Afzalpur | ಶಾರ್ಟ್ ಸರ್ಕ್ಯೂಟ್ನಿಂದ 7 ಎಕರೆ ಕಬ್ಬು ಬೆಂಕಿಗಾಹುತಿ : ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ

ಅಫಜಲಪುರ: ತಾಲೂಕಿನ ಗೊಬ್ಬರವಾಡಿ ಗ್ರಾಮದ ಸರ್ವೆ ನಂ. 593ರಲ್ಲಿ ಭೀಮಶಂಕರ್ ಸಂಗಪ್ಪ ಐಮೂಲೆ ಹಾಗೂ ರುದ್ರಣ್ಣ ಸಂಗಪ್ಪ ಐಮೂಲೆ ಅವರಿಗೆ ಸೇರಿದ ಏಳು ಎಕರೆ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಬೆಂಕಿಗೆ ಆಹುತಿಯಾಗಿದೆ.
ಸುಮಾರು 500 ಟನ್ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ರೈತಪರ ಹೋರಾಟಗಾರ ಸಂತೋಷ ಮಲಗೊಂಡ ಮಾತನಾಡಿ, ಹಾನಿಗೊಳಗಾದ ಕಬ್ಬಿನ ಬೆಳೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ನಷ್ಟದ ಮೌಲ್ಯಮಾಪನ ಮಾಡಬೇಕು. ಬಳಿಕ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಘಟನೆ ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ರಮೇಶ್ ಗುತ್ತೇದಾರ್, ಸಂಗಣ್ಣ ಬಿರಾದಾರ್, ಸಂತೋಷ್ ಬಿರಾದಾರ್, ಶರಣಗೌಡ ಪಾಟೀಲ, ದತ್ತಣ್ಣ ಬಿರಾದಾರ್, ಕಾಂತಪ್ಪ ಐಮೂಲೆ, ಮೋತಿರಾಂ ಚೌಹಾಣ್, ಬಾಬು ಗೌರ್, ಗುರುನಾಥ ಪವಾರ್, ಲಕ್ಷ್ಮಿಕಾಂತ್ ನಿಂಬರಗಿ, ಸುರೇಶ್ ಐಮೂಲೆ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.




