ಜ.10ರಂದು ಸಿದ್ದಲಿಂಗೇಶ್ವರ ಪ್ರಕಾಶನದಿಂದ 105 ಕೃತಿಗಳ ಲೋಕಾರ್ಪಣೆ: ಡಾ. ಬಸವರಾಜ್ ಕೊನೇಕ್

ಕಲಬುರಗಿ: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ 49ನೇ ವಾರ್ಷಿಕೋತ್ಸವದ ಅಂಗವಾಗಿ ಜನವರಿ 10ರಂದು ಬೆಳಗ್ಗೆ 10.30ಕ್ಕೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ 105 ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಾಶಕ ಡಾ. ಬಸವರಾಜ್ ಕೊನೇಕ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಮನಿ ಕೃತಿಗಳನ್ನು ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಭಾಗವಹಿಸಲಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ಲಿಂಗಪ್ಪ ಗೋನಾಳ ಅವರು ಕೃತಿಗಳ ಕುರಿತು ಮಾತನಾಡಲಿದ್ದಾರೆ. ಪ್ರೊ. ಶಿವರಾಜ್ ಪಾಟೀಲ್ ಪ್ರಸ್ತಾವಿಕ ನುಡಿಗಳನ್ನಾಡುವರು. ಸಾಹಿತಿ ಡಾ. ಜಯದೇವಿ ಗಾಯಕವಾಡ ಗೌರವ ಉಪಸ್ಥಿತರಿರಲಿದ್ದು, ಡಾ. ಬಸವರಾಜ್ ಕೊನೇಕ್ ಅಧ್ಯಕ್ಷತೆ ವಹಿಸುವರು.
ಪ್ರಕಾಶನದ ಸಲಹಾ ಸಮಿತಿಯ ಸದಸ್ಯ ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, 25 ಜನಪ್ರಿಯ ಮಾಲೆಗಳು, 9 ಸಾಹಿತ್ಯ ಕೃತಿಗಳು ಹಾಗೂ 71 ಪಠ್ಯಪುಸ್ತಕಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಮಿರಾವ್ ಕುಲಕರ್ಣಿ, ಪ್ರೊ. ಶಿವರಾಜ್ ಪಾಟೀಲ್, ಡಾ. ಚಿ.ಸಿ. ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧಲಿಂಗ ಕೊನೇಕ್ ಹಾಗೂ ಶರಣಬಸವ ಕೊನೇಕ್ ಉಪಸ್ಥಿತರಿದ್ದರು.







