Afzalpur | ಗುರುಗಳಿಂದ ಶ್ರದ್ಧೆ, ಸರಳತೆ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಿ: ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ

ಅಫಜಲಪುರ: ರಾಷ್ಟ್ರದ ಆದರ್ಶ ಶಿಕ್ಷಕ ಡಾ. ಎಸ್. ರಾಧಾಕೃಷ್ಣನ್ ಅವರ ಶ್ರದ್ಧೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯನ್ನು ಗುರುಗಳಿಂದ ಕಲಿತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಕರೆ ನೀಡಿದರು.
ಅವರು ಶನಿವಾರ ನಾರ್ತ್ ಕರ್ನಾಟಕ ಡೆಕ್ಕನ್ ಫೌಂಡೇಶನ್ ಸಂಸ್ಥೆಯ ಪಾರಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಫಜಲಪುರ ವೃತ್ತದ ಆರಕ್ಷಕ ನಿರೀಕ್ಷಕ ಲಖನ್ ಆರ್. ಮಸಗುಪ್ಪಿ, ಇಂದಿನ ಇಂಟರ್‌ನೆಟ್ ಯುಗದಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಲು ಹಲವು ಅಡಚಣೆಗಳಿವೆ. ಆದರೆ ಸಾಧಿಸುವ ಛಲ ಹೊಂದಿರುವ ವ್ಯಕ್ತಿ ಎಷ್ಟೇ ಅಡೆತಡೆಗಳು ಎದುರಾದರೂ ಗುರಿ ತಲುಪುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿ ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಿ.ಎಂ. ನದಾಫ್ ಮಾತನಾಡಿ, ಭಾರತದ ಶೈಕ್ಷಣಿಕ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಗುರುಕುಲ ಹಾಗೂ ಮೊಘಲರ ಆಗಮನದ ನಂತರ ಅಸ್ತಿತ್ವಕ್ಕೆ ಬಂದ ಮದ್ರಸಾ ಶಿಕ್ಷಣ ವ್ಯವಸ್ಥೆಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ಶಿಕ್ಷಣ ತಲುಪಿಸಲು ಸಾಧ್ಯವಾಗಲಿಲ್ಲ. ಶಿಕ್ಷಣ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದ ಸಂದರ್ಭದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಹಾಗೂ ಫಾತಿಮಾ ಶೇಖ್ ಅವರನ್ನು ಸ್ಮರಿಸಬೇಕು ಎಂದರು.
ಸಾಹಿತಿ ಬಿ.ಎಂ. ರಾವ್ ಹಾಗೂ ನಿವೃತ್ತ ಉಪನ್ಯಾಸಕ ನಾಮದೇವ ಕಡಕೋಳ ಮಾತನಾಡಿ, ಸ್ವಾತಂತ್ರ್ಯಾನಂತರ ಭಾರತದಲ್ಲಿ ನಡೆದ ಶೈಕ್ಷಣಿಕ ಬೆಳವಣಿಗೆಯು ಸಾರ್ವತ್ರಿಕ ಶಿಕ್ಷಣದತ್ತ ಮಹತ್ವದ ಹೆಜ್ಜೆಯಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕಡಿಮೆಯಿದ್ದರೂ, ಇಂದು ಗಣನೀಯವಾಗಿ ಏರಿಕೆಯಾಗಿದೆ. ಶಿಕ್ಷಣದ ವ್ಯಾಪ್ತಿ ಹೆಚ್ಚುತ್ತಿರುವುದು ದೇಶದ ಪ್ರಗತಿಯ ಸಂಕೇತವಾಗಿದೆ ಎಂದು ಹೇಳಿದರು.
ಗೌರ (ಬಿ) ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಚನ್ನಬಸಯ್ಯ ಹಿರೇಮಠ ಅವರು ‘ಯುವಕರ ಮುಂದಿರುವ ಸವಾಲುಗಳು ಮತ್ತು ಸಾಧನೆ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ನಾಗರಾಜ ನಂದಿ ಹಾಗೂ ಸಹ ಶಿಕ್ಷಕ ಅಲ್ಲಾಭಕ್ಷ ಲಾಳಸಂಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ರಾಜಕುಮಾರ್ ಬಳುರಗಿ ಅಧ್ಯಕ್ಷತೆ ವಹಿಸಿದ್ದರು. ನರಸು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.






