8 ವರ್ಷ ಕಳೆದರೂ ಯಡ್ರಾಮಿ ತಾಲೂಕಿಗೆ ಸ್ವಂತ ಸರಕಾರಿ ಕಚೇರಿಗಳಿಲ್ಲ

ಯಡ್ರಾಮಿ: ತಾಲೂಕು ಕೇಂದ್ರವೆಂದು ಘೋಷಣೆಯಾಗಿ 8 ವರ್ಷ ಕಳೆದರೂ ಸರಕಾರಿ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇನ್ನು ಬೆರಳೆಣಿಕೆಯಷ್ಟು ಕಚೇರಿಗಳು ಆರಂಭವಾಗಿದ್ದರೂ ಕೂಡ ಅವುಗಳು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
2018ರಲ್ಲಿ ಅಧಿಕೃತವಾಗಿ ಆಗಿನ ಸರಕಾರದ ಅವಧಿಯಲ್ಲಿ ಯಡ್ರಾಮಿ ಸೇರಿದಂತೆ 48 ನೂತನ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಘೋಷಣೆಯಾಗಿ ನೂತನ ತಾಲೂಕು ರಚನೆಯಾಗಿ ಸುಮಾರು 8 ವರ್ಷ ಕಳೆದಿದೆ. ಆದರೆ, ಆಡಳಿತ ಯಂತ್ರ ಮಾತ್ರ ಚುರುಕು ಪಡೆದಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ರೈತರು, ಕೃಷಿ ಕಾರ್ಮಿಕರು, ಜೇವರ್ಗಿ ತಾಲೂಕಿನ ಮೇಲೆ ಅವಲಂಬನೆ ಆಗಬೇಕಿದೆ. ಕೆಲವು ಪ್ರಮುಖ ದಾಖಲೆ, ಮಾಹಿತಿ ಪಡೆಯಲು ನೆರೆಯ ಪಟ್ಟಣಕ್ಕೆ ಓಡಾಡುವುದು ಅನಿವಾರ್ಯವಾಗಿಬಿಟ್ಟಿದೆ.
ಕಚೇರಿಗಳು ಇಲ್ಲದೆ ಆಡಳಿತ ಯಂತ್ರ ಕುಸಿತ :
ಜೇವರ್ಗಿ ತಾಲೂಕಿನಿಂದ ಯಡ್ರಾಮಿ ಪಟ್ಟಣವನ್ನು ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡಲಾಗಿದೆ. ಆದರೆ ಯಡ್ರಾಮಿ ತಾಲೂಕು ವ್ಯಾಪ್ತಿಯ ಸರಕಾರಿ ಇಲಾಖೆ ಕಚೇರಿಗಳು ಜೇವರ್ಗಿ ತಾಲೂಕಿನಲ್ಲಿ ಹರಿದು ಹಂಚಿಕೆಯಾಗಿವೆ. ಇದು ಸಾರ್ವಜನಿಕರಿಗೆ ಗೊಂದಲವುಂಟು ಮಾಡುತ್ತಿವೆ. ಯಡ್ರಾಮಿ ತಾಲೂಕಿನ ಕೆಲವು ಹಳ್ಳಿಗಳು ಜೇವರ್ಗಿ ಸಿಡಿಪಿಒ ಕಚೇರಿ ವ್ಯಾಪ್ತಿಗೆ ಒಳಪಡುತ್ತಿವೆ.
ಇನ್ನು ಇಜೇರಿ ಸೇರಿದಂತೆ ಕೆಲವು ಗ್ರಾಮಗಳು ಜೇವರ್ಗಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಕೊಂಡಿವೆ. ಇದರಿಂದ ಯಡ್ರಾಮಿ ತಾಲೂಕು ಕಚೇರಿಗಳು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದೇ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದೆ. ಇಲಾಖೆ ಕಚೇರಿಗಳು ಇಲ್ಲದೆ ಇರುವುದರಿಂದ ಆಡಳಿತ ಯಂತ್ರ ಕುಸಿಯುವಂತಾಗಿದೆ.
ಜೇವರ್ಗಿಯಲ್ಲೇ ಉಳಿದ ಇಲಾಖೆಗಳು :
ಜೇವರ್ಗಿ ತಾಲೂಕಿನಿಂದ ಯಡ್ರಾಮಿ ಪಟ್ಟಣ ಬೇರ್ಪಟ್ಟು ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಸುಮಾರು ವರ್ಷಗಳೇ ಕಳೆದಿವೆ. ಆದರೆ ಬಹುತೇಕ ಸರಕಾರಿ ಇಲಾಖೆಗಳು ಇನ್ನು ಜೇವರ್ಗಿ ತಾಲೂಕಿನಲ್ಲಿಯೇ ಉಳಿದು ಕೊಂಡಿವೆ. ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಪೊಲೀಸ್ ಇಲಾಖೆ ಕಚೇರಿ ಸೇರಿ ಬೆರಳೆಣಿಕೆಯಷ್ಟು ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಒಂದು ಕಡೆ ನಿರ್ಮಿಸದೆ ದಿಕ್ಕಿಗೊಂದು ನಿರ್ಮಾಣವಾಗಿವೆ. ಇದರಿಂದ ಅಲ್ಲಿಗೆ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಕಚೇರಿಗಳಿಗೆ ಆಟೊ ಹೋಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲಾಗದೆ ಪರಿಸ್ಥಿತಿ ಉಂಟಾಗಿದೆ.
ಯಡ್ರಾಮಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಹಲವು ವರ್ಷ ಕಳೆದರೂ, ಇನ್ನು ಅಧಿಕೃತ ಕಚೇರಿಗಳು ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಸರಕಾರ ಈ ಬಗ್ಗೆ ಗಮನಹರಿಸಬೇಕು.
-ಶರಣಪ್ಪ , ಸ್ಥಳೀಯ ನಿವಾಸಿ, ಯಡ್ರಾಮಿ







