3 ವರ್ಷಗಳ ಕಾಲ ಹೋರಾಟದ ಪರ್ವ : ಬಿ.ವೈ.ವಿಜಯೇಂದ್ರ

PC | X@BYVijayendra
ಕಲಬುರಗಿ : ಇನ್ನು 3 ವರ್ಷಗಳ ಕಾಲ ಹೋರಾಟದ ಪರ್ವ ಎಂಬುದನ್ನು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಪೂರ್ವಕ ಮನವಿ ಮಾಡಿದ್ದಾರೆ.
ಜನಾಕ್ರೋಶ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿ ನಮ್ಮ ಕಾರ್ಯಕರ್ತರಿಗೆ ನೋವು, ಅವಮಾನ ಆಗುತ್ತದೋ ಅಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ, ಒಂದಾಗಿ ಹೋಗಿ ಅವರಿಗೆ ರಕ್ಷಣೆ ಕೊಡಬೇಕು ಎಂದು ಸೂಚಿಸಿದರು.
ಕಾಂಗ್ರೆಸ್ಸಿನಲ್ಲಿ ರಾಜಕಾರಣ ಮಾಡಲು ಯಾವ ಗಂಡಸಿದ್ದಾನೆಂದು ನಾನು ಕೂಡ ನೋಡುತ್ತೇನೆ ಎಂದು ಸವಾಲು ಹಾಕಿದರು. ಯಾರೂ ಹೆದರುವ ಅಗತ್ಯವಿಲ್ಲ. ಹೊಂದಾಣಿಕೆಯ ರಾಜಕಾರಣ ಮಾಡಲು ನಮ್ಮ ಕಾರ್ಯಕರ್ತರು ಪುಕ್ಕಟೆಯಾಗಿ ಬಂದಿಲ್ಲ ಎಂದು ತಿಳಿಸಿದರು.
ಚುನಾವಣೆ ಬಂದಾಗ ರಾಜಕಾರಣ ಮಾಡುವುದನ್ನು ಬಿಟ್ಟು ವರ್ಷಪೂರ್ತಿ ರಾಜಕಾರಣ ಮಾಡುವುದನ್ನು ಅಭ್ಯಾಸ ಮಾಡಿ. ಗುಲ್ಬರ್ಗ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ನಾವು ಯಾಕೆ ಗೆಲ್ಲಲು ಸಾಧ್ಯವಿಲ್ಲ ಎಂಬ ಸವಾಲನ್ನು ರಾಜ್ಯದ ಅಧ್ಯಕ್ಷನಾಗಿ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಋಣಿ :
ಯಾವನೇ ಬರಲಿ, ಅವನ ಶಕ್ತಿಯನ್ನು ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಇದೆ. ಮುಖಂಡರೆಲ್ಲರೂ ದಯವಿಟ್ಟು ಒಗ್ಗಟ್ಟಾಗಿರಿ ಎಂದು ಎಚ್ಚರಿಸಿದರು.
ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂಥ ಉರಿ ಬಿಸಿಲಲ್ಲೂ ಕೂಡ ಸಾವಿರಾರು ಕಾರ್ಯಕರ್ತರು, ತಾಯಂದಿರು ದೊಡ್ಡ ಸಂಖ್ಯೆಯಲ್ಲಿ ಬಂದು ಜನಾಕ್ರೋಶ ಯಾತ್ರೆಯನ್ನು ಯಶಸ್ವಿಯಾಗಿ ಮಾಡಿದ್ದೀರಿ. ತಮ್ಮ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ಅವರು ನುಡಿದರು.
ಗುಲ್ಬರ್ಗದಲ್ಲಿ ಯಾವನೇ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ನಿಮ್ಮ ವಿಜಯೇಂದ್ರ ನಿಮ್ಮ ಜೊತೆಗಿರುತ್ತಾರೆ. 3 ಕಾರಣಗಳಿಗೆ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ರಾಮರಾಜ್ಯ ನಿರ್ಮಿಸುವ ಮಾದರಿಯಲ್ಲಿ ನೀಡಿದ ಭರವಸೆಗಳನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತ ಬಳಿಕ ಸಂಪೂರ್ಣವಾಗಿ ಮರೆತಿದ್ದಾರೆ. ಗ್ಯಾರಂಟಿ ಪ್ರಚಾರದ ಹಿನ್ನೆಲೆಯಲ್ಲಿ ನಾವು ಕೂಡ ಲೋಕಸಭಾ ಚುನಾವಣೆಯಲ್ಲಿ ಆತಂಕಕ್ಕೆ ಈಡಾಗಿದ್ದೆವು. ಮತದಾರರು ಬೂತ್ನಲ್ಲಿ ಮತ ಹಾಕುವ ಒಂದೆರಡು ದಿನಗಳ ಮೊದಲು ಗ್ಯಾರಂಟಿ ಹಣ ಹಾಕಿದ್ದರು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರನ್ನು ಭಿಕ್ಷುಕರ ರೀತಿ ನೋಡುತ್ತಿದ್ದಾರೆ. ಒಂದೆಡೆ ಮಹಿಳೆಯರಿಗೆ ಪುಕ್ಕಟೆ ಪ್ರಯಾಣ ಎನ್ನುತ್ತಾರೆ. ಇನ್ನೊಂದೆಡೆ ಗ್ರಾಮೀಣ ಭಾಗದ ಸಾವಿರಾರು ಬಸ್ ಓಡಾಟವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು. ಇದರ ಪರಿಣಾಮವಾಗಿ ಶಾಲಾ, ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ರೈತರ, ಬಡವರ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಎಸ್ಆರ್ಟಿಸಿಗೆ 6,500 ಕೋಟಿ ರೂ. ವನ್ನು ಸರಕಾರ ಕೊಡಬೇಕಾಗಿದೆ. ಸರಕಾರಕ್ಕೆ ದುಡ್ಡು ಕೊಡಲು ಆಗುತ್ತಿಲ್ಲ. ವಿದ್ಯುತ್ ದರ ಯೂನಿಟ್ಗೆ 36 ಪೈಸೆ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆಯವರು ಗುಲ್ಬರ್ಗಾದಲ್ಲಿ ಯುವಕರಿಗೆ ನೌಕರಿ ಕೊಡುವುದಾಗಿ ಹೇಳಿ ಸರಕಾರಿ ದುಡ್ಡು, 4 ಕೋಟಿ ರೂ. ಖರ್ಚು ಮಾಡಿ, 1 ಲಕ್ಷ ಯುವಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ, ಖಾಸಗಿ ಸಂಸ್ಥೆಗಳಲ್ಲಿ 1,200 ಉದ್ಯೋಗ ನೀಡಿದ್ದಾರೆ. 1,200 ಜನರಿಗೆ ಉದ್ಯೋಗ ಕೊಡಲು 4 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದು ರಾಜ್ಯ ಸರಕಾರದ ಕಾರ್ಯವೈಖರಿ ಎಂದು ಶ್ರೀರಾಮುಲು ಅವರ ಮಾತನ್ನು ಉಲ್ಲೇಖಿಸಿ ವಿವರಿಸಿದರು.
ಚಿತ್ತಾಪುರ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಕಾಗಿಣಾ ನದಿಯಲ್ಲಿ ಮರಳು ಮಾಫಿಯ ಜಿಲ್ಲಾ ಉಸ್ತುವಾರಿ ಸಚಿವರ ಮೂಗಿನ ಕೆಳಗೇ ನಡೆಯುತ್ತಿದೆ. ಒಂದೇ ನಂಬರ್ ಪ್ಲೇಟ್ನಲ್ಲಿ ನಾಲ್ಕೈದು ಟ್ರಕ್ ಓಡಾಡುತ್ತಿವೆ. ಕಾನೂನುಬಾಹಿರವಾಗಿ ಮಹಾರಾಷ್ಟ್ರ, ಅಕ್ಕಪಕ್ಕದ ರಾಜ್ಯಗಳಿಗೆ ಮರಳು ಮಾಫಿಯ ವಿಸ್ತರಣೆ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಉಸ್ತುವಾರಿ ಸಚಿವರಿಗೆ ಇದರ ಬಗ್ಗೆ ಗಮನಿಸಲು ಸಾಧ್ಯ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಅವರ ಮೂಗಿನ ಕೆಳಗೇ ಭ್ರಷ್ಟಾಚಾರ, ಸ್ಯಾಂಡ್ ಮಾಫಿಯ ನಡೆದಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸ್ವಂತ ಜಿಲ್ಲೆಯಲ್ಲಿ ಈ ರೀತಿ ಹಗಲು ದರೋಡೆಗೆ ಯಾಕೆ ಅವಕಾಶ ಕೊಟ್ಟಿದ್ದಾರೆ? ಅವರಿಗೇನು ಲಾಭ ಇದರಿಂದ? ಇದನ್ನು ಉತ್ತರಿಸಬೇಕೆಂದು ಆಗ್ರಹಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಡಾ. ಅವಿನಾಶ್ ಜಾಧವ್, ಬಸವರಾಜ ಮತ್ತಿಮೂಡ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಸುನೀಲ್ ವಲ್ಯಾಪುರೆ, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಸುಭಾಷ್ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ರೇವೂರ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಮರನಾಥ್ ಪಾಟೀಲ್, ಶಶಿಲ್ ಜಿ. ನಮೋಶಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಹೆಚ್. ಪಾಟೀಲ್ ನಡಹಳ್ಳಿ, ಮುಖಂಡ ನಿತಿನ್ ಗುತ್ತೇದಾರ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ. ಪಾಟೀಲ್, ಕಲಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಕಲಬುರ್ಗಿ ಗ್ರಾಮಾಂತರ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.







