ಸೆ. 6ರಂದು ಜೇವರ್ಗಿಯಲ್ಲಿ ಹೋರಾಟಗಾರರೊಂದಿಗೆ ಚರ್ಚೆ: ನಟ ಚೇತನ್ ಅಹಿಂಸಾ

ನಟ ಚೇತನ್ ಅಹಿಂಸಾ
ಜೇವರ್ಗಿ: ತಾಲೂಕಿನ ವಿವಿಧ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಕುರಿತು ಚರ್ಚಿಸಲು ಜೇವರ್ಗಿಯಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಗೆ ರಾಜಕೀಯ ಮುನ್ನೋಟ ಸಭೆ ಆಯೋಜಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಲಿರುವ ಸಭೆಯಲ್ಲಿ ತಾಲೂಕಿನ ವಿವಿಧ ಮುಖಂಡರು, ಹೋರಾಟಗಾರರು, ವಿಚಾರವಂತರು, ಪ್ರಗತಿಪರರು ಹಾಗೂ ಸಮಾನ ಮನಸ್ಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ತಾಲೂಕಿನ ಪ್ರಮುಖ ಸಮಸ್ಯೆಗಳು, ಜನರ ವಿಚಾರಗಳು ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕಿನ ಜನಪರ ವಿಚಾರಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ತಾಲೂಕಿನ ಅಭಿವೃದ್ಧಿ ಹಾಗೂ ಜನಪರ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿರುವ ವಿಚಾರವಂತರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಹಾಗೂ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಚೇತನ್ ಅಹಿಂಸಾ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.




