ಅಫಜಲಪುರ: ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

ಕಲಬುರಗಿ : ಸಾಲಬಾಧೆಯಿಂದ ಮನನೊಂದು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ.
ಹೊನ್ನಪ್ಪ ಹೀರಗಪ್ಪ ರೋಡಗಿ (40) ಅವರು ಆತ್ಮಹತ್ಯೆ ಮಾಡಿಕೊಂಡ ರೈತ.
ಆಗಸ್ಟ್ 27ರಂದು ಹೊನ್ನಪ್ಪ ಅವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿದ್ದು, ಬಳಿಕ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತ ಹೊನ್ನಪ್ಪ ಅವರು ಮಣ್ಣೂರು ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸುಮಾರು 3 ಲಕ್ಷ ರೂ. ಹಾಗೂ ಇತರ ಮೂಲಗಳಿಂದ ಸುಮಾರು 8 ಲಕ್ಷ ರೂ., ಸೇರಿ ಒಟ್ಟು 11 ಲಕ್ಷ ರೂ.ಯಷ್ಟು ಸಾಲ ಹೊಂದಿದ್ದರು ಎನ್ನಲಾಗಿದೆ. ಸಾಲದ ಒತ್ತಡದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಯನ್ನು ಪರಿಗಣಿಸಿ ಸರ್ಕಾರವು ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅಗತ್ಯ ಆರ್ಥಿಕ ನೆರವು ಒದಗಿಸಬೇಕು ಎಂದು ಮಣ್ಣೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




