ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸಲು ಸಂಸ್ಥೆಗೆ ಇನ್ನು 750 ಬಸ್ ಅವಶ್ಯಕತೆ ಇದ್ದು, ಇದನ್ನು ನೀಗಿಸಲು ಪ್ರಸ್ತುತ ಕೆ.ಕೆ.ಆರ್.ಡಿ.ಬಿ. ಮಂಡಳಿಯ 45 ಕೋಟಿ ರೂ. ಅನುದಾನದಲ್ಲಿ 120 ಬಸ್ ಖರೀದಿಸಲಾಗುತ್ತಿದೆ ಎಂದು ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.
ಬುಧವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲಬುರಗಿ–ಮೈಸೂರು ನಾನ್ ಎಸಿ ಸ್ಲೀಪರ್ ಹಾಗೂ ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 120 ಬಸ್‌ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಮುಂದಿನ 3 ತಿಂಗಳಲ್ಲಿ ಈ ಬಸ್‌ಗಳು ಸಂಸ್ಥೆಗೆ ಸೇರ್ಪಡೆಯಾಗಿ ಸಾರಿಗೆ ಸಂಪರ್ಕಕ್ಕೆ ಬಲ ನೀಡಲಿದೆ. ಸಂಸ್ಥೆಗೆ ಕೊರತೆ ಇರುವ ಬಸ್‌ಗಳನ್ನು ಪೂರೈಸಲು ಸಿ.ಎಂ. ಅವರು ಸಹ ಅಭಯ ನೀಡಿದ್ದು, ಮುಂದಿನ ದಿನದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.
ಇಂದಿಲ್ಲಿ ಸಂಸ್ಥೆ ಅನುದಾನದಲ್ಲಿ ಖರೀದಿಸಿದ 56 ಬಸ್‌ಗಳ ಪೈಕಿ ಕಲಬುರಗಿ, ಬಳ್ಳಾರಿ, ವಿಜಯಪುರದಲ್ಲಿ 12 ಬಸ್‌ಗಳ ಟ್ರಯಲ್ ರನ್ ಮಾಡಲಾಗುತ್ತಿದೆ. ಅದರಂತೆ ಪ್ರಸ್ತುತ ಮಾರ್ಗದ ಕಲಬುರಗಿ–ಮೈಸೂರು ನಡುವೆ 2 ನಾನ್ ಎಸಿ ಸ್ಲೀಪರ್ ಬಸ್ ಹಾಗೂ ಕಲಬುರಗಿ–ಶಿವಮೊಗ್ಗ ನಡುವೆ 2 ಎಸಿ ಸ್ಲೀಪರ್ ಹೊಸ ಬಸ್‌ಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಈ ನೂತನ ವಾಹನಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ದೂರ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಇನ್ನಷ್ಟು ಸುರಕ್ಷಿತ, ಸುಗಮ ಹಾಗೂ ಆರಾಮದಾಯಕ ಅನುಭವವನ್ನು ಒದಗಿಸಲಿವೆ ಎಂದರು.
ಕಲಬುರಗಿ ನಗರದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಸಂಬಂಧ ಡಿ.ಪಿ.ಆರ್. ತಯಾರಿಸಲಾಗುತ್ತಿದೆ. ಬಸ್‌ನಲ್ಲಿ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂದಿನ ದಿನದಲ್ಲಿ ಕಲಬುರಗಿಯಲ್ಲಿ 100 ಮತ್ತು ವಿಜಯಪುರ-ಬಳ್ಳಾರಿ ವಿಭಾಗದಲ್ಲಿ 100 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೂ ಚಿಂತನೆ ನಡೆದಿದೆ ಎಂದು ಅಧ್ಯಕ್ಷ ಅರುಣಕುಮಾರ ಪಾಟೀಲ ತಿಳಿಸಿದರು.
ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ:
ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಇಂದಿಲ್ಲಿ ಕಲಬುರಗಿ–ಮೈಸೂರು ನಡುವೆ ನಾನ್ ಎಸಿ ಸ್ಲೀಪರ್ 667 ಕಿ.ಮೀ. ಉದ್ದದ ಪ್ರಯಾಣಕ್ಕೆ 1,262 ರೂ. ಹಾಗೂ ಕಲಬುರಗಿ–ಶಿವಮೊಗ್ಗ ನಡುವೆ ಎಸಿ ಸ್ಲೀಪರ್ 547 ಕಿ.ಮೀ. ಉದ್ದದ ಪ್ರಯಾಣಕ್ಕೆ ಕೇವಲ 1,195 ರೂ. ಕೈಗೆಟಕುವ ದರ ನಿಗದಿ ಮಾಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು.
ಶಕ್ತಿ ಯೋಜನೆ ಸಮರ್ಪಕ ಅನುಷ್ಠಾನ:
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೋಮಶೇಖರ ಹಿರೇಮಠ ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಇದನ್ನು ಮನಗಂಡು ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಅಧ್ಯಕ್ಷರಾಗಿರುವ ಅರುಣಕುಮಾರ ಪಾಟೀಲ ಅವರು ಹೆಚ್ಚಿನ ಬಸ್‌ಗಳ ಕಾರ್ಯಾಚರಣೆ ಮಾಡುವ ಮೂಲಕ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ನೂತನ ಬಸ್‌ಗಳ ಕಾರ್ಯಾಚರಣೆ ವಿವರ:
ಕಲಬುರ್ಗಿ–ಮೈಸೂರು (ನಾನ್ ಎಸಿ ಸ್ಲೀಪರ್) ಬಸ್ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸಂಜೆ 06.00 ಗಂಟೆಗೆ ಹೊರಟು ಶಹಾಪುರ–ಲಿಂಗಸೂರು–ಸಿಂಧನೂರು–ಬಳ್ಳಾರಿ–ಚಳ್ಳಿಕೇರೆ–ಹಿರಿಯೂರು–ತುರುವೆಕೇರೆ ಮಾರ್ಗವಾಗಿ ಮೈಸೂರಿಗೆ ಮರುದಿನ ಬೆಳಿಗ್ಗೆ 08:00 ಗಂಟೆಗೆ ತಲುಪಲಿದೆ. ಇದೇ ಮಾರ್ಗದಲ್ಲಿ ಮೈಸೂರು–ಕಲಬುರ್ಗಿ (ನಾನ್ ಎಸಿ ಸ್ಲೀಪರ್) ಬಸ್ ಮೈಸೂರಿನಿಂದ ಸಂಜೆ 07.00 ಗಂಟೆಗೆ ಹೊರಟು ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಮರುದಿನ ಬೆಳಿಗ್ಗೆ 09:00 ಗಂಟೆಗೆ ತಲುಪಲಿದೆ.
ಅದೇ ರೀತಿ ಕಲಬುರ್ಗಿ–ಶಿವಮೊಗ್ಗ (ಎಸಿ ಸ್ಲೀಪರ್-ಮಿನಿ ಕಲ್ಯಾಣರಥ) ಬಸ್ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಿಂದ ರಾತ್ರಿ 08:30 ಗಂಟೆಗೆ ಹೊರಟು ಶಹಾಪುರ–ಲಿಂಗಸೂರು–ಸಿಂಧನೂರು–ಗಂಗಾವತಿ–ಹೊಸಪೇಟೆ–ಕುಡ್ಲಗಿ–ಚಿತ್ರದುರ್ಗ–ಚನ್ನಗಿರಿ ಮಾರ್ಗವಾಗಿ ಮರುದಿನ ಶಿವಮೊಗ್ಗಕ್ಕೆ ಬೆಳಿಗ್ಗೆ 07:15 ಗಂಟೆಗೆ ತಲುಪಲಿದೆ. ಇದೇ ಮಾರ್ಗದಲ್ಲಿ ಶಿವಮೊಗ್ಗ–ಕಲಬುರಗಿ (ಎಸಿ ಸ್ಲೀಪರ್-ಮಿನಿ ಕಲ್ಯಾಣರಥ) ಬಸ್ ಶಿವಮೊಗ್ಗದಿಂದ ಸಂಜೆ 07.00 ಗಂಟೆಗೆ ಹೊರಟು ಮರುದಿನ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳಿಗ್ಗೆ 05:45 ಗಂಟೆಗೆ ಬಂದು ತಲುಪಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಜಯಕುಮಾರ್ ಕಟ್ಟಿಮನಿ, ನಿರ್ಮಲಾ ಬರ್ಗಲಿ, ಸುರೇಶ ತಿಬ್ಬಶೆಟ್ಟಿ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ಸುಶೀಲಾ, ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಭದ್ರತಾಧಿಕಾರಿ ಎಸ್.ಡಿ. ಗುರಿಕಾರ್, ಸಿ.ಎಂ.ಇ ಸಂತೋಷ ಗೊಗೇರಿ, ಮುಖ್ಯ ಆರ್ಥಿಕ ಅಧಿಕಾರಿ ಬಸವರಾಜ ಬೆಳಗಲಿ, ಮಂಡಳಿ ಕಾರ್ಯದರ್ಶಿ ಜಗದೀಶ ನಾಯಕ್, ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಎಸ್.ಜಿ., ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವಂತಪ್ಪ, ಡಿ.ಟಿ.ಓ ಈಶ್ವರ ಹೊಸಮನಿ ಸೇರಿದಂತೆ ಡಿಪೋ ಮ್ಯಾನೇಜರ್, ಬಸ್ ನಿಲ್ದಾಣದ ಅಧಿಕಾರಿಗಳು ಇದ್ದರು.






