ಕಲಬುರಗಿ | ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ : ಯಾವುದೇ ಒಬ್ಬ ವ್ಯಕ್ತಿ ಯಾವುದೇ ಸಾಧನೆ ಮಾಡಬೇಕಾದರೆ ತನ್ನ ಮಾತಾಜಿ, ಪಿತಾಜಿ ಮತ್ತು ಗುರೂಜಿ ಎಂಬ 3ಜಿ ಮಹನೀಯರಿಗೆ ಗೌರವ ನೀಡಿ, ಅವರ ಮಾತುಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗಲು ಸಾಧ್ಯವಾಗುತ್ತದೆ ಎಂದು ಯಡ್ರಾಮಿ ವಿರಕ್ತ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರವಿರುವ ಕದಂಬ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾಲೇಜಿನ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಶೀಕ್ಷಿತ ವರ್ಗದವರಿದ್ದರೂ ಸಮಾಜ ಹಾಳಾಗುತ್ತಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ ಅವರು ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ಶಿಸ್ತು, ಸಂಯಮ, ಪ್ರಯತ್ನಶೀಲ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಅಧ್ಯಯನ, ಪ್ರಯತ್ನ ಅಗತ್ಯ. ವೈಚಾರಿಕತೆಯ ಬದುಕು ನಮ್ಮದಾಗಬೇಕು. ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಕೆ. ಖಣದಾಳ, ಪ್ರಮುಖರಾದ ಮರಲಿಂಗಮ್ಮ, ಅಲ್ಲಾಪಟೇಲ್ ಚಿಂಚೋಳಿ, ಭೀಮರಾಯ ಘತ್ತರಗಿ, ಮೌನೇಶ ಬಡಿಗೇರ, ಸಿದ್ದು ಉಪ್ಪಾರ, ಮಲ್ಲಿಕಾರ್ಜುನ ಯಾದಗಿರಿ, ಶ್ರೀಶೈಲ ರಾಠೋಡ, ಪರಶುರಾಮ, ಸಿದ್ದು ಎಂ.ಪೂಜಾರಿ, ಮಶಾಕ ಬಡಿಗೇರ, ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡೂರ, ಅಮರೇಶ,ಅಶೋಕ ಸಜ್ಜನ, ಮಡಿವಾಳಪ್ಪ ಕಡಕೋಳ,ರಾಯಣ್ಣ ಕಟ್ಟಿಮನಿ ವೇದಿಕೆ ಮೇಲಿದ್ದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕರು ಮತ್ತು ಕಳೆದ ಸಾಲಿನ ದ್ವಿತೀಯ ಪಿಯುಸಿ ಟಾಪರ್ ಅವರಿಗೆ ಸತ್ಕರಿಸಿ,ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







