆರಿಕದ ಈ ಯುದ್ಧದ ಸಂದರ್ಭದಲ್ಲಿ ನಿರ್ಲಿಪ್ತ ಧೋರಣೆ ಅನುಸರಿಸುವ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಬೆದರಿಸುವ ಹಂತ ತಲುಪಿದ್ದಾರೆ. ಅಲಿಪ್ತ ನೀತಿಗೆ ಈಗ ಕಿಮ್ಮತ್ತು ಇಲ್ಲ. ಯಾವುದಾದರೂ ಒಂದು ಶಕ್ತಿಯ ಪರ ನಿಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.
ಇರಾನ್-ಇಸ್ರೇಲ್, ಅಮೆರಿಕದ ಈ ಯುದ್ಧದಲ್ಲಿ ಅಪಾರ ಪ್ರಮಾಣದ ಅಸ್ತ್ರಗಳು ಹೊರಬರುತ್ತಿವೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಹುಟ್ಟಿಕೊಂಡ ವಿನಾಶಕಾರಿ ಅಸ್ತ್ರಗಳು ಮನುಷ್ಯ ಕುಲದ ವಿನಾಶವನ್ನು ಎದುರು ನೋಡುತ್ತಿವೆ. ಯುದ್ಧದಲ್ಲಿ ಪಾಲ್ಗೊಂಡ ದೇಶಗಳಿಗೆ ಜನಸಾಮಾನ್ಯರ ಹಿತಕ್ಕಿಂತಲೂ ಪ್ರತಿಷ್ಠೆ, ಶಕ್ತಿ ಪ್ರದರ್ಶನದ ವಿಕೃತಿಯೇ ಹೆಚ್ಚಾಗಿದೆ. ಮೊದಲ ಮತ್ತು ಎರಡನೇ ಮಹಾಯುದ್ಧಗಳು ಸಂಭವಿಸಿದಾಗ ಪ್ರಪಂಚದ ಅರ್ಧದಷ್ಟು ಜನಸಂಖ್ಯೆ ಜನ್ಮ ತಾಳಿರಲಿಲ್ಲ. ಎರಡನೇ ಮಹಾಯುದ್ಧವನ್ನು ಹತ್ತಿರದಿಂದ ಕಂಡವರು ಕೆಲವರು ಇರಬಹುದು. ಆದರೆ ಆ ಎರಡೂ ಯುದ್ಧಗಳ ಅನುಭವ ಕಥನಗಳು, ಕಾವ್ಯಗಳು ಓದಲು ಸಿಗುತ್ತವೆ. ಬರ್ಟ್ರೆಂಡ್ ರಸ್ಸೆಲ್, ಬ್ರೆಕ್ಟ್ ಮುಂತಾದವರು ಯುದ್ಧ ವಿರೋಧಿ ಸಾಹಿತ್ಯ ರಚಿಸಿ ಯುದ್ಧದ ಬೀಭತ್ಸತೆಯನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪರಸ್ಪರ ಯುದ್ಧ ಮಾಡಿ ಮಡಿದ ರಾಜರುಗಳ ಸಂಖ್ಯೆಯೇ ಜಾಸ್ತಿಯಾಗಿದೆ. ಅಭಿವೃದ್ಧಿಗೆ ಯುದ್ಧಗಳು ಸದಾ ಕಂಟಕವಾಗಿ ಪರಿಣಮಿಸಿವೆ.
ಪ್ರಪಂಚದಲ್ಲಿ ಮೊದಲನೆಯ ಮಹಾಯುದ್ಧ ಸಂಭವಿಸುವ ಹೊತ್ತಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿತ್ತು.ಮೊದಲನೆಯ ಮಹಾಯುದ್ಧ ಸತತ ನಾಲ್ಕು ವರ್ಷಗಳ ಕಾಲ ನಡೆಯಿತು. 1914 ಜುಲೈ 28ರಂದು ಪ್ರಾರಂಭವಾಗಿ ನವೆಂಬರ್ 11, 1918ರಲ್ಲಿ ಕೊನೆಗೊಂಡಿತು. ಆಗ ಕಾಲು ಕೆದರಿ ಯುದ್ಧಕ್ಕೆ ಆಹ್ವಾನ ನೀಡಿದವರು ಜರ್ಮನಿ ದೇಶದವರು. ಅವರೊಂದಿಗೆ ಆಶ್ಟ್ರೀಯ, ಹಂಗೇರಿ, ಒಟ್ಟೋಮನ್ ಸಾಮ್ರಾಜ್ಯಗಳು ಸಾಥ್ ನೀಡಿದ್ದವು. ಬ್ರಿಟನ್ ನೇತೃತ್ವದ ಮಿತ್ರ ಪಕ್ಷಗಳು ಮೊದಲನೆಯ ಮಹಾಯುದ್ಧವನ್ನು ಎದುರಿಸಿದವು. ಬ್ರಿಟನ್ ಜೊತೆಗೆ ಆರಂಭದಲ್ಲಿ ಫ್ರಾನ್ಸ್, ರಶ್ಯ ದೇಶಗಳು ಮಾತ್ರ ಕೈಜೋಡಿಸಿದ್ದವು. ಜರ್ಮನಿಯ ಆರ್ಭಟ ಕಂಡು ನಂತರ ಅಮೆರಿಕ, ಇಟಲಿ ದೇಶಗಳು ಸೇರ್ಪಡೆಯಾದವು. ಮೊದಲ ಮಹಾಯುದ್ಧ ಯುರೋಪ್‌ನಲ್ಲಿ ಆರಂಭವಾದರೂ ಕ್ರಮೇಣ ಜಗತ್ತಿನಾದ್ಯಂತ ಹರಡಿ ಅಪಾರ ಸಾವು ನೋವಿಗೆ ಕಾರಣವಾಯಿತು. ಆಗ ತಂತ್ರಜ್ಞಾನ ಈಗಿನಷ್ಟು ಪ್ರಗತಿ ಹೊಂದಿರಲಿಲ್ಲ. ಭಾರತದ ಸೈನಿಕರು ಬ್ರಿಟಿಷ್ ಸಾಮ್ರಾಜ್ಯ ಶಾಹಿ ಪರ ಹೋರಾಡಿ ಸಾವನ್ನಪ್ಪಿದರು. ಒಂದು ಅಂದಾಜಿನ ಪ್ರಕಾರ ಭಾರತೀಯ ಸೈನ್ಯದ ಅರುವತ್ತು ಸಾವಿರ ಜನ ಸೈನಿಕರು ಜೀವ ಕಳೆದುಕೊಂಡಿದ್ದರು. ಆಗಲೂ ಯುದ್ಧ ವಿಮಾನಗಳು, ಹೊಸ ಶಸ್ತ್ರಾಸ್ತ್ರಗಳು, ನವೀನ ಯುದ್ಧ ನೌಕೆಗಳು ಮತ್ತು ಅಪಾರ ಪ್ರಮಾಣದ ವಿಷಾನಿಲಗಳು ಬಳಕೆಯಾಗಿದ್ದವು. ಮೊದಲ ಮಹಾಯುದ್ಧದಲ್ಲಿ ಸತ್ತವರು ಮತ್ತು ಕಾಣೆಯಾದವರು ಎಂದು ಎರಡು ಬಗೆಯಲ್ಲಿ ಮಾಹಿತಿ ಲಭ್ಯ ಇದೆ. ಅದರರ್ಥ ಒಟ್ಟು ಜೀವ ಕಳೆದುಕೊಂಡವರು ಎಂದೇ ಭಾವಿಸಬೇಕು. ಜರ್ಮನಿ ಪಕ್ಷದ ಪರವಾಗಿ ಹೋರಾಡಿ ಸತ್ತವರು 33,88,000,ಕಾಣೆಯಾದವರು 36,29,000 ಜನ ಯೋಧರು. ಬ್ರಿಟಿಷ್ ಪಕ್ಷದ ಪರವಾಗಿ ಕಾದಾಡಿ ಮಡಿದವರು 55,20,000,ಕಾಣೆಯಾದವರು 41,21,000. ಈ ಅಂಕಿ ಸಂಖ್ಯೆ ಒಂದು ಅಂದಾಜು ಮಾತ್ರ. ನಿಖರವಾದ ಸಾವಿನ ಪ್ರಮಾಣ ಇದಕ್ಕಿಂತಲೂ ಹೆಚ್ಚಾಗಿರುತ್ತದೆ.
ಎರಡನೇ ಮಹಾಯುದ್ಧ ಆರು ವರ್ಷಗಳ ಕಾಲ ನಡೆಯಿತು. ಜರ್ಮನಿಯ ಅಡಾಲ್ಫ್ ಹಿಟ್ಲರ್‌ನ ಸಾಮ್ರಾಜ್ಯ ವಿಸ್ತರಣವಾದಿ ನೀತಿ ಎರಡನೇ ಮಹಾಯುದ್ಧಕ್ಕೆ ಕಾರಣವಾಗಿತ್ತು. 1939-1945ರವರೆಗೆ ನಡೆದ ಎರಡನೇ ಮಹಾಯುದ್ಧ ಭೀಕರ ಪರಿಣಾಮಗಳನ್ನು ಸೃಷ್ಟಿಸಿತು. ಮೊದಲ ಮಹಾಯುದ್ಧಕ್ಕೆ ಹೋಲಿಸಿದರೆ ಎರಡನೇ ಮಹಾಯುದ್ಧದಲ್ಲಿ ಅತ್ಯಾಧುನಿಕ ಶಸ್ತ್ರಗಳು ಬಳಕೆಯಾಗಿದ್ದವು. ಜರ್ಮನಿ, ಇಟಲಿ ಮತ್ತು ಜಪಾನ್ ಯುದ್ಧದಲ್ಲಿ ಒಂದು ಪಕ್ಷವಾಗಿದ್ದರೆ, ಗ್ರೇಟ್ ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ಇನ್ನೊಂದು ಪಕ್ಷದಲ್ಲಿದ್ದವು. ಜರ್ಮನಿ ಆಪರೇಷನ್ ಬಾರಬರೋಸಾ ಮೂಲಕ ಸೋವಿಯತ್ ಒಕ್ಕೂಟದ ಆಕ್ರಮಣ ಮಾಡಿತ್ತು. 1945ರಲ್ಲಿ ಅಮೆರಿಕವು, ಜಪಾನ್ ದೇಶದ ಹಿರೋಶಿಮಾ-ನಾಗಸಾಕಿ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿತು. ಜರ್ಮನಿ ಮತ್ತು ಜಪಾನ್ ದೇಶಗಳೇ ಯುದ್ಧ ಆರಂಭಕ್ಕೆ ಕಾರಣವಾದರೂ ಅಂತಿಮವಾಗಿ ಅವು ಸೋಲೊಪ್ಪಿಕೊಂಡು ಶರಣಾದವು. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸ್ವಯಂ ಗುಂಡಿಕ್ಕಿ ಕೊಂಡು ಹತನಾದ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಪಕ್ಷದ ಪರವಾಗಿ ಹೋರಾಡಿ ಅಂದಾಜು 1.2 ಕೋಟಿ ಜನ ಸಾವನ್ನಪ್ಪಿದರು. ಗ್ರೇಟ್ ಬ್ರಿಟನ್ ಮಿತ್ರ ಕೂಟದ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ ಅಂದಾಜು ಐದು ಕೋಟಿ ಯೋಧರು ಜೀವ ಕಳೆದುಕೊಂಡರು. ಜಗತ್ತು ಅಪಾರ ಪ್ರಮಾಣದ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿ ಬಂತು. ಯುದ್ಧದ ವರದಿಗಳನ್ನು ಕ್ರಿಕೆಟ್ ಕಾಮೆಂಟ್ರಿಗಳಂತೆ ಬಣ್ಣಿಸುತ್ತಿರುವ ನ್ಯೂಸ್ ಚಾನೆಲ್‌ನ ಸುದ್ದಿವೀರರಿಗೆ ಯುದ್ಧ ಭೀಕರ ಪರಿಣಾಮಗಳ ಅರಿವಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳು ಸಂಭವಿಸದೇ ಇದ್ದರೆ ಜಗತ್ತು ಮತ್ತಷ್ಟು ಸಮೃದ್ಧವಾಗಿರುತ್ತಿತ್ತು. ಹಿಂದಿನ ಎರಡು ಯುದ್ಧಗಳು ಪಾಠಗಳು ಬಿಟ್ಟು ಹೋಗಿವೆ. ಯುದ್ಧ ಆರಂಭಿಸಿದ ದೇಶಗಳು ಮಣ್ಣು ಮುಕ್ಕಿವೆ. ಜರ್ಮನಿ ಮತ್ತು ಅದರ ಸರ್ವಾಧಿಕಾರಿ ನಾಯಕ ಹಿಟ್ಲರ್ ನಡವಳಿಕೆ ಇಂದಿನ ಟ್ರಂಪ್ ಮತ್ತು ಯುದ್ಧಕ್ಕಾಗಿ ಹವಣಿಸುತ್ತಿರುವವರಿಗೆ ಅತ್ಯಂತ ಕೆಟ್ಟ ನಿದರ್ಶನವಾಗಿ ಕಾಣಬೇಕು.







