ಅಫಜಲಪುರ | ನೀರಾವರಿ ವ್ಯರ್ಥ ವಿರೋಧಿಸಿ 900 ಕಿ.ಮೀ. ಅಧ್ಯಯನ ಪಾದಯಾತ್ರೆ

ಅಫಜಲಪುರ : ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ 11 ಜಲಾಶಯಗಳಿಂದ ಕಾಲುವೆ ನೀರಾವರಿ ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪದೆ ಎಲ್ಲೆಡೆ ವ್ಯರ್ಥವಾಗುತ್ತಿದ್ದು, ಈ ಕುರಿತು ಆಡಳಿತದಲ್ಲಿ ಇರುವವರು ಗಂಭೀರವಾಗಿ ಗಮನ ಹರಿಸಬೇಕೆಂದು ಆಗ್ರಹಿಸಿ ಅಧ್ಯಯನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಭೀಮಾ ಮಿಷನ್ ಅಧ್ಯಕ್ಷ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಭೀಮಶೆಟ್ಟಿ ಮುಕ್ಕಾ ತಿಳಿಸಿದ್ದಾರೆ.
ಅಫಜಲಪುರ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ಮೂರು ಜಿಲ್ಲೆಗಳ ನೀರಾವರಿ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಆಯೋಜಿಸಿರುವ ಸುಮಾರು 900 ಕಿ.ಮೀ. ಉದ್ದದ ಕಾಲುವೆ ಮಾರ್ಗದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ಜಿಲ್ಲೆಗಳ 11 ಜಲಾಶಯಗಳಲ್ಲಿ ಶೇ.90ರಷ್ಟು ನೀರು ಸಂಗ್ರಹವಾಗಿದ್ದರೂ, ನಿರ್ಮಿತ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ತಲುಪದೆ ವ್ಯರ್ಥವಾಗುತ್ತಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಿ ರೈತರಿಗೆ ನೀರು ಪೂರೈಸಬೇಕು ಎಂದು ಮನವಿ ಮಾಡಿದರು.
ಕಲಬುರಗಿಯಲ್ಲಿ ಆರು ಜಲಾಶಯಗಳಿದ್ದು, 14.848 ಟಿಎಂಸಿ ಸಂಗ್ರಹ ಸಾಮರ್ಥ್ಯವಿದೆ. ಇದರಿಂದ 1.67 ಲಕ್ಷ ಎಕರೆ ನೀರಾವರಿ ಆಗಬೇಕಿತ್ತು. ಬೀದರ್ ಜಿಲ್ಲೆಯಲ್ಲಿ ಮೂರು ಜಲಾಶಯಗಳಿದ್ದು, 9.378 ಟಿಎಂಸಿ ಸಾಮರ್ಥ್ಯವಿದ್ದು, 73,950 ಸಾವಿರ ಎಕರೆ ನೀರಾವರಿ ಆಗಬೇಕಿತ್ತು.ಯಾದಗಿರಿ ಜಿಲ್ಲೆಯಲ್ಲಿ ಎರಡು ಜಲಾಶಯಗಳಿದ್ದು, 0.639 ಟಿಎಂ ಸಾಮರ್ಥ್ಯವಿದ್ದು, 8 ಸಾವಿರ ಎಕರೆನೀರಾವರಿ ಆಗಬೇಕಿತ್ತು. ಆದರೆ ಇದುವರೆಗೆ ರೈತರಿಗೆ ಅನುಕೂಲವಾಗಿಲ್ಲ.ಇದಕ್ಕೆ ಪರಿಹಾರ ದೊರೆಯಬೇಕು ಎಂದು ಹೇಳಿದರು.
ಪ್ರಮುಖರಾದ ಗಿರೀಶಗೌಡ ಇನಾಮದಾರ, ಪ್ರೊ ಬಸವರಾಜ್ ಕುಮನೂರ, ಮಲ್ಲಿಕಾರ್ಜುನ ಹುಳಗೇರಾ ಆದಿನಾಥ ಹೀರಾ, ಮಲ್ಲಿನಾಥ ಪಾಟೀಲ್, ವಿಜಯಕುಮಾರ ಚೆಗಟ್ಟಿ, ಪ್ರಿಯಾ ಹೊಸಗೌಡ, ಶಿವರಾಜ ಬಿರಾದಾರ, ಶಿವಕುಮಾರ ಪಾಟೀಲ್, ಸುಂದರ್ , ಅಭಿಷೇಕ್ ಪಾಟೀಲ್, ನಾಗರೆಡ್ಡಿ ಇತರರಿದ್ದರು.
ಗಂಗಾ ಪೂಜೆಯೊಂದಿಗೆ ಪಾದಯಾತ್ರೆ ಆರಂಭ :
ಬಳ್ಳೂಂಡಗಿ ಬಳಿ ಗಂಗಾ ಪೂಜೆ ನೆರವೇರಿಸಿ ಪಾದಯಾತ್ರೆ ಆರಂಭಿಸಲಾಗಿದ್ದು, ಮಾದಬಾಳ ತಾಂಡಾ ಹಾಗೂ ಅಫಜಲಪುರ ತಾಂಡಾ ಮೂಲಕ ಸಾಗಿದ ಪಾದಯಾತ್ರೆಯ ಮೊದಲ ದಿನ ರೈತರೊಬ್ಬರ ಜಮೀನಿನಲ್ಲಿ ವಾಸ್ತವ್ಯ ಮಾಡಲಾಯಿತು. ಗುರುವಾರ 12 ಕಿ.ಮೀ. ಪಾದಯಾತ್ರೆ ನಡೆಸಲಾಗಿದೆ. ಈ ಪಾದಯಾತ್ರೆ ಮಾರ್ಚ್ 30ರವರೆಗೆ ಮುಂದುವರಿಯಲಿದೆ.
ಕಲಬುರಗಿ ಜಿಲ್ಲೆಯಲ್ಲಿ 558 ಕಿ.ಮೀ., ಬೀದರ್ ಜಿಲ್ಲೆಯಲ್ಲಿ 323 ಕಿ.ಮೀ. ಹಾಗೂ ಯಾದಗಿರಿ ಜಿಲ್ಲೆಯಲ್ಲಿ 25 ಕಿ.ಮೀ. ಸೇರಿ ಒಟ್ಟು 906 ಕಿ.ಮೀ. ಉದ್ದದ ಕಾಲುವೆ ಮಾರ್ಗದಲ್ಲಿ ಪಾದಯಾತ್ರೆ ಸಾಗಲಿದ್ದು, ಹೇರೂರ ಸಮೀಪದ ಬೆಣ್ಣೆತೋರಾ ಡ್ಯಾಂ ಬಳಿ ಮಾ.30ರಂದು ಸಮಾರೋಪಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
“ಸರ್ಕಾರ ನೀರಾವರಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದೆ. ಜಲಾಶಯಗಳ ವಾಸ್ತವ ಸ್ಥಿತಿ, ಅಪೂರ್ಣ ಮುಖ್ಯ ಕಾಲುವೆಗಳು, ವಿತರಣೆ ಹಾಗೂ ಮರಿ ಕಾಲುವೆಗಳ ದುಸ್ಥಿತಿ ಕುರಿತು ಅಧ್ಯಯನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.”
-ಭೀಮಶೆಟ್ಟಿ ಮುಕ್ಕಾ, ಅಧ್ಯಕ್ಷ, ಭೀಮಾ ಮಿಷನ್
“ಭೀಮಾ, ಅಮರ್ಜಾ, ಚುಳಕಿ ನಾಲಾ, ಕಾರಂಜಾ, ಚಂದ್ರಂಪಳ್ಳಿ, ಮುಲ್ಲಾಮರಿ, ಹತ್ತಿಕುಣಿ, ಸೌದಾಗರ, ಗಂಡೋರಿ ನಾಲಾ ಸೇರಿದಂತೆ ಮಧ್ಯಮ ನೀರಾವರಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಹೋರಾಟ ಮತ್ತು ಅಧ್ಯಯನದ ಮೂಲಕವೇ ಸ್ಪಷ್ಟ ಸಂದೇಶ ನೀಡಬೇಕಾಗಿದೆ.”
-ಡಾ. ಬಸವರಾಜ ಕುಮ್ನೂರ್, ಸಾಮಾಜಿಕ ಹೋರಾಟಗಾರ
“ಮೊದಲ ದಿನವೇ ಹಲವೆಡೆ ಕಾಲುವೆಗಳಲ್ಲಿ ಮುಳ್ಳು-ಕಂಟಿ ಬೆಳೆದಿದ್ದು, ನೀರಿನ ಸದ್ಬಳಕೆ ಆಗುತ್ತಿಲ್ಲ. ಅಧಿಕಾರಿಗಳು ಹಾಗೂ ರೈತರು ಎಚ್ಚೆತ್ತು ನೀರಿನ ಜಾಗೃತಿ ಮೂಡಿಸಬೇಕು.”
-ಗಿರೀಶಗೌಡ ಇನಾಮದಾರ, ಅಧ್ಯಕ್ಷ, ರಾಜ್ಯ ಕೃಷಿ ಕಾರ್ಮಿಕರ ರೈತ ಸಂಘ







