Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ನೇಮಕಾತಿ ಅಕ್ರಮಗಳಿಗೆ ಅಂತ್ಯ ಯಾವಾಗ?

ನೇಮಕಾತಿ ಅಕ್ರಮಗಳಿಗೆ ಅಂತ್ಯ ಯಾವಾಗ?

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ5 Sept 2026 12:37 PM IST
share
ನೇಮಕಾತಿ ಅಕ್ರಮಗಳಿಗೆ ಅಂತ್ಯ ಯಾವಾಗ?

ನಮ್ಮ ರಾಜಕಾರಣಿಗಳು ಅನುಕೂಲ ಸಿಂಧು ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಪ್ರತಿಭಾವಂತ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಬೇಕೆಂಬ ಇರಾದೆ ಕಾಂಗ್ರೆಸ್ ಸರಕಾರಕ್ಕೆ, ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮತ್ತು ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಗೆ ಇದ್ದಿದ್ದರೆ ಈ ಕ್ಷಣದಿಂದಲೇ ಪಾರದರ್ಶಕ ವ್ಯವಸ್ಥೆ ರೂಪಿಸಲು ಒಟ್ಟಾಗಿ ಶ್ರಮಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ರಾಜ್ಯದ ಯುವ ಜನತೆ ಅಪಾರ ವಿಶ್ವಾಸ ಇರಿಸಿಕೊಂಡಿದೆ. ಪಾರದರ್ಶಕ ನೇಮಕಾತಿ ವ್ಯವಸ್ಥೆ ಜಾರಿಗೆ ತಂದರೆ ಕಾಂಗ್ರೆಸ್ ಪಕ್ಷ ಜನರ ಕಣ್ಣಲ್ಲಿ ನಿಜವಾದ ಹೀರೋ ಆಗುತ್ತದೆ. ಮಾತುಗಳು ಕ್ರಿಯಾರೂಪದಲ್ಲಿ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತವೆ.

ಕರ್ನಾಟಕದಲ್ಲಿ ಪಾರದರ್ಶಕ ನೇಮಕಾತಿ ಎಂಬುದೇ ಗಗನ ಕುಸುಮವಾಗಿದೆ. ಇದು ಇಂದು ನಿನ್ನೆಯ ಕತೆಯಲ್ಲ. ನೇಮಕಾತಿ ಸಮಿತಿಗಳ ಸ್ವರೂಪದಲ್ಲೇ ದೋಷವಿರುವುದರಿಂದ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ನೇಮಕಾತಿ ಅಕ್ರಮಗಳನ್ನು ನಡೆಸುವಲ್ಲಿ ಕರ್ನಾಟಕ ಲೋಕಸೇವಾ ಸಂಸ್ಥೆ ಅಗ್ರಗಣ್ಯ ಚರಿತ್ರೆ ಹೊಂದಿದೆ. ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಗೊಂಡಿದೆ ಎಂಬುದು ಮನಗಂಡು ಪರ್ಯಾಯ ನೇಮಕಾತಿ ಪ್ರಾಧಿಕಾರಗಳನ್ನು ರಚಿಸಿಕೊಂಡರೂ ಅಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ನೇಮಕಾತಿಯಲ್ಲಿನ ಅಕ್ರಮಗಳಿಗೆ ಪ್ರಮುಖವಾಗಿ ಅಧಿಕಾರದಲ್ಲಿರುವ ರಾಜಕೀಯ ಮುಖಂಡರು ಕಾರಣ ಎಂಬುದು ಸ್ವಯಂ ಸ್ಪಷ್ಟ. ಕರ್ನಾಟಕದಲ್ಲಿ ಪಾರದರ್ಶಕವಾಗಿ ಉದ್ಯೋಗ ನೇಮಕಾತಿ ನಡೆಯದೇ ಇರುವುದಕ್ಕೆ ಎಲ್ಲ ಪಕ್ಷಗಳ ರಾಜಕಾರಣಿಗಳು ಕಾರಣ. ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟಾಚಾರದ ವಿರುದ್ಧ ಅತಿ ಹೆಚ್ಚು ಬೊಬ್ಬೆ ಹಾಕುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತವರ ಕುಟುಂಬದ ಪಾಲು ಗಣನೀಯ ಪ್ರಮಾಣದಲ್ಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಕರ್ನಾಟಕ ಲೋಕಸೇವಾ ಆಯೋಗವನ್ನು, ಕೇಂದ್ರ ಲೋಕಸೇವಾ ಆಯೋಗದಂತೆ ಪುನರ್ ಸಂಘಟಿಸಬಹುದು ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲ ರಾಜಕಾರಣಿಗಳಂತೆ ಸಿದ್ದರಾಮಯ್ಯ ಅವರು ನಿರೀಕ್ಷೆಯನ್ನು ಹುಸಿಗೊಳಿಸಿದರು.

ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪವಾಡ ಮಾಡಬಹುದೆಂದು ಆಸೆ ಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ, ನೇಮಕಾತಿ ಅಕ್ರಮಗಳ ವಿರುದ್ಧ ಆಕ್ರೋಶಭರಿತರಾಗಿ ಮಾತನಾಡುವವರ ಸಂಖ್ಯೆ ನಮ್ಮಲ್ಲಿ ಜಾಸ್ತಿ ಇದೆ. ಸತ್ಯ ಹರಿಶ್ಚಂದ್ರರಂತೆ ಆರೋಪ ಪ್ರತ್ಯಾರೋಪ ಮಾಡುವಲ್ಲಿ ನಮ್ಮ ರಾಜಕಾರಣಿಗಳು ನಿಸ್ಸೀಮರು. ಆದರೆ ಪ್ರತಿಯೊಬ್ಬರ ಆರೋಪದಲ್ಲೂ ತಮಗೆ ಬೇಡವಾದ ಕಟು ಸತ್ಯವನ್ನು ಮರೆಮಾಚಲಾಗುತ್ತದೆ. ತಮ್ಮ ಸ್ವಾರ್ಥಕ್ಕೆ ಪೂರಕವಾದ ಮಾಹಿತಿಯನ್ನು ಮಾತ್ರ ಹೆಚ್ಚು ಒತ್ತು ಕೊಟ್ಟು ಬಹಿರಂಗಪಡಿಸುತ್ತಾರೆ.

ಈಗ ಎಚ್.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪದ ವಿವರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಿಬ್ಬರ ಹುಸಿ ಕಾಳಜಿ ಬಯಲಾಗುತ್ತಿದೆ.

ಎಚ್.ಡಿ. ಕುಮಾರಸ್ವಾಮಿಯವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಜೈಲಿಗೆ ಹೋದದ್ದರ ಬಗ್ಗೆ ಆಕ್ರೋಶವಿಲ್ಲ, ಅನುಕಂಪವಿದೆ. ಯಾಕೆಂದರೆ, ಎಚ್.ಎನ್. ಕೃಷ್ಣ ಅವರು, ಕುಮಾರಸ್ವಾಮಿಯವರು ಶಿಫಾರಸು ಮಾಡಿದ ಬಹುಪಾಲು ಅಭ್ಯರ್ಥಿಗಳಿಗೆ ಉದ್ಯೋಗ ಭಾಗ್ಯ ದೊರಕಿಸಿಕೊಟ್ಟಿದ್ದಾರೆ. ಹಾಗಾಗಿಯೇ ಕೃಷ್ಣ ಜೈಲಲ್ಲಿ ಇದ್ದಾಗ ಕುಮಾರಸ್ವಾಮಿ ಮಾತನಾಡಿಸಲು ಹೋಗುತ್ತಾರೆ.

ಸದ್ಯ ನಾಲ್ಕುನೂರು ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಎಸಗಿರುವ ಶಿವಶಂಕರಪ್ಪ ಸಾಹುಕಾರ್ ಅವರ ಬಗ್ಗೆಯೂ ಕುಮಾರಸ್ವಾಮಿ ಮೃದು ಧೋರಣೆ ಅನುಸರಿಸುತ್ತಾರೆ. ಯಾಕೆಂದರೆ, ಕಡು ಭ್ರಷ್ಟ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಮತ್ತು ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿದ್ದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಬಿಜೆಪಿಯ ಯಡಿಯೂರಪ್ಪ ಈಗ ಜಾತ್ಯತೀತ ಜನತಾದಳದ ದೋಸ್ತಿಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಸರಕಾರಿ ಮಾಹಿತಿ ಹೊರ ತೆಗೆಯುವುದು ನೀರು ಕುಡಿದಷ್ಟೇ ಸರಳ. ಹಾಗೆ ಹೊರ ತೆಗೆದ ಮಾಹಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮದವರ ಎದುರು ಮಂಡಿಸುವುದು ಅವರ ಹಳೆಯ ಚಾಳಿ. ಒಟ್ಟು ಕರ್ನಾಟಕ ಲೋಕಸೇವಾ ಆಯೋಗದ ಕಾಯಕಲ್ಪದ ಬಗ್ಗೆಯಾಗಲಿ, ಸದ್ಯ ಸುದ್ದಿಯಲ್ಲಿರುವ ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿನ ಅಕ್ರಮದ ಬಗ್ಗೆಯಾಗಲಿ, ಶಿವಶಂಕರಪ್ಪ ಸಾಹುಕಾರ್ ಅವರ ಕರಾಳ ಕೃತ್ಯದ ಬಗ್ಗೆಯಾಗಲಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಗಂಭೀರ ಸ್ವರೂಪದ ಆಕ್ಷೇಪಣೆ ಇಲ್ಲ. ಅವರ ಮುಖ್ಯ ಗುರಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ 24 ಜನ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇಮಕಾತಿ ಅಕ್ರಮವನ್ನು ಬಯಲಿಗೆ ಎಳೆಯುವುದು ಮತ್ತು ಆ ನೇಮಕಾತಿಯಲ್ಲಿ ಪ್ರಿಯಾಂಕ್ ಖರ್ಗೆಯವರ ಪಾತ್ರ ಇರುವುದನ್ನು ರುಜುವಾತುಪಡಿಸುವುದು. ಅದಕ್ಕಾಗಿ ಇಷ್ಟೆಲ್ಲ ಹೆಣಗಾಡುತ್ತಿದ್ದಾರೆ.

ಹಾಗಂತ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ದಾಖಲೆ ಮತ್ತು ಎತ್ತಿದ ಪ್ರಶ್ನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗದು. ಕುಮಾರಸ್ವಾಮಿ ಬಿಡುಗಡೆ ಮಾಡಿದ 24 ಜನ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇಮಕಾತಿ ಅಕ್ರಮದ ಮಾಹಿತಿ ಸರಿಯಾಗಿಯೇ ಇದೆ. ಒಎಂಆರ್ ಶೀಟ್, ಕರ್ನಾಟಕ ಲೋಕಸೇವಾ ಆಯೋಗದ ಉಪಸಮಿತಿ ನೀಡಿದ ವರದಿ ಮತ್ತು ಎಫ್‌ಎಸ್‌ಎಲ್ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಕ್ರಮ ನಡೆದಿರುವುದು ಸ್ಪಷ್ಟವಾಗುತ್ತದೆ. ಆದರೆ, ಸಚಿವ ಪ್ರಿಯಾಂಕ್ ಖರ್ಗೆಯವರ ನೇರ ಪಾತ್ರ ಇರುವುದನ್ನು ಸಾಬೀತುಪಡಿಸಲು ಕುಮಾರಸ್ವಾಮಿಯವರು ವಿಫಲರಾಗುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿಯವರ ಒಟ್ಟು ಇರಾದೆಯಲ್ಲಿಯೇ ನೈಜ ಕಾಳಜಿ ಇಲ್ಲದಿರುವುದರಿಂದ ಅವರಿಂದ ಹೆಚ್ಚಿನದು ನಿರೀಕ್ಷೆ ಮಾಡಲಾಗದು. ಎಚ್.ಡಿ. ಕುಮಾರಸ್ವಾಮಿ ಮಾತ್ರವಲ್ಲ ಅವರ ಕುಟುಂಬವೇ ಕರ್ನಾಟಕ ಲೋಕಸೇವಾ ಆಯೋಗದ ಶುದ್ಧೀಕರಣಕ್ಕೆ ಮನಸ್ಸು ಮಾಡುವುದಿಲ್ಲ. ಯಾಕೆಂದರೆ ಅವರು ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ಬಹುದೊಡ್ಡ ಫಲಾನುಭವಿಗಳು.

ಕರ್ನಾಟಕ ಲೋಕಸೇವಾ ಆಯೋಗ ಅಸ್ತಿತ್ವಕ್ಕೆ ಬಂದು ಸರಿ ಸುಮಾರು 75 ವರ್ಷಗಳು ಗತಿಸಿವೆ. ಮೇಲ್ನೋಟಕ್ಕೆ ಕರ್ನಾಟಕ ಲೋಕಸೇವಾ ಆಯೋಗವು, ಕೇಂದ್ರ ಲೋಕಸೇವಾ ಆಯೋಗದ ಮಾದರಿಯಂತೆ ತೋರುತ್ತದೆ. ಆದರೆ ಕಾರ್ಯ ನಿರ್ವಹಣೆಯ ವಿಧಾನ ಬಹಳ ಭಿನ್ನವಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಒಟ್ಟು ಸ್ವರೂಪದಲ್ಲೇ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್, ಬಿಜೆಪಿ ಅಥವಾ ಇನ್ನಾವುದೇ ಪಕ್ಷದ ಸರಕಾರ ಬಂದರೂ ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಅಕ್ರಮ ಎಸಗಲಾಗದು.

ಆದರೆ ಕರ್ನಾಟಕ ಲೋಕಸೇವಾ ಆಯೋಗವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಲೆಂದೇ ನಮ್ಮ ರಾಜಕಾರಣಿಗಳು ಅದರ ಸ್ವರೂಪದಲ್ಲೇ ಅಡ್ಡ ಹಾದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿಯೇ ಕರ್ನಾಟಕ ಲೋಕಸೇವಾ ಆಯೋಗದ ಇತಿಹಾಸದಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ ನಡೆದ ನಿದರ್ಶನ ದೊರೆಯುವುದಿಲ್ಲ. ಆರಂಭದ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಈ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಆಡಳಿತ ಚುಕ್ಕಾಣಿ ಹಿಡಿದ ಸರಕಾರದ ಮುಖ್ಯಮಂತ್ರಿ ನೇಮಕ ಮಾಡುವ ಪರಿಪಾಠ ಬೆಳೆದು ಬಂದಿದೆ. ಹಾಗೆ ನೇಮಕಗೊಳ್ಳುವ ಅಧ್ಯಕ್ಷ ಮತ್ತು ಸದಸ್ಯರು ಮುಖ್ಯಮಂತ್ರಿ ಅಥವಾ ಅವರ ಸರಕಾರದ ಪ್ರಭಾವಿ ಮಂತ್ರಿಗಳ ಮಾತಿಗೆ ಸಹಜವಾಗಿಯೇ ಬೆಲೆ ಕೊಡುತ್ತಿದ್ದರು. ಆಗ ಎ ಮತ್ತು ಬಿ ಗ್ರೇಡ್ ಹುದ್ದೆಗಳಿಗೆ ನೇಮಕಾತಿ ಬಯಸುವವರು ಕಡ್ಡಾಯವಾಗಿ ಪ್ರಿಲಿಮಿನರಿ ಮತ್ತು ಮೇನ್ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡಲೇಬೇಕಿತ್ತು. ರಾಜಕಾರಣಿಗಳ ಸಂಬಂಧಿಕರು ಅಥವಾ ಅವರಿಗೆ ಬೇಕಾಗಿದ್ದವರು ಅಧಿಕಾರಿ ಹುದ್ದೆಯ ಕನಸು ಕಾಣಬೇಕೆಂದರೂ ಓದುವ ಕಷ್ಟ ಹೊರಲೇಬೇಕಿತ್ತು. ಆ ಎರಡು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಮೇಲೆ ಸಂದರ್ಶನದ ಹಂತದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಕೈ ಚಳಕ ತೋರಿಸುತ್ತಿದ್ದರು. ಅತಿ ಹೆಚ್ಚು ಶ್ರಮ ಹಾಕಿ ಎರಡು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ತೆಗೆಯುತ್ತಿದ್ದ ಶಿಫಾರಸು ಇಲ್ಲದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನಿಶ್ಚಿತವಾಗಿ ದೊರೆಯುತ್ತಿತ್ತು. ಆದರೆ ಬಯಸಿದ ಹುದ್ದೆ ಸಿಗುತ್ತಿರಲಿಲ್ಲ. ಪ್ರತಿಭಾವಂತ ಅಭ್ಯರ್ಥಿಗಳಿಗಿಂತಲೂ ಕಡಿಮೆ ಅಂಕ ಗಳಿಸಿರುವ, ಆದರೆ ರಾಜಕಾರಣಿಗಳ ಪ್ರಭಾವ ಹೊಂದಿರುವ ಅಭ್ಯರ್ಥಿಗಳು ತಮಗೆ ಬೇಕಾದ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದರು. ಕೇಂದ್ರ ಲೋಕಸೇವಾ ಆಯೋಗದಲ್ಲಿ ಪ್ರಭಾವ ಮತ್ತು ಶಿಫಾರಸು ಕೆಲಸ ಮಾಡುವುದಿಲ್ಲ. ಮುಖ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿನ ಬೌದ್ಧಿಕ ಸಾಮರ್ಥ್ಯ ಮಾತ್ರ ಅಭ್ಯರ್ಥಿಯನ್ನು ದಡ ತಲುಪಿಸುತ್ತವೆ.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸುವ ಆಸೆ ಇಟ್ಟುಕೊಂಡವರು ಕೇವಲ ಪ್ರತಿಭೆಯೊಂದನ್ನೇ ಅವಲಂಬಿಸಿದರೆ ಸಾಲದು. ಪ್ರತಿಭೆಯೊಂದನ್ನೇ ಅವಲಂಬಿಸುವ ಬಡ ಪ್ರತಿಭಾವಂತ ಅಭ್ಯರ್ಥಿಗಳು ಒಂದೋ ದೊರೆತ ಹುದ್ದೆಗೆ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಇಲ್ಲಾ ರಾಜಿ ಸಂಧಾನದ ಹಾದಿ ಹುಡುಕಬೇಕಿತ್ತು. ಆಗ ಹಣದ ವಹಿವಾಟು ಅಷ್ಟಾಗಿ ನಡೆಯುತ್ತಿರಲಿಲ್ಲ. ಜಾತಿ ಬಲವನ್ನು ಅನಿವಾರ್ಯವಾಗಿ ಅವಲಂಬಿಸಬೇಕಿತ್ತು. ಜಾತಿ ಬಲ ಯಾರಿಗೂ ಅನಾಯಾಸವಾಗಿ ಪ್ರಾಪ್ತಿಯಾಗುತ್ತಿರಲಿಲ್ಲ. ಪ್ರಭಾವಿ ರಾಜಕಾರಣಿಗಳ ಸಂಬಂಧಿಕರಿಗೆ ಆ ಭಾಗ್ಯ ಹುಟ್ಟಿನಿಂದಲೇ ದೊರೆಯುತ್ತಿತ್ತು. ಬಡ ಪ್ರತಿಭಾವಂತ ಅಭ್ಯರ್ಥಿಗಳು ತಮ್ಮ ಮೆರಿಟ್‌ಗೆ ತಕ್ಕ ಹುದ್ದೆ ಪಡೆಯಲೇಬೇಕೆಂದರೆ ‘ತಾಳಿ ಭಾಗ್ಯ’ ಯೋಜನೆಯ ವ್ಯಾಪ್ತಿಗೆ ಒಳಪಡಬೇಕು. ಆಗ ಮಾತ್ರ ಅತ್ಯುನ್ನತ ಹುದ್ದೆ ಸಿಗುತ್ತಿತ್ತು. ತಾಳಿ ಭಾಗ್ಯ ಯೋಜನೆ ಎಂದರೆ ಅತ್ಯಂತ ಪ್ರತಿಭಾವಂತ ಬಡ ಅಭ್ಯರ್ಥಿ ಮುಖ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ, ಪ್ರಭಾವಿ ರಾಜಕಾರಣಿಗಳ ಅಥವಾ ಕೆಪಿಎಸ್‌ಸಿ ಸದಸ್ಯರ ಸಂಬಂಧಿಕರ ಮಗಳನ್ನು ಮದುವೆಯಾಗಲು ಒಪ್ಪಿಕೊಂಡರೆ ಆತನಿಗೆ ಪ್ರತಿಭೆಗೆ ತಕ್ಕ ಹುದ್ದೆ ದೊರೆಯುತ್ತಿತ್ತು. ಇಲ್ಲದಿದ್ದರೆ ಯಾವುದೋ ಒಂದು ಹುದ್ದೆ ಕೊಟ್ಟು ಇಡೀ ಜೀವನ ಪಶ್ಚಾತಾಪ ಪಡುವಂತೆ ಮಾಡುತ್ತಿದ್ದರು. ಆಯಾ ಜಾತಿಯ ವಲಯದಲ್ಲಿ ತಾಳಿ ಭಾಗ್ಯ ಕೆಲಸ ಮಾಡುತ್ತಿತ್ತು. ತಾಳಿ ಭಾಗ್ಯ ಯೋಜನೆಯ ಕೆಲ ಫಲಾನುಭವಿಗಳು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಹುದ್ದೆಯನ್ನು ಅಲಂಕರಿಸಿದ್ದಾರೆ. ತಾಳಿ ಭಾಗ್ಯ ಯೋಜನೆ, ಪ್ರಭಾವಿ ರಾಜಕಾರಣಿಗಳ ಶಿಫಾರಸು ಅಕ್ರಮ ನೇಮಕಾತಿಯ ಮೊದಲ ಘಟ್ಟ. ಶುದ್ಧ ಪ್ರತಿಭೆ ಹೊರತು ಪಡಿಸಿ, ಬೇರೆ ಶಕ್ತಿಯ ಕೈವಾಡದಿಂದ ಅತ್ಯುನ್ನತ ಹುದ್ದೆ ಪಡೆದುಕೊಂಡರೆ ಅದು ಅಕ್ರಮ ನೇಮಕಾತಿಯೇ. ಸಮಾಧಾನದ ಸಂಗತಿಯೆಂದರೆ, ಹಾಗೆ ಅಕ್ರಮವಾಗಿ ನೇಮಕಾತಿ ಆದೇಶ ಪಡೆಯುತ್ತಿದ್ದ ಅಭ್ಯರ್ಥಿಗಳು ಮೊದಲೆರಡು ಪರೀಕ್ಷೆಗಳನ್ನು ಕಡ್ಡಾಯವಾಗಿ ಪಾಸು ಮಾಡುತ್ತಿದ್ದರು.

ನಂತರದ ಕಾಲಾವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟಾಚಾರದ ಸ್ವರೂಪ ಬದಲಾಯಿತು. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಹೇಗೋ ಕಷ್ಟ ಪಟ್ಟು ಪಾಸಾಗುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಹಂತದಲ್ಲಿ ಪ್ರಭಾವ ಬಳಸಲು ಶುರು ಮಾಡಿದರು. ಆಗ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನಕ್ಕಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮನೆಗಳಿಗೆ ಕಳುಹಿಸಿಕೊಡುತ್ತಿದ್ದರು. ಹಣಕ್ಕಾಗಿ ಹೆಚ್ಚು ಅಂಕ ಹಾಕುವ ಪ್ರಕರಣಗಳು ಬೆಳಕಿಗೆ ಬಂದವು. ಅಷ್ಟು ಮಾತ್ರವಲ್ಲ, ಅಂತಿಮ ಹಂತದ ಸಂದರ್ಶನದಲ್ಲಿ ದೇಣಿಗೆ ರೂಪದಲ್ಲಿ ಲಂಚ ಪಡೆಯುವ ಪದ್ಧತಿ ಚಾಲ್ತಿಗೆ ಬಂತು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ ಅವರು ಹೇಳಿದಷ್ಟು ದೇಣಿಗೆ ನೀಡಿ ಆ ರಿಶೀದಿ ತೋರಿಸಿದರೆ ಉದ್ಯೋಗ ಪಕ್ಕಾ ಆಗುತ್ತಿತ್ತು. ಅದರ ಮುಂದಿನ ಹಂತ ದಲ್ಲಾಳಿಗಳ ಮೂಲಕ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಸಂಪರ್ಕ ಮಾಡಿ ಕೇಳಿದಷ್ಟು ಹಣ ನೀಡಿ ಅತ್ಯುನ್ನತ ಹುದ್ದೆ ಪಡೆಯುವ ಕಾಲ. ಎಚ್. ಎನ್. ಕೃಷ್ಣ ಅವರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆ ಅಲಂಕರಿಸುವ ಹೊತ್ತಿಗೆ, ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಹೊರಗೆ ಕಳುಹಿಸಿ ಬರೆಸುವ ಚಾಳಿ ಶುರುವಾಯಿತು. ಮುಖ್ಯ ಪರೀಕ್ಷೆಯಲ್ಲಿ ಕಷ್ಟ ಪಟ್ಟು ಓದುವವರ ಸಂಖ್ಯೆ ಕಡಿಮೆಯಾಗತೊಡಗಿತು. ತಾಳಿ ಭಾಗ್ಯ ಯೋಜನೆ ಅಪ್ರಸ್ತುತವಾಗತೊಡಗಿತು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯ ಹುದ್ದೆಗೆ ಹಣ ಕೊಟ್ಟು ಬರುವವರ ಸಂಖ್ಯೆ ಜಾಸ್ತಿಯಾಗತೊಡಗಿತು. ಆಗ ಕೆಪಿಎಸ್‌ಸಿ ಭ್ರಷ್ಟಾಚಾರದ ಸ್ವರೂಪ ಬದಲಾಯಿತು. ಅಷ್ಟು ಮಾತ್ರವಲ್ಲ ಹಣದ ವಹಿವಾಟು ಹೆಚ್ಚಿತು. ಪ್ರಿಲಿಮಿನರಿ, ಮೇನ್ ಮತ್ತು ಕೊನೆಯ ಹಂತದ ಸಂದರ್ಶನ ಸೇರಿ ಒಂದು ಪ್ಯಾಕೇಜ್ ರೂಪದಲ್ಲಿ ಸರಕಾರಿ ಹುದ್ದೆಗಳು ಹರಾಜಿನಲ್ಲಿ ದೊರೆಯತೊಡಗಿದವು. ಓದುವ, ಕಷ್ಟ ಪಡುವ ಶ್ರಮ ಸಂಸ್ಕೃತಿ ನಾಶವಾಗತೊಡಗಿತು.

ಹಾಗೆ ನೋಡಿದರೆ ಕರ್ನಾಟಕ ಲೋಕಸೇವಾ ಆಯೋಗದವರಿಗೆ ಒಎಂಆರ್ ಶೀಟ್ ಟ್ಯಾಪರ್ ಮಾಡುವುದು ಗೊತ್ತಿರಲಿಲ್ಲ. ಅದನ್ನು ಕರ್ನಾಟಕಕ್ಕೆ ಕಲಿಸಿ ಕೊಟ್ಟ ಕೀರ್ತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಬೇಕು. ಕರ್ನಾಟಕ ಲೋಕಸೇವಾ ಆಯೋಗದವರು ಮೊದಲು ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಮಾಡುತ್ತಿದ್ದರು. ಅರ್ಜಿ ಹಾಕಿದವರ ಪೈಕಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಂದು ಹುದ್ದೆಗೆ ಐದರಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುತ್ತಿದ್ದರು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಲ್ಲಿ ಯಾರಿಗೆ ಪ್ರಭಾವ ಮತ್ತು ಹಣ ನೀಡುವ ಸಾಮರ್ಥ್ಯ ಇರುತ್ತದೆಯೋ ಅವರು ಆಯ್ಕೆಯಾಗುತ್ತಿದ್ದರು. ಸಂದರ್ಶನದಲ್ಲಿ ಅವ್ಯವಹಾರ ನಡೆಯುತ್ತದೆ ಎಂಬ ಕಾರಣಕ್ಕೆ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾಯಿಸಲಾಯಿತು. ಒಎಂಆರ್ ಶೀಟ್ ಮೂಲಕ ಒಂದು ಪ್ರವೇಶ ಪರೀಕ್ಷೆ ನಡೆಸಿ, ಯಾರಿಗೆ ಹೆಚ್ಚು ಅಂಕ ಬಂದಿರುತ್ತದೆಯೋ ಅವರ ಮೆರಿಟ್ ಪಟ್ಟಿ ತಯಾರಿಸಿ ನೇಮಕಾತಿ ಆದೇಶ ನೀಡುವ ಪದ್ಧತಿ ಜಾರಿಗೆ ತಂದರು. ಆಗ ಇದನ್ನೊಂದು ಕ್ರಾಂತಿಕಾರಿ ಕ್ರಮ ಎಂದೇ ಭಾವಿಸಲಾಗಿತ್ತು. ಸಂದರ್ಶನ ಇಲ್ಲದೆ ನೇರ ನೇಮಕಾತಿ ಮಾಡುವುದರಿಂದ ಹಣದ ವಹಿವಾಟು ಇರುವುದಿಲ್ಲ ಎಂದೇ ಬಲವಾಗಿ ನಂಬಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಒಎಂಆರ್ ಶೀಟ್ ಗಳನ್ನು ಹಣ ಪಡೆದುಕೊಂಡು ಟ್ಯಾಂಪರ್ ಮಾಡುವುದನ್ನು ಒಂದು ದಂಧೆ ಮಾಡಿಕೊಂಡರೋ ಆಗ ಪಾರದರ್ಶಕತೆಯ ಮುಖವಾಡ ಕಳಚಿ ಬಿತ್ತು. ದುರಂತವೆಂದರೆ, ಒಎಂಆರ್ ಶೀಟ್ ಪರೀಕ್ಷಾ ಮಾದರಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು ಅಳವಡಿಸಿಕೊಂಡಿತ್ತು.

ಪಶು ವೈದ್ಯಾಧಿಕಾರಿಗಳ ನಾಲ್ಕು ನೂರು ಹುದ್ದೆಗಳನ್ನು ಈ ಒಎಂಆರ್ ಶೀಟ್ ಬಳಸಿಯೇ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಮತ್ತು ದಲ್ಲಾಳಿ ಬಸವರಾಜ್ ಕನ್ನಾಳೆ ಸಿಕ್ಕಿ ಬಿದ್ದಿದ್ದಾರೆ. ಒಂದು ಹುದ್ದೆಗೆ ಎಂಭತ್ತು ಲಕ್ಷ ರೂ. ಪಡೆದುಕೊಂಡು ಒಎಂಆರ್ ಶೀಟ್ ಟ್ಯಾಂಪರ್ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗಳ ನೇಮಕಾತಿಯಲ್ಲೂ ಇದೇ ಮಾದರಿ ಅನುಸರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ನೇಮಕಾತಿ ಅಕ್ರಮಗಳ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದು ಇಂದಿನ ಅಗತ್ಯ. ಈ ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಥವಾ ಇನ್ನಾವುದೇ ಪಕ್ಷಕ್ಕೆ ಸೇರಿದವರಿದ್ದರೂ ಶಿಕ್ಷೆಗೆ ಒಳಪಡಿಸಬೇಕು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷ-ಸದಸ್ಯ ಹುದ್ದೆಯಲ್ಲಿರುವವರು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ಅವಧಿಯಲ್ಲಿ ನೇಮಕಗೊಂಡಿದ್ದಾರೆ. ಕೆಲವರು ಮೂರ್ನಾಲ್ಕು ಕೋಟಿ ರೂ. ನೀಡಿ ಆ ಹುದ್ದೆ ಖರೀದಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕದಲ್ಲಿನ ಎಲ್ಲ ನೇಮಕಾತಿ ಪ್ರಾಧಿಕಾರಗಳಲ್ಲಿ ಲಂಚ ರಹಿತ ವ್ಯವಸ್ಥೆ ತರಬೇಕೆಂದರೆ ಎಲ್ಲ ಪಕ್ಷದ ಮುಖಂಡರು ದೃಢ ಸಂಕಲ್ಪ ಮಾಡಬೇಕಾಗುತ್ತದೆ. ನಮ್ಮ ರಾಜಕಾರಣಿಗಳು ಅನುಕೂಲ ಸಿಂಧು ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಪ್ರತಿಭಾವಂತ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಬೇಕೆಂಬ ಇರಾದೆ ಕಾಂಗ್ರೆಸ್ ಸರಕಾರಕ್ಕೆ, ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮತ್ತು ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಗೆ ಇದ್ದಿದ್ದರೆ ಈ ಕ್ಷಣದಿಂದಲೇ ಪಾರದರ್ಶಕ ವ್ಯವಸ್ಥೆ ರೂಪಿಸಲು ಒಟ್ಟಾಗಿ ಶ್ರಮಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ರಾಜ್ಯದ ಯುವ ಜನತೆ ಅಪಾರ ವಿಶ್ವಾಸ ಇರಿಸಿಕೊಂಡಿದೆ. ಪಾರದರ್ಶಕ ನೇಮಕಾತಿ ವ್ಯವಸ್ಥೆ ಜಾರಿಗೆ ತಂದರೆ ಕಾಂಗ್ರೆಸ್ ಪಕ್ಷ ಜನರ ಕಣ್ಣಲ್ಲಿ ನಿಜವಾದ ಹೀರೋ ಆಗುತ್ತದೆ. ಮಾತುಗಳು ಕ್ರಿಯಾರೂಪದಲ್ಲಿ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತವೆ.

Tags

Recruitmentscams
share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X