ಸಾರಿಗೆ ನೌಕರರ ಮುಷ್ಕರ: ಕಲಬುರಗಿಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ; ಪರದಾಡಿದ ಪ್ರಯಾಣಿಕರು

ಕಲಬುರಗಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಮಂಗಳವಾರ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಸಂಚಾರದಲ್ಲಿ ವ್ಯತ್ಯವಾಗಿದೆ. ಹಾಗಾಗಿ ಕಲಬುರಗಿ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವುದು ಕಂಡುಬಂದಿದೆ.
ನಗರದ ಕೇಂದ್ರ ಬಸ್ ನಿಲ್ದಾಣ, ಶಹಾ ಬಝಾರ್ ನಾಕಾ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಬಸ್ ಗಳು ರಸ್ತೆಗೆ ಇಳಿಯದೆ ಇರುವುದರಿಂದ ಪ್ರಯಾಣಿಕರು ಖಾಸಗಿ ಬಸ್ ಹಾಗೂ ನಗರ ಸಂಚಾರಕ್ಕೆ ಆಟೋಗಳನ್ನು ಅವಲಂಬಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಬೆಂಗಳೂರು, ಹೈದರಾಬಾದ್, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಬಸ್ ಹಾಗೂ ರೈಲುಗಳ ಮೂಲಕ ಬೆಳಗ್ಗೆ ನಗರಕ್ಕೆ ಬಂದಿಳಿದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಹರಸಾಹಸಪಟ್ಟರು.
ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಭೇಟಿ ನೀಡಿ ಮುಷ್ಕರ ಹಾಗೂ ಪ್ರಯಾಣಿಕರ ಸಂಚಾರದ ಕುರಿತು ಮಾಹಿತಿ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ಅಧಿಕಾರಿ ಎಸ್.ಜಿ.ಗಂಗಾಧರ, 'ಮುಷ್ಕರನಿರತ ಸಿಬ್ಬಂದಿಗೆ ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದೆವು. ನಮ್ಮ ಕಲಬುರಗಿ ವಿಭಾಗದಲ್ಲಿ ಒಟ್ಟು ಐದು ಡಿಪೊಗಳಿದ್ದು, ನಿತ್ಯ ಬೆಳಗ್ಗೆ ಎಂಟು ಗಂಟೆಯವರೆಗೆ 250ಕ್ಕೂ ಹೆಚ್ಚು ಬಸ್ ಗಳು ರಸ್ತೆಗೆ ಇಳಿಯುತ್ತಿದ್ದವು. ಆದರೆ ಮುಷ್ಕರದ ಬಿಸಿಯಲ್ಲಿ ಮಂಗಳವಾರ ಕೇವಲ 20ರಿಂದ 25 ಬಸ್ ಗಳು ಮಾತ್ರವೇ ರಸ್ತೆಗಿಳಿದಿವೆ' ಎಂದು ಹೇಳಿದರು.







