79ನೇ ಕಲ್ಯಾಣ ಕರ್ನಾಟಕ ಉತ್ಸವ–2026 | ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ–2026ರ ಅಂಗವಾಗಿ ಸೆಪ್ಟೆಂಬರ್ 16 ಮತ್ತು 17ರಂದು ಕಲಬುರಗಿ ನಗರದಲ್ಲಿ ಆಯೋಜಿಸಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವಜನರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಜನರೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ನಗರದ ವಿವಿಧ ವೇದಿಕೆಗಳಲ್ಲಿ ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 79ನೇ ಕಲ್ಯಾಣ ಕರ್ನಾಟಕ ಉತ್ಸವವನ್ನು ಜನರ ಉತ್ಸವವನ್ನಾಗಿ ಆಚರಿಸುವ ಸಂಕಲ್ಪದೊಂದಿಗೆ ಈ ಬಾರಿಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಥಳೀಯ ಕಲಾವಿದರು ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಸೆಪ್ಟೆಂಬರ್ 16 ಮತ್ತು 17ರಂದು ಕಲಬುರಗಿ ನಗರವೇ ಉತ್ಸವದ ಸಂಭ್ರಮದಲ್ಲಿ ಕಂಗೊಳಿಸಲಿದ್ದು, ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೇ ಉತ್ಸವದ ಯಶಸ್ಸಿಗೆ ಕಾರಣವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಸೆ.16ರಂದು ವೈವಿಧ್ಯಮಯ ಕಾರ್ಯಕ್ರಮ :
ನಗರದ ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ, ಶಾಸ್ತ್ರೀಯ ನೃತ್ಯ ಹಾಗೂ ವಿವಿಧ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಟ್ರೀಟ್ ಫೆಸ್ಟಿವಲ್‌ಗೆ ಚಾಲನೆ ನೀಡಲಿದ್ದು, ಬಳಿಕ ರಾತ್ರಿ 8.30ರಿಂದ 10 ಗಂಟೆಯವರೆಗೆ ಸವಾರಿ ಬ್ಯಾಂಡ್ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.
ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ 8.30ರವರೆಗೆ ಭೈರವ್ ಮತ್ತು ತಂಡದಿಂದ ಇಂಡೋ–ಫ್ಯೂಷನ್ ವಾದ್ಯ ಪ್ರದರ್ಶನ ನಡೆಯಲಿದೆ. ರಾತ್ರಿ 8.30ಕ್ಕೆ ಮುಖ್ಯಮಂತ್ರಿಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದ್ದು, ಬಳಿಕ 3ಡಿ ಲೈಟ್ ಶೋ ಹಾಗೂ ಡ್ರೋನ್ ಶೋ ಪ್ರದರ್ಶನವೂ ಇರಲಿದೆ.
ಸೆ.17ರಂದು ವಿಮೋಚನಾ ದಿನಾಚರಣೆ, ಸಂಗೀತ–ನೃತ್ಯ ರಂಗು :
ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಇದೇ ವೇಳೆ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದಿಂದ ಸಮೂಹ ನೃತ್ಯ ಹಾಗೂ ಖ್ಯಾತ ಕಲಾವಿದ ವಿಲಾಸ್ ನಾಯಕ್ ಅವರಿಂದ ಲೈವ್ ಪೇಂಟಿಂಗ್ ಪ್ರದರ್ಶನ ನಡೆಯಲಿದೆ.
ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಂಜೆ 6.30ರಿಂದ ಗಣೇಶ ವಂದನೆ, ವಿವೇಕ ಮರಳಿಧರನ್, ಎಸ್. ಸೋನುವೇಣು ಗೋಪಾಲ್ ಹಾಗೂ ಸೃಷ್ಟಿ ಅವರಿಂದ ಸ್ಟ್ಯಾಂಡ್‌ಅಪ್ ಕಾಮಿಡಿ, ಸ್ಟೆಪ್ ಎನ್ ಸ್ಟೈಲ್ ತಂಡದಿಂದ ಸಮಕಾಲೀನ ನೃತ್ಯ ಮತ್ತು ರಾತ್ರಿ 8ರಿಂದ 10 ಗಂಟೆಯವರೆಗೆ ಬೆಂಗಳೂರು ಮೂಲದ ಅಕೌಸ್ಟಿಕ್ ಸಾಗಾ ತಂಡದಿಂದ ಬಹುಭಾಷಾ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪಬ್ಲಿಕ್ ಗಾರ್ಡನ್‌ನಲ್ಲಿ ಸುಗಮ ಸಂಗೀತ, ನೃತ್ಯ ಹಾಗೂ ಝೀ ಕನ್ನಡ ಸರೆಗಮಪಾ ತಂಡದಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ರಾತ್ರಿ 9.30ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ–ಬೆಳಕು (ಸೌಂಡ್ ಅಂಡ್ ಲೈಟ್) ಕಾರ್ಯಕ್ರಮ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಜಿಲ್ಲೆಯ ಜನರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ ಕಲ್ಯಾಣ ಕರ್ನಾಟಕದ ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂಭ್ರಮವನ್ನು ಹಂಚಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.






