Afzalpur | ಎಸ್‌ಟಿ ಪ್ರಮಾಣ ಪತ್ರ ವಿತರಣೆಗೆ ಆಗ್ರಹ; ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ತಳವಾರ ಸಮುದಾಯದ ಮುಖಂಡರು ವಶಕ್ಕೆ, ಬಿಡುಗಡೆ

ಅಫಜಲಪುರ: ತಳವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ತಳವಾರ ಸಮುದಾಯದ ಮುಖಂಡರನ್ನು ಗುರುವಾರ ಬೆಳಿಗ್ಗೆಯೇ ಪೊಲೀಸರು ಬಂಧಿಸಿ ನಿಂಬರ್ಗಾ ಮತ್ತು ದೇವಲ ಗಾಣಗಾಪುರ ಪೊಲೀಸ್ ಠಾಣೆಗಳಿಗೆ ಕರೆದೊಯ್ದ ಘಟನೆ ನಡೆದಿದೆ.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ತಳವಾರ ಸಮುದಾಯದ ಮುಖಂಡರು ಕಪ್ಪು ಬಾವುಟ ಪ್ರದರ್ಶನಕ್ಕೆ ಸಜ್ಜಾಗಿದ್ದರು.
ಬೆಳಿಗ್ಗೆ ಸುಮಾರು 10 ಗಂಟೆಗೆ ಚವಡಾಪುರ ಕ್ರಾಸ್ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಹೋರಾಟಗಾರರನ್ನು ಪೊಲೀಸರು ತಡೆದು ಕಪ್ಪುಪಟ್ಟಿ ಹಾಗೂ ಕಪ್ಪು ಬಾವುಟ ಪ್ರದರ್ಶನ ಮಾಡದಂತೆ ಸೂಚನೆ ನೀಡಿದರು. ಆದರೆ ಪ್ರತಿಭಟನೆ ಹಿಂಪಡೆಯಲು ಹೋರಾಟಗಾರರು ನಿರಾಕರಿಸಿದ ಹಿನ್ನೆಲೆಯಲ್ಲಿ, ಮುಂಚೂಣಿಯಲ್ಲಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದರು.
ಇಡೀ ಕಲಬುರಗಿ ಜಿಲ್ಲೆಯ ತಳವಾರ ಸಮುದಾಯದ ಅರ್ಹರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ಅಕ್ಟೋಬರ್ 2ರೊಳಗೆ ವಿತರಿಸಬೇಕು. ಇಲ್ಲದಿದ್ದರೆ ಗಾಂಧಿ ಜಯಂತಿಯಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿವಾಸದ ಎದುರು ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.
-ಶಿವಕುಮಾರ ನಾಟೀಕಾರ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ.






