ಕಲಬುರಗಿ: ಸನ್ನತಿ - ಕನಗನಹಳ್ಳಿ ಅಭಿವೃದ್ದಿಗಾಗಿ ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ

ಕಲಬುರಗಿ: ಐತಿಹಾಸಿಕ ಸನ್ನತಿ- ಕನಗನಹಳ್ಳಿ ಅಭಿವೃದ್ದಿಗಾಗಿ ಜಿಲ್ಲಾಡಳಿತ ಮತ್ತು ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅತಿ ಶೀಘ್ರದಲ್ಲಿ ಡಿಪಿಆರ್ ತಯಾರಿಸಿ, ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, "ಜಗತ್ತಿಗೆ ಅಹಿಂಸೆ, ಶಾಂತಿ ಮತ್ತು ಮಾನವೀಯತೆಯ ಬೆಳಕು ತೋರಿದ ಬೌದ್ಧ ಧರ್ಮದ ದಾರ್ಶನಿಕತೆಯು ಕರ್ನಾಟಕದಲ್ಲಿಯೂ ಅತ್ಯಂತ ಪ್ರಭಾವಿಯಾಗಿತ್ತು" ಎಂದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರವು ಬೌದ್ಧ ಚಿಂತನೆಗಳ ಶ್ರೀಮಂತ ಪರಂಪರೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು ಎನ್ನುವುದು ನಮ್ಮೆಲ್ಲರನ್ನು ರೋಮಾಂಚನಗೊಳಿಸುವ ಸಂಗತಿ. ಸಾಮ್ರಾಟ್ ಅಶೋಕನ ಕಾಲಮಾನದಲ್ಲಿ ನಿರ್ಮಾಣವಾಗಿರುವ ಮಹಾಚೈತ್ಯ ಎಂದು ಕರೆಸಿಕೊಳ್ಳುವ ಸನ್ನತಿ-ಕನಗನಹಳ್ಳಿ ಸ್ತೂಪ ನಮ್ಮ ಹೆಮ್ಮೆಯ ಚರಿತ್ರೆಯ ಹೆಗ್ಗುರುತುಗಳಲ್ಲಿ ಒಂದು. ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಕನಗನಹಳ್ಳಿಯ ಬೌದ್ಧ ತಾಣದ ಹಿಂದಿನ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನ ನಮ್ಮದು ಎಂದ ಅವರು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







