ಸಿಇಐಆರ್ ಪೋರ್ಟಲ್ ಮೂಲಕ 60 ಲಕ್ಷ ರೂ. ಮೌಲ್ಯದ 300 ಮೊಬೈಲ್‌ಗಳ ಪತ್ತೆ
ಕಲಬುರಗಿ ಪೊಲೀಸರಿಂದ ಕಾರ್ಯಾಚರಣೆ; ವಿವಿಧ ರಾಜ್ಯಗಳಿಂದ ಮೊಬೈಲ್‌ಗಳ ವಶ

ಕಲಬುರಗಿ : ಕಳೆದುಹೋಗಿದ್ದ ಹಾಗೂ ಕಳ್ಳತನವಾಗಿದ್ದ ಒಟ್ಟು 60 ಲಕ್ಷ ರೂ. ಮೌಲ್ಯದ 300 ಮೊಬೈಲ್‌ಗಳನ್ನು ಕಲಬುರಗಿ ನಗರ ಪೊಲೀಸರು ಸಿಇಐಆರ್ (CEIR) ಪೋರ್ಟಲ್ ಹಾಗೂ ಇ-ಲಾಸ್ಟ್ (E-Lost) ಮೂಲಕ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನಗರದ ವಿವಿಧ ಪೊಲೀಸ್ ಠಾಣೆಗಳು ಹಾಗೂ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಪತ್ತೆಯಾದ 300 ಮೊಬೈಲ್‌ಗಳಲ್ಲಿ ಕರ್ನಾಟಕದ 230, ಮಹಾರಾಷ್ಟ್ರದ 28, ಆಂಧ್ರಪ್ರದೇಶದ 22, ತೆಲಂಗಾಣದ 13, ಉತ್ತರ ಪ್ರದೇಶದ 6 ಹಾಗೂ ಕೇರಳದ ಒಂದು ಮೊಬೈಲ್ ಸೇರಿವೆ.
ಕಲಬುರಗಿ ನಗರ ವ್ಯಾಪ್ತಿಯೊಂದರಲ್ಲೇ 158 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಕಲಬುರಗಿ ಜಿಲ್ಲೆಯ ಇತರ ಭಾಗಗಳಿಂದ 26 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯಪುರದಿಂದ 15, ಬೀದರ್‌ನಿಂದ 10, ರಾಯಚೂರಿನಿಂದ 8, ಬೆಂಗಳೂರಿನಿಂದ 6, ಬಳ್ಳಾರಿಯಿಂದ 4, ಯಾದಗಿರಿಯಿಂದ 3 ಹಾಗೂ ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಿಂದ ತಲಾ ಒಂದು ಮೊಬೈಲ್ ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸ್ ಠಾಣಾವಾರು ಪತ್ತೆ ಕಾರ್ಯದಲ್ಲಿ ಚೌಕ್ ಪೊಲೀಸ್ ಠಾಣೆ 47, ಸಿಇಎನ್ 38, ಸಬ್ ಅರ್ಬನ್ 38, ವಿಶ್ವವಿದ್ಯಾಲಯ ಪೊಲೀಸ್ ಠಾಣೆ 36, ಎಂ.ಬಿ. ನಗರ 30, ರೋಜಾ 23, ಅಶೋಕ ನಗರ 23, ಸ್ಟೇಷನ್ ಬಜಾರ್ 23, ಬ್ರಹ್ಮಪುರ 20, ಆರ್.ಜಿ. ನಗರ 18 ಹಾಗೂ ಫರಹತಾಬಾದ್ ಪೊಲೀಸ್ ಠಾಣೆ 4 ಮೊಬೈಲ್‌ಗಳನ್ನು ಪತ್ತೆಹಚ್ಚಿವೆ.
ಪತ್ತೆಯಾದ ಮೊಬೈಲ್‌ಗಳಲ್ಲಿ ರೆಡ್ಮಿ ಕಂಪನಿಯ 68, ವಿವೋ 52, ಒಪ್ಪೋ 41, ಒನ್‌ಪ್ಲಸ್ 36, ಸ್ಯಾಮ್‌ಸಂಗ್ 25, ಪೊಕೊ 24, ರಿಯಲ್‌ಮಿ 20, ಮೊಟೊರೊಲಾ 13, ಟೆಕ್ನೋ ಸ್ಪಾರ್ಕ್ 9, ಐಕ್ಯೂ 7 ಹಾಗೂ ಐಟೆಲ್ ಕಂಪನಿಯ 5 ಮೊಬೈಲ್‌ಗಳಿವೆ.
ಮೊಬೈಲ್ ಕಳೆದುಕೊಂಡವರು ತಕ್ಷಣ ಇ-ಲಾಸ್ಟ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವುದರ ಜೊತೆಗೆ ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್‌ಗಳನ್ನು ಬ್ಲಾಕ್ ಮಾಡಿಸಬೇಕು. ಮೊಬೈಲ್‌ಗಳಲ್ಲಿ ‘ಫೈಂಡ್ ಮೈ ಡಿವೈಸ್’ (Find My Device) ಸೆಟ್ಟಿಂಗ್ ಸಕ್ರಿಯಗೊಳಿಸಬೇಕು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡಾಗ ವಿಳಂಬ ಮಾಡದೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದರು.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದರು.






