ಕಲಬುರಗಿ | ಅಂಗನವಾಡಿ ನೌಕರರ 10ನೇ ಜಿಲ್ಲಾ ಸಮ್ಮೇಳನ

ಕಲಬುರಗಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಅಂಗನವಾಡಿ ನೌಕರರ 10ನೇ ಕಲಬುರಗಿ ಜಿಲ್ಲಾ ಸಮ್ಮೇಳನ ನಗರದ ಕನ್ನಡ ಭವನದಲ್ಲಿ ನಡೆಯಿತು.
ಸಮ್ಮೇಳನವನ್ನು ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಗನವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಹಕ್ಕುಗಳ ಕುರಿತು ಸಂಘಟಿತ ಹೋರಾಟದ ಅಗತ್ಯವನ್ನು ಒತ್ತಿಹೇಳಿದರು.
ಅಂಗನವಾಡಿ ನೌಕರರು ಮಕ್ಕಳ ಪೌಷ್ಟಿಕತೆ, ಆರೋಗ್ಯ ಮತ್ತು ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ತಕ್ಕ ಗೌರವ, ಸೌಲಭ್ಯಗಳು ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಬಿ. ಸಜ್ಜನ್, ಜಿಲ್ಲಾ ಕಾರ್ಯದರ್ಶಿ ಶಾಂತಾ ಘಂಟೆ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ರಾಜಮತಿ, ಶ್ರೀಮಂತ ಬಿರಾದಾರ, ಪುಷ್ಪಾ, ದೇವಮ್ಮ ಅನ್ನದಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




