ಮುಸ್ಲಿಂ ಸಮುದಾಯಕ್ಕೆ 5 ಸಚಿವ ಸ್ಥಾನ, ಝಮೀರ್ ಅಹ್ಮದ್‌ಗೆ ಡಿಸಿಎಂ ಹುದ್ದೆ ನೀಡಿ: ಮಕ್ಬೂಲ್ ಪಟೇಲ್ ಆಗ್ರಹ

ಅಫಜಲಪುರ: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿರುವ ಶಾಸಕ ಝಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಮಕ್ಬೂಲ್ ಪಟೇಲ್ ಒತ್ತಾಯಿಸಿದ್ದಾರೆ.
ಸೋಮವಾರ ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರ ಮೊದಲ ಸಚಿವ ಸಂಪುಟದಲ್ಲಿ ಝಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬಹುದು ಎಂದು ಬಹಳಷ್ಟು ನಿರೀಕ್ಷೆ ಹೊಂದಿತ್ತು. ಆದರೆ ಕೆಲವು ಷಡ್ಯಂತ್ರಗಳಿಂದ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ನೋವು ತಂದಿದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಅಲ್ಲದೇ ಸುದೀರ್ಘ 30 ವರ್ಷಗಳಕ್ಕಿಂತ ಹೆಚ್ಚು ಕಾಲ ಕೇಂದ್ರದಲ್ಲಿ ರಾಜಕೀಯ ಮಾಡಿ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವರ ನೇತ್ರತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
ಮುನೀರ್ ಪಟೇಲ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಶೇ.14ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ 5 ಸ್ಥಾನಗಳು ನಮ್ಮ ಸಮುದಾಯಕ್ಕೆ ಕೊಡಬೇಕು. ಪ್ರತಿ ಚುನಾವಣೆಯಲ್ಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿರುವುದರಿಂದ ವರಿಷ್ಠರು ನಮ್ಮ ಸಮುದಾಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ರಿಯಾನ್, ವಾಹಿದ್ ಪಟೇಲ್, ಗಾಲೀಬ್ ಮುಜಾವರ, ಆರೀಫ್ ಸಾಬ್ ಕೊರಬು, ಇಲಿಯಾಸ್ ಪಟೇಲ್, ರಫೀಸ್ ಅಲ್ಲಾಲೇಖ್, ಮೌಲಾನಾ ಅಮೀನೋದ್ದಿನ್ ಖಾಸಮಿ, ಮೊಹಮ್ಮದ್ ರಫೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






