Kalaburagi | ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಒ.ಗಳು ತಮ್ಮ ಬಳಿ ಒಂದೇ ಒಂದೇ ಗಣತಿ ನಮೂನೆ ಇಟ್ಟುಕೊಳ್ಳದೆ ಶೇ.100ರಷ್ಟು ಗಣತಿ ನಮೂನೆಗಳನ್ನು ಮತದಾರರಿಗೆ ವಿತರಣೆ ಮಾಡಬೇಕೆಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.97.64ರಷ್ಟು ಗಣತಿ ನಮೂನೆ ವಿತರಿಸಿದಕ್ಕೆ ತೃಪ್ತಿ ವ್ಯಕ್ತಪಡಿಸಿದ ಅವರು, ಆದರೂ ಇನ್ನು ಜಿಲ್ಲೆಯಾದ್ಯಂತ 56,021 ಗಣತಿ ನಮೂನೆಗಳು ವಿತರಣೆಗೆ ಬಾಕಿ ಇವೆ. ನಮ್ಮಿಂದ ನಮೂನೆ ಕೊಡೋದೆ ತಡವಾದಾಗ ಅವರಿಂದ ಸಂಗ್ರಹಿಸಿ ಡಿಜಿಟೈಸ್ ಮಾಡೋದು ಯಾವಾಗ? ಎಂದು ಮತದಾರರ ನೋಂದಣಾಧಿಕಾರಿಗಳನ್ನು ಪ್ರಶ್ನಿಸಿದ ಅವರು, ಇನ್ನೆರಡು ದಿನದಲ್ಲಿ ಉಳಿದ ಗಣತಿ ನಮೂನೆ ನೀಡುವ ಮೂಲಕ ಶೇ.100ರಷ್ಟು ಗಣತಿ ನಮೂನೆ ವಿತರಣೆ ಕಾರ್ಯ ಪೂರ್ಣಗೊಳಿಸಬೇಕೆಂದರು.
ಇನ್ನು ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಡಿಜಿಟೈಸ್ ಮಾಡುವುದು ನಮ್ಮ ಮುಂದಿನ ಸವಾಲಾಗಿದೆ. ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆಗೆ ಜುಲೈ 29 ನಮಗೆ ಕೊನೆ ದಿನವಾಗಿದೆ. ಕೊನೆ ದಿನದ ವರೆಗೆ ಕಾಯದೆ ಡಿಜಿಟೈಸ್ ಕಾರ್ಯಕ್ಕೆ ವೇಗ ನೀಡಬೇಕಿದೆ. ಇಲ್ಲದೆ ಹೋದಲ್ಲಿ ಕೊನೆ ಗಳಿಗೆಯಲ್ಲಿ ಒತ್ತಡಕ್ಕೆ ಒಳಗಾಗಿ ಅನಾವಶ್ಯಕ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಾರದು ಎಂದರು.
ಜಿಲ್ಲೆಯ 2,400 ಬಿ.ಎಲ್.ಒಗಳ ಪೈಕಿ 435 ಜನ ಬಿ.ಎಲ್.ಒ.ಗಳು ಶೇ. 0-10ರ ಡಿಜಿಟೈಸ್ ಪೂರ್ಣಗೊಳಿಸದವರಲ್ಲಿದ್ದಾರೆ. ಇದರಲ್ಲಿ ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಕ್ರಮವಾಗಿ 150 ಮತ್ತು 144 ಬಿ.ಎಲ್.ಒ. ಗಳೆ ಇದ್ದಾರೆ. ಅಧಿಕಾರಿಗಳು ಇಲ್ಲಿ ಹೆಚ್ಚು ಗಮನಹರಿಸಬೇಕಿದೆ. ಜಿಲ್ಲೆಯ ಶೇಕಡಾವಾರು ಡಿಜಿಟೈಸ್ ಪ್ರಮಾಣಕ್ಕೆ ಅನುಗುಣವಾಗಿ ಈ ಬಿ.ಎಲ್.ಓ. ಗಳು ಕಾರ್ಯನಿರ್ವಹಿಸಿದಲ್ಲಿ ಡಿಜಿಟೈಸ್ ಪ್ರಮಾಣ ಹೆಚ್ಚಲಿದೆ. ನಿಗಧಿತ ಅವಧಿ ನಂತರ ಯಾವುದೇ ಕಾರಣಕ್ಕೂ ತಂತ್ರಾಂಶದಲ್ಲಿ ಅರ್ಜಿ ಪರಿಗಣಿಸುವುದಿಲ್ಲ. ಇದನ್ನು ಬಿ.ಎಲ್.ಒ. ಗಳಿಗೆ ಮನದಟ್ಟಾಗಿಸಿ ಅವರಿಗೆ ತಾಂತ್ರಿಕ ನೆರವು ನೀಡಿ ಉದ್ದೇಶಿತ ಕಾರ್ಯಕ್ಕೆ ವೇಗ ಹೆಚ್ಚಿಸಬೇಕೆಂದು ವಿ.ಅನ್ಬುಕುಮಾರ್ ಸ್ಪಷ್ಟಪಡಿಸಿದರು.
ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಬಿ.ಎಲ್.ಒ. ಗಳಿಗೆ 8,000 ರೂ. ಗೌರವ ಧನ ನೀಡಲು ಈಗಾಗಲೆ ಆದೇಶ ಮಾಡಿ ಮಂಜೂರಾತಿ ನೀಡಿದ್ದು, ಆಯಾ ತಾಲೂಕಿನ ತಹಶೀಲ್ದಾರರು ಬಿ.ಎಲ್.ಒ. ಗಳಿಗೆ ಕೂಡಲೆ ಅನುದಾನ ಬಿಡುಗಡೆ ಮಾಡಬೇಕು ಅವರಿಗೆ ಉತ್ತಮ ಪ್ರಗತಿ ಸಾಧಿಸಲು ಪ್ರೋತ್ಸಾಹಿಸಬೇಕೆಂದು ವಿ.ಅನ್ಬುಕುಮಾರ ಸೂಚಿಸಿದರು.
ರಾಜಕೀಯ ಪಕ್ಷಗಳಿಗೆ ಮಾಹಿತಿ ಕೊಡಿ:
ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮುತದಾರರ ನೋಂದಣಾಧಿಕಾರಿಗಳು ಎಸ್.ಐ.ಆರ್. ಪ್ರಕ್ರಿಯೆ ಕುರಿತು ವಾರಕ್ಕೊಮೆ ರಾಜಕೀಯ ಪಕ್ಷಗಳ ಸಭೆ ಕರೆದು ಪ್ರತಿಯೊಂದು ಮಾಹಿತಿ ನೀಡಬೇಕು. ಪ್ರತಿದಿನ ಮಾಧ್ಯಮಗಳಿಗೆ ಸುದ್ದಿ ಬಿಡುಗಡೆ ಮಾಡಬೇಕು. ನಾಳೆ ಯಾವುದೇ ರಾಜಕೀಯ ಪಕ್ಷಗಳು ನಮಗೆ ಮಾಹಿತಿ ನೀಡಿಲ್ಲ ಎಂಬ ದೂರು ಬಾರದಂತೆ ಮತ್ತು ಭಾರರ ಚುಣಾವಣಾ ಆಯೋಗದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ವಿ. ಅನ್ಬುಕುಮಾರ್ ಒತ್ತಿ ಹೇಳಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಜಿಲ್ಲೆಯಲ್ಲಿ ಇದೂವರೆಗೆ 23,71,542 ಮತದಾರರ ಪೈಕಿ 23,15,521 (ಶೇ.97.64) ಜನರಿಗೆ ಗಣತಿ ನಮೂನೆ ವಿತರಿಸಿದ್ದು, 5,48,736 ಜನರ ಅರ್ಜಿ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿ ಶೇ.23.14 ಪ್ರಗತಿ ಸಾಧಿಸಿದೆ. ಮುಂದಿನ 10 ದಿನದಲ್ಲಿ ಡಿಜಿಟೈಸ್ ಕಾರ್ಯಕ್ಕೆ ವೇಗ ನೀಡಿ ಕಾಲಮಿತಿಯಲ್ಲಿಯೇ ಶೇ.100ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ. ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ ಮೋಘಾ ಸೇರಿದಂತೆ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುವ ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.






