Afzalpur | ಕೆರೆ ತುಂಬುವ ಯೋಜನೆಯಲ್ಲಿ ನಿರ್ಲಕ್ಷ್ಯ ಆರೋಪ; ರೇವೂರ (ಕೆ) ಕೆರೆಗೆ ನೀರು ಹರಿಸದಿದ್ದರೆ ಹೋರಾಟದ ಎಚ್ಚರಿಕೆ

ಅಫಜಲಪುರ: ತಾಲೂಕಿನ ರೇವೂರ (ಕೆ) ಗ್ರಾಮದ ಕೆರೆಗೆ ಕೆರೆ ತುಂಬುವ ಯೋಜನೆಯಡಿ ನೀರು ಹರಿಸದಿರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆ ತುಂಬುವ ಯೋಜನೆಯಡಿ ಕೊಗನೂರು ಹಾಗೂ ದೀಕ್ಸಂಗಾ ಕೆರೆಗಳಿಗೆ ನೀರು ಪೂರೈಸಲು ಅಳವಡಿಸಿರುವ ಮುಖ್ಯ ಪೈಪ್‌ಲೈನ್ ರೇವೂರ (ಕೆ) ಗ್ರಾಮದ ಕೆರೆ ಪಕ್ಕದಲ್ಲೇ ಹಾದುಹೋಗಿದ್ದರೂ, ರೇವೂರ ಕೆರೆಗೆ ಮಾತ್ರ ನೀರು ಹರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೆರೆಗೆ ನೀರು ಹರಿಯದ ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ತೀವ್ರಗೊಂಡಿದೆ. ಕೂಡಲೇ ಕೆರೆಗೆ ನೀರು ಹರಿಸಿ ಗ್ರಾಮಸ್ಥರು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ರಮೇಶ್ ಪಾಟೀಲ್ ಹಾಗೂ ಗ್ರಾಮದ ಮುಖಂಡ ಹಸನಪ್ಪ ಮಾತನಾಡಿ, ಸೆಪ್ಟೆಂಬರ್ 20ರೊಳಗೆ ರೇವೂರ (ಕೆ) ಕೆರೆಗೆ ನೀರು ಹರಿಸಬೇಕು. ಇಲ್ಲವಾದರೆ ಆಳಂದ ತಾಲೂಕಿಗೆ ಒಂದು ಹನಿ ನೀರು ಕೂಡ ಹರಿಯಲು ಬಿಡುವುದಿಲ್ಲ. ಮಲ್ಲಾಬಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಮಸ್ಯೆಯನ್ನು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಅರುಣಕುಮಾರ್ ಪಾಟೀಲ್ ಅವರ ಗಮನಕ್ಕೂ ತರಲಾಗಿದ್ದರೂ, ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ಗುರು ಚಾಂದಕವಟೆ ಮಾತನಾಡಿ, ರೇವೂರ (ಕೆ) ಕೆರೆಗೆ ಕೂಡಲೇ ನೀರು ಹರಿಸದಿದ್ದರೆ ಅಫಜಲಪುರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮಾಶಂಕರ ಮಳ್ಳಿ, ಪರಮೇಶ್ವರ್ ಪಾಟೀಲ್ ಸೇರಿದಂತೆ ಅನೇಕ ರೈತ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.






