ಕಲಬುರಗಿ | ಜು.27 ರಂದು ಜಿಲ್ಲಾ ಕಸಾಪದಿಂದ 2ನೇ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ : ಸಮಾಜದ ಪರಿವರ್ತನೆಗೆ ತಮ್ಮ ಬರಹದ ಮೂಲಕ ಸ್ಪಂದಿಸುವ ಇಂದಿನ ಯುವ ಬರಹಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪರೋಪಕಾರಿ ಲಿಂ. ಸಂತೋಷಕುಮಾರ ಇಂಗಿನಶೆಟ್ಟಿ ವೇದಿಕೆಯಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ 27 ರಂದು ಒಂದು ದಿನದ ಜಿಲ್ಲಾ ಮಟ್ಟದ 2ನೇ ಯುವ ಸಾಹಿತ್ಯ ಸಮ್ಮೇಳನವನ್ನು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ತೇಗಲತಿಪ್ಪಿ, ವೈಭವದ ಜೀವನಕ್ಕೆ ಮುಖ ಮಾಡಿರುವ ಇಂದಿನ ಬಹುತೇಕ ಯುವಕರು ತಾತ್ಕಾಲಿಕ ಅಭಿರುಚಿಗಳಿಗೆ ಬಲಿಯಾಗಿ ತಾರುಣ್ಯ ಜೀವನದ ಮಹತ್ವವನ್ನು ಮರೆಯುತ್ತಿದ್ದಾರೆ. ನವ ಕರ್ನಾಟಕದ ವಿಕಾಸಕ್ಕೆ ನವ ಯುವಕರು ವಿಮುಖರಾಗದಂತೆ ಇರಬೇಕಾದದು ಇಂದಿನ ತುರ್ತಾಗಿದೆ. ಅರಿವಿನ ಮುಖದಂತಿರುವ ಸಾಹಿತ್ಯ, ಸಂಸ್ಕೃತಿಯಂತಹ ನೆಲೆಗಳಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ವ್ಯಕ್ತಿ ಬೆಳವಣಿಗೆ ಜತೆಗೆ ಸಮಾಜದ ಬೆಳವಣಿಗೆಯು ಕಾಣಬಹುದು. ಈ ರೀತಿಯ ಆಲೋಚನಾ ಕ್ರಮಗಳನ್ನು ಅನುಸರಿಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದಿನ ಹೊಸ ಪೀಳಿಗೆಯ ಜಾಗೃತಿಗಾಗಿ ಮತ್ತು ಅವರ ಹಿತದಲ್ಲಿ ಸಮಾಜದ ಹಿತ ಅಡಗಿರುವದನ್ನು ಮತ್ತೆ ತಿಳಿಸುತ್ತ ಯುವಕರ ಜವಾಬ್ದಾರಿಗಳನ್ನು ಚುರುಕು ಗೊಳಿಸುವ ನಿಟ್ಟಿನಲ್ಲಿ ಯುವ ಸಾಹಿತ್ಯ ಸಮ್ಮೆಳನ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ-ಪತ್ರಕರ್ತ ಸೇಡಂ ನ ಡಾ. ಜಗನ್ನಾಥ ತರನಳ್ಳಿ ಅವರನ್ನು ಆಯ್ಕೆ ಮಾಡಲಾಗಿದ್ದು, ಸ್ವಾಗತ ಸಮಿತಿಗೆ ಜಿಪಂ ನ ಮಾಜಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ, ಮಲ್ಲಿನಾಥ ನಾಗನಹಳ್ಳಿ, ಅನ್ನಪೂರ್ಣ ಸಂಗೋಳಗಿ, ವಿದ್ಯಾಸಾಗರ ದೇಶಮುಖ ಅವರನ್ನು ಆಯ್ಕೆ ಮಾಡಲಾಗಿದೆ.
ಅಂದು ಬೆಳಗ್ಗೆ 9.30 ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದ ವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಸಂಚಾರಿ ಪೊಲೀಸ್ ಠಾಣೆÀ ಆರಕ್ಷಕ ನಿರೀಕ್ಷಕ ಮಹಾಂತೇಶ ಪಾಟೀಲ ಚಾಲನೆ ನೀಡಲಿದ್ದಾರೆ. 10.45 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಿಯುಕೆ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಉದ್ಘಾಟಕರಾಗಿ ಆಗಮಿಸಲಿದ್ದು, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಮಲ್ಲಿನಾಥ ತಳವಾರ, ಹೆಚ್.ಕೆ. ಇ. ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೈಲಾಶ ಬಿ.ಜಿ. ಪಾಟೀಲ, ಪ್ರವೀಣ ಪಾಟೀಲ ಹರವಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ರಚಿತ ಯುವ ಸೌರಭ ಕೃತಿಯನ್ನು ಉದ್ಯಮಿ ಅಣವೀರ ಇಂಗಿನಶೆಟ್ಟಿ ಲೋಕಾರ್ಪಣೆಗೊಳಿಸಲಿದ್ದಾರೆ.
ಮಧ್ಯಾಹ್ನ 12.30 ಕ್ಕೆ ಡಾ. ಅರುಣಕುಮಾರ ಲಗಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರ ವಿಸ್ತಾರ ವಿಶೇಷ ಗೋಷ್ಠಿಯಲ್ಲಿ ವರ್ತಮಾನದ ತಲ್ಲಣಗಳಿಗೆ ಸಾಹಿತ್ಯದ ಸೂತ್ರಗಳು ಡಾ. ಕಲ್ಯಾಣರಾವ ಜಿ ಪಾಟೀಲ, ಜನಜನಾಂಗದ ಕಣ್ಣು ತೆರೆಸುವ ಕವಿ ಕಾವ್ಯ ಕೃತಿಗಳು ಡಾ. ಕಾವ್ಯಶ್ರೀ ಮಹಾಗಾಂವಕರ್, ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಪತ್ರಕರ್ತ ಮಹೇಶ ಕುಲಕರ್ಣಿ ಮಾತನಾಡಲಿದ್ದು, ಡಾ. ವಿಜಯಕುಮಾರ ಗೋತಗಿ ಆಶಯ ನುಡಿಗಳನ್ನಾಡುವರು. ಶಿವಾನಂದ ದ್ಯಾಮಗೊಂಡ, ಮಹೇಶ ಪಟ್ಟಣ, ಸಚೀನ್ ಫರಹತಾಬಾದ, ಮಲ್ಲಿಕಾರ್ಜುನ ಸಾರವಾಡ ಉಪಸ್ಥಿತರಿರುವರು.
ಮಧ್ಯಾಹ್ನ 2.15 ಕ್ಕೆ ಡಾ. ಶ್ರೀಶೈಲ ನಾಗರಾಳ ಅಧ್ಯಕ್ಷತೆಯಲ್ಲಿ ನುಡಿ ಸಡಗರ ಎಂಬ ಯುವ ಕವಿಗೋಷ್ಠಿಯಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ಆಶಯ ನುಡಿಗಳನ್ನಾಡಲಿದ್ದಾರೆ. ವೀರಣ್ಣ ಹೊನ್ನಳ್ಳಿ, ರಮೇಶ ತಿಪ್ಪಣಪ್ಪ ಕಮಕನೂರ, ಶಿವಯೋಗಿ ನಾಗನಹಳ್ಳಿ ಉಪಸ್ಥಿತರಿರುವರು. ಜಿಲ್ಲೆಯ ಅನೇಕ ಯುವ ಕವಿಗಳು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಮ್ಮ ಸ್ವ ರಚಿತ ಕವನಗಳು ವಾಚಿಸಲಿದ್ದಾರೆ.
ಇಳಿಹೊತ್ತು 4.15 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಥೆಗಾರ ಸಿ.ಎಸ್. ಆನಂದ ಸಮಾರೋಪ ನುಡಿಗಳನ್ನಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ನಾಸಿ, ಜಿಪಂ ನ ಮಾಜಿ ಉಪಾಧ್ಯಕ್ಷ ಶ್ರೀಧರ ರತ್ನಾಗಿರಿ, ರೇಷ್ಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶರದ್ ಎನ್ ರೇಷ್ಮಿ, ಜನಪರ ಹೋರಾಟಗಾರ ರವಿ ಮದನಕರ್, ಗುರೂಜಿ ಪದವಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳ ಜಿಲ್ಲೆಯ ಯುವ ಸಾಧಕರಿಗೆ ವಿಜಯ ಚೇತನ ಪುರಸ್ಕಾರವನ್ನು ನೀಡಿ ಸತ್ಕರಿಸಲಾಗುವುದೆಂದು ತಿಳಿಸಿದರು. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಿಲ್ಲೆಯ ಯುವ ಲೇಖಕರ ಪುಸ್ತಕ ಪ್ರದರ್ಶನವೂ ಸಹ ಇದೇ ಸಮದರ್ಭದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನ, ಪೊಲೀಸ್ ಸಾಹಿತ್ಯ ಸಮ್ಮೇಳನ, ಚುಟುಕು ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೆಕ ಪ್ರಥಮ ಸಮ್ಮೇಳನಗಳನ್ನು ಎಂದಿನಂತೆ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಎಂ.ಎನ್. ಸುಗಂಧಿ, ಡಾ. ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ ಇತರರು ಉಪಸ್ಥಿತರಿದ್ದರು.







