ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ 60 ವರ್ಷಗಳ ನೀಲಿನಕ್ಷೆ ರೂಪಿಸಬೇಕು: ಸಚಿವ ಪ್ರಿಯಾಂಕ್ ಖರ್ಗೆ
"ಕಲ್ಯಾಣ ಕರ್ನಾಟಕದ ಜಿಡಿಪಿ ಹೆಚ್ಚಳಕ್ಕೆ ಸ್ಥಳೀಯ ಸಂಪನ್ಮೂಲಗಳ ಬಳಕೆಯಾಗಲಿ"

ಕಲಬುರಗಿ: ರಾಜ್ಯದ ಒಟ್ಟು ಜಿಡಿಪಿಯಲ್ಲಿ ಬೆಂಗಳೂರಿನ ಪಾಲು ಶೇ.41ರಷ್ಟಿದ್ದರೆ, ಕಲಬುರಗಿ ಜಿಲ್ಲೆಯ ಪಾಲು ಕೇವಲ ಶೇ.1.9ರಷ್ಟಿದೆ. ಈ ಆರ್ಥಿಕ ಅಂತರವನ್ನು ಕಡಿಮೆ ಮಾಡಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಮುಂದಿನ 60 ವರ್ಷಗಳ ದೂರದೃಷ್ಟಿಯ ಅಭಿವೃದ್ಧಿ ನೀಲಿನಕ್ಷೆ ರೂಪಿಸಬೇಕಿದೆ. ಸ್ಥಳೀಯ ಸಂಪನ್ಮೂಲಗಳಿಗೆ ಮೌಲ್ಯವರ್ಧನೆ ಮಾಡಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಸೇಡಂ ರಸ್ತೆಯ ಎಂ.ಆರ್.ಎಂ.ಸಿ. ಸ್ಯಾಕ್ ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಆಯೋಜಿಸಿದ್ದ ಸಂಸ್ಥೆಯ ವಜ್ರ ಮಹೋತ್ಸವ ಹಾಗೂ ಕೈಗಾರಿಕಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಕೆಸಿಸಿಐ ಸಂಸ್ಥೆ 60 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮುಂದಿನ ಆರು ದಶಕಗಳ ಕಾರ್ಯಯೋಜನೆ ಹಾಗೂ ಅಭಿವೃದ್ಧಿಯ ನೀಲಿನಕ್ಷೆ ಸಿದ್ಧಪಡಿಸುವ ಅಗತ್ಯವಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯಮಿಗಳು ಈ ನಿಟ್ಟಿನಲ್ಲಿ ಮುಂದೆ ಬಂದರೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ರಾಜ್ಯದ ಜಿಡಿಪಿಯಲ್ಲಿ ಬೆಂಗಳೂರಿನ ಪಾಲು ಶೇ.41ರಷ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಆದರೆ ಕಲಬುರಗಿ ಜಿಲ್ಲೆಯ ಪಾಲು ಕೇವಲ ಶೇ.1.9ರಷ್ಟಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜಿಡಿಪಿಯಲ್ಲಿ ಗಣನೀಯ ಬದಲಾವಣೆ ತರುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಬೇಕಿದೆ. ಈ ಪ್ರಯತ್ನಕ್ಕೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿವೆ. ಪ್ರತಿಯೊಂದು ಪ್ರದೇಶದ ಆರ್ಥಿಕ ಸಾಮರ್ಥ್ಯ ಹಾಗೂ ಅಲ್ಲಿನ ವಿಶೇಷ ಸಂಪನ್ಮೂಲಗಳನ್ನು ಗುರುತಿಸಿ ಉದ್ಯಮಗಳನ್ನು ಸ್ಥಾಪಿಸಬೇಕು. ಕಲಬುರಗಿ ಜಿಲ್ಲೆಯ ತೊಗರಿ, ವಿವಿಧ ಬೇಳೆಕಾಳುಗಳು, ಸಿಮೆಂಟ್ ಹಾಗೂ ಕಮಲಾಪುರದ ಬಾಳೆಹಣ್ಣು ಸೇರಿದಂತೆ ಸ್ಥಳೀಯ ಸಂಪನ್ಮೂಲಗಳಿಗೆ ಮೌಲ್ಯವರ್ಧನೆ ಮಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಬೇಕು. ಇಂತಹ ನವೋದ್ಯಮಗಳಿಗೆ ಸರ್ಕಾರ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ನೀಡಲಿದೆ ಎಂದು ಹೇಳಿದರು.
ಉದ್ಯಮಗಳು ಕೇವಲ ಮಾನವ ಸಂಪನ್ಮೂಲ ಮತ್ತು ಬಂಡವಾಳ ಲಭ್ಯವಿರುವ ಪ್ರದೇಶಗಳಿಗೆ ಸೀಮಿತವಾಗಬಾರದು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ಹೊಸ ಉದ್ಯಮಗಳನ್ನು ಸ್ಥಾಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳ ಉದ್ಯಮಿಗಳು ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಇಲ್ಲಿಯೇ ಕೈಗಾರಿಕೆಗಳನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು.
ಮೈಸೂರು ಭಾಗದಲ್ಲಿ ನೋಕಿಯಾ ಸಂಸ್ಥೆಯ ಇನ್ನೋವೇಶನ್ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಲ್ಲಿನ ಸಭಾಂಗಣವೊಂದಕ್ಕೆ ಅಲ್ಲಮಪ್ರಭು ಅವರ ಹೆಸರಿಡಲಾಗಿತ್ತು. ಈ ಕುರಿತು ವಿಚಾರಿಸಿದಾಗ, ಹೊಸ ಮೂಲಸೌಕರ್ಯಗಳಿಗೆ ಹೆಸರು ನಿಗದಿಪಡಿಸುವ ಸಂದರ್ಭದಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ತಿಳಿಸಿದ್ದರು. ಅಲ್ಲಮಪ್ರಭು ನಮ್ಮ ಭಾಗದ ಚಿರಪರಿಚಿತ ಹೆಸರು. ಇದರಿಂದ ಕಲ್ಯಾಣ ಕರ್ನಾಟಕದ ಜನರು ಅಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಈ ಭಾಗದ ಜನರಲ್ಲಿ ಪ್ರತಿಭೆ, ಜ್ಞಾನ ಹಾಗೂ ಕೆಲಸ ಮಾಡುವ ಆಸಕ್ತಿ ಇದೆ. ಆದರೆ ಅವರಿಗೆ ಅಗತ್ಯ ಉದ್ಯೋಗಾವಕಾಶಗಳು ಮತ್ತು ಸೂಕ್ತ ವೇದಿಕೆಗಳ ಕೊರತೆಯಿದೆ. ಈ ಕೊರತೆ ನೀಗಿಸಲು ಲೀಪ್ ಯೋಜನೆಯಡಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಅನುದಾನ ಒದಗಿಸಿದೆ. ಐಟಿ ಪಾರ್ಕ್, ಕೃಷಿ ಕಲ್ಪ ಹಾಗೂ ಕರ್ನಾಟಕ ಡಿಜಿಟಲ್ ಮಿಷನ್ ಮೂಲಕ ನವೋದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಬೆಂಗಳೂರು ಹೊರತಾಗಿಯೂ ಕಲ್ಯಾಣ ಕರ್ನಾಟಕದಲ್ಲಿ ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರದೇಶದ ಆರ್ಥಿಕ ಪ್ರಗತಿಗೆ ಬಲ ತುಂಬಲು ಕಲ್ಯಾಣ ಕರ್ನಾಟಕ ಎಕನಾಮಿಕ್ ಮಿಷನ್ ಮೂಲಕ ಅಭಿವೃದ್ಧಿಯ ನೀಲಿನಕ್ಷೆ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಒಂಬತ್ತು ಕಸ್ಟಮ್ ಸರ್ವಿಸ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಡ್ರೋನ್‌ಗಳನ್ನು ವಿತರಿಸಲಾಗಿದೆ. ತೊಗರಿ, ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಕೆಂಪು ರಸಬಾಳೆ ಸೇರಿದಂತೆ ಈ ಭಾಗದ ಪ್ರಮುಖ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಸೂಪರ್ ಫುಡ್ ಉತ್ಪನ್ನಗಳನ್ನಾಗಿ ಅಭಿವೃದ್ಧಿಪಡಿಸಲು ಉತ್ತೇಜನ ನೀಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಈಗಾಗಲೇ ₹50 ಕೋಟಿ ಅನುದಾನ ನೀಡಲಾಗಿದೆ ಎಂದರು.
ಕಲಬುರಗಿ ತೊಗರಿ ಬೇಳೆ ಹಾಗೂ ಕಲಬುರಗಿ ರೊಟ್ಟಿಯಂತಹ ಸ್ಥಳೀಯ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗಳಿಗೂ ಪರಿಚಯಿಸಲಾಗುತ್ತಿದೆ. ಈ ಭಾಗದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಇನ್‌ಕ್ಯುಬೇಷನ್ ಕೇಂದ್ರಗಳ ಸ್ಥಾಪನೆಗೂ ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಉದ್ಯೋಗ, ಉದ್ಯಮ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಿಂದಿನ ಸಾಧನೆಗಳೊಂದಿಗೆ ತೃಪ್ತರಾಗದೆ ಮುಂದಿನ 60 ವರ್ಷಗಳಲ್ಲಿ ಸಾಧಿಸಬೇಕಾದ ಗುರಿಗಳ ಕುರಿತು ಸ್ಪಷ್ಟವಾದ ನೀಲಿನಕ್ಷೆ ಸಿದ್ಧಪಡಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು:
ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ದೇಶದಲ್ಲಿ ಪ್ರತಿಭೆ, ಜ್ಞಾನ ಹಾಗೂ ಕೆಲಸ ಮಾಡುವ ಮನೋಭಾವ ಹೊಂದಿರುವ ಜನರಿದ್ದಾರೆ. ಆದರೆ ಅವರಿಗೆ ಅಗತ್ಯ ಅವಕಾಶಗಳು ದೊರೆಯದ ಕಾರಣ ಅನೇಕ ಉದ್ಯಮಗಳು ಸ್ಥಾಪನೆಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಮೂಲಕ ಉದ್ಯಮಶೀಲತೆ ಬೆಳೆಸಲು ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿ:
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಬೇಕು. ಉದ್ಯಮಿಗಳು ಹೆಚ್ಚಿನ ಹೂಡಿಕೆ ಮಾಡಿ ಕೈಗಾರಿಕೆಗಳನ್ನು ಆರಂಭಿಸಿದರೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಇದರಿಂದ ಜನರ ತಲಾ ಆದಾಯ ಹಾಗೂ ಜಿಲ್ಲೆಯ ಒಟ್ಟಾರೆ ಆದಾಯವೂ ವೃದ್ಧಿಯಾಗಲಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಉದ್ಯಮಿಗಳು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ. ಎಲ್.ಎಸ್. ಪಾಟೀಲ್ ಹಾಗೂ ವಿಷ್ಣುಕಾಂತ ಬೂತಡಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಡಾ. ಎಲ್.ಎಸ್. ಪಾಟೀಲ್, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಕೆಡಿಎಂ ಸಿಇಒ ಸಂಜೀವ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಿವರಾಜ್ ಇಂಗಿನಶೆಟ್ಟಿ ವಂದಿಸಿದರು.






