ಕಲಬುರಗಿ | ಸೆ.3ರಿಂದ 14ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ನಿಂದ ಸೀರತ್ ಅಭಿಯಾನ

ಕಲಬುರಗಿ: ಮುಹಮ್ಮದ್ ಪೈಗoಬರ್ (ಸ.) ಅವರ ಜನ್ಮ ದಿನಾಚರಣೆ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಮಾಅತೆ ಇಸ್ಲಾಮಿ ಹಿಂದ್ ಕಲಬುರಗಿ ವತಿಯಿಂದ ಸೆ.3ರಿಂದ 14 ರವರೆಗೆ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿಯಾನದ ಪ್ರಯುಕ್ತ ಸೆ.3ರಿಂದ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದರಂತೆಯೇ ಇಲ್ಲಿನ ನಗರದ ಸಂತ್ರಾಸ್ ವಾಡಿಯ ಹಿದಾಯತ್ ಸೆಂಟರ್ ನಲ್ಲಿ ಸಂವಾದ, ವಿಚಾರಗೋಷ್ಠಿ, ರಕ್ತದಾನ ಶಿಬಿರ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರವಾದಿ ಮುಹಮ್ಮದ್(ಸ.ಅ)ರ ನ್ಯಾಯ ಮತ್ತು ಮಾನವೀಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಅಲ್ಲದೇ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನವು "ನ್ಯಾಯದ ಹರಿಕಾರ ಮಹಮ್ಮದ್ ಪೈಗಂಬರ್ʼ ಶೀರ್ಷಿಕೆ ಅಡಿಯಲ್ಲಿ ಜಾಗೃತಿ ನಡೆಸಲಾಗುತ್ತದೆ. ಸಮಾಜದಲ್ಲಿ ಬಿತ್ತಿರುವ ಪ್ರವಾದಿ ಪೈಗಂಬರ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಪರಿಹಾರವಾಗಬೇಕಿದೆ. ಧರ್ಮ, ಧರ್ಮಗಳ ನಡುವೆ ಶಾಂತಿ, ಸೌಹಾರ್ದ, ಸಹೋದರತೆ, ಸಹಾನುಭೂತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಝಾಕೀರ್ ಹುಸೇನ್, ಮಝರುದ್ದೀನ್, ಮುಬೀನ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.







