ಬಿದನೂರ ಗ್ರಾಪಂನಲ್ಲಿ ಅವ್ಯವಹಾರ ಆರೋಪ; ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಮೈಲಾರಿ ದೊಡ್ಡಮನಿ ಎಚ್ಚರಿಕೆ

ಕಲಬುರಗಿ: ಅಫ್ಝಲಪುರ ತಾಲೂಕಿನ ಬಿದನೂರ ಗ್ರಾಪಂನಲ್ಲಿ 2020ರಿಂದ 2025ರವರೆಗೆ ಲಕ್ಷಾಂತರ ರೂ. ಮೊತ್ತದ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರ ಮೈಲಾರಿ ದೊಡ್ಡಮನಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿದನೂರ ಗ್ರಾಪಂನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಈಗಾಗಲೇ ದೂರು ನೀಡಿದ್ದೇವೆ. ಪಂಚಾಯತ್ ಎದುರಿಗೆ ಪ್ರತಿಭಟನೆ ನಡೆಸಿದ್ದೆವು. ಪಿಡಿಓ, ಅಧ್ಯಕ್ಷರ ಮೇಲೆ ಪ್ರಕರಣ ದಾಖಲಾದರೂ ಅವರನ್ನು ಈ ವರೆಗೆ ಪೊಲೀಸರು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗದೆ ಇದ್ದರೆ ಸೆ.26ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮೈಲಾರಿ ದೊಡ್ಡಮನಿ ಸೇರಿದಂತೆ ಬಿದನೂರು, ಹಾವನೂರು, ಗೊಬ್ಬರ(ಕೆ), ಅವರಳ್ಳಿ ಗ್ರಾಮಸ್ಥರು ತಿಳಿಸಿದರು.
ಮೂಲಸೌಲಭ್ಯ, ಘನ ತ್ಯಾಜ್ಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ, ಗ್ರಂಥಾಲಯಕ್ಕೆ ಕಾಯ್ದಿರಿಸಿದ ಅನುದಾನ, ಜಿಮ್ ಮತ್ತು ಯೂತ್ ಕ್ಲಬ್ ಯೋಜನೆ, ಸಾರ್ವಜನಿಕ ಬೋರ ವೆಲ್ ವೈಯಕ್ತಿಕ ಬಳಕೆಯಂತಹ ಹಲವು ಹಗರಣಗಳು ನಡೆದಿವೆ. ಸಿಸಿ ರಸ್ತೆ ನಿರ್ಮಾಣ ಮಾಡದೆ ಹಣ ವಸೂಲಿ ಮಾಡಲಾಗಿದೆ. ಬಾವಿ ಸ್ವಚ್ಛತೆಗೆ ಬಿಡುಗಡೆಯಾದ ಅನುದಾನವೂ ಕೊಳ್ಳೆ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಾಂತಪ್ಪ ಚಿಕ್ಕಕೌವಲಗಿ, ಅಂಬಾರಾಯ ಹಾವನೂರ, ಅಮರ ಚಿಕ್ಕಕೌವಲಗಿ, ಶೆಟ್ಟಿಪ ಡೂಂಗರಿ, ಮಹಾಂತಪ್ಪ ಹೇರೂರ, ಮಲ್ಲಿಕಾರ್ಜುನ ಹೇರೂರ, ಯಲ್ಲಾಲಿಂಗ ಕರೀಕಲ, ಮಾಂತೇಶ ತಳವಾರ, ಸಿದ್ದು ಚಿಕ್ಕಕೌವಲಗಿ ಸೇರಿದಂತೆ ಮತ್ತಿತರರು ಇದ್ದರು.







