Afzalpur | ಸೊನ್ನ ಬ್ಯಾರೇಜ್‌ಗೆ ಜು.28ರಂದು ನೀರು ತಲುಪುವ ಸಾಧ್ಯತೆ; ನದಿ, ಹಳ್ಳ, ಕೆರೆಗಳ ಬಳಿ ತೆರಳದಂತೆ ಸಾರ್ವಜನಿಕರಿಗೆ ಸೂಚನೆ

ಅಫಜಲಪುರ: ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 61,600 ಕ್ಯುಸೆಕ್ ನೀರನ್ನು ಹರಿಬಿಡಲಾಗಿದ್ದು, ಈ ನೀರು ಇಂದು ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್‌ಗೆ ತಲುಪುವ ಸಾಧ್ಯತೆ ಇದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಉಜ್ಜನಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಯಾವುದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಅಧಿಕೃತ ಜ್ಞಾಪನ ಪತ್ರದ ಮೂಲಕ ಸೂಚಿಸಿದ್ದಾರೆ.
ನದಿ, ಹಳ್ಳ ಹಾಗೂ ಕೆರೆಗಳ ದಡದಲ್ಲಿ ಬಟ್ಟೆ ತೊಳೆಯುವುದು, ಜಾನುವಾರುಗಳನ್ನು ಮೇಯಿಸುವುದು, ಅಪಾಯಕರ ಸೇತುವೆಗಳ ಮೇಲೆ ಸಂಚರಿಸುವುದು, ನದಿಯಲ್ಲಿ ಈಜುವುದು, ಫೋಟೋ ಹಾಗೂ ಸೆಲ್ಫಿ ತೆಗೆಯುವುದು ಸೇರಿದಂತೆ ಯಾವುದೇ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ, ಮೀನುಗಾರರು ನದಿಗೆ ಇಳಿದು ಮೀನುಗಾರಿಕೆ ನಡೆಸದಂತೆ ಸೂಚನೆ ನೀಡಲಾಗಿದೆ. ದೇವಲ ಗಾಣಗಾಪುರ ಹಾಗೂ ಘತ್ತರಗಾ ದೇವಸ್ಥಾನಗಳಿಗೆ ಆಗಮಿಸುವ ಭಕ್ತರು ಸಹ ಭೀಮಾ ನದಿಗೆ ಇಳಿಯದಂತೆ ವಿಶೇಷ ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಮನವಿ ಮಾಡಿದೆ.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಹಾಗೂ ಮೈಕ್ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು, ಉಪ ತಹಸೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಹಸೀಲ್ದಾರ್ ನಿರ್ದೇಶನ ನೀಡಿದ್ದಾರೆ.
ನೀರಿನ ಹರಿವಿನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಾರ್ವಜನಿಕರು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷತೆ ಕಾಪಾಡಿಕೊಳ್ಳುವಂತೆ ತಾಲೂಕು ಆಡಳಿತ ಮನವಿ ಮಾಡಿದೆ.






