ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿಯಿಂದ 18 ಸಲಹೆ ಸ್ವೀಕರಿಸಲಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಝುಗಳು) ನಿಯಮಗಳು, 2025ರ ಕರಡು ನಿಯಮಗಳನ್ನು ಪರಿಶೀಲಿಸಿ ವರದಿ ನೀಡಲು ನೇಮಿಸಲಾಗಿದ್ದ ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿಯಿಂದ 18 ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಇಂದು(ಆ.5) ನಡೆದ ಸಭೆಯಲ್ಲಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತಲ್ಲದೆ, ಹಲವಾರು ಸಲಹೆಗಳನ್ನು ನೀಡಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರಡು ನಿಯಮಗಳಿಗೆ ಸಂಬಂಧಿಸದಂತೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು, ಅದರಂತೆ 8 ಮಂದಿ ಅಕ್ಷೇಪಣೆಗಳನ್ನು ಸಲ್ಲಿಸಿ, ಕೆಲವರು ಸಲಹೆಗಳನ್ನು ನೀಡಿದ್ದರು, ಇವುಗಳನ್ನು ಸಹ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಚಿವರು ಹೇಳಿದ್ದಾರೆ.
ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ 2025ರ ಕರಡು ನಿಯಮಗಳಲ್ಲಿ ಕೆಲವು ಬದಲಾವಣೆ ತರುವ ಮೂಲಕ ಸುಧಾರಣೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜನಗಳಿಂದ ಆಯ್ಕೆಗೊಂಡು ಗ್ರಾಮ ಪಂಚಾಯತಿಗಳಿಗೆ ಚುನಾಯಿತರಾಗುವ ಜನ ಪ್ರತಿನಿಧಿಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ನಿಯಮಗಳನ್ನು ರೂಪಿಸಬೇಕಾದ ಅವಶ್ಯಕತೆಯಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ತಿಳಿಸಿದರು.







