Afzalpur | ಆಕಸ್ಮಿಕ ಬೆಂಕಿ : ಆಟೋಮೊಬೈಲ್ ಗ್ಯಾರೇಜ್‌ಗಳು ಸಂಪೂರ್ಣ ಭಸ್ಮ; 80 ಲಕ್ಷ ರೂ. ಮೌಲ್ಯದ ಆಸ್ತಿ ನಾಶ

ಅಫಜಲಪುರ: ಪಟ್ಟಣದ ಅಂಬಿಗರ ಚೌಡಯ್ಯ ನಗರದ ಕಲಬುರಗಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ರಫೀಕ್ ಜವಳಿ ಆಟೋಮೊಬೈಲ್ ಮತ್ತು ಲೇತ್ ಗ್ಯಾರೇಜ್, ಸ್ಟಾರ್ ಕಾರ್ ಗ್ಯಾರೇಜ್ ಹಾಗೂ ಎ.ಕೆ. ಟೈಯರ್ಸ್ ಅಂಗಡಿಗಳಿಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಅಂದಾಜು 80 ಲಕ್ಷ ರೂ. ಮೌಲ್ಯದ ವಾಹನಗಳ ಬಿಡಿಭಾಗಗಳು, ಯಂತ್ರೋಪಕರಣಗಳು, ಆಯಿಲ್ ಹಾಗೂ ಇತರೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.
ಜವಳಿ ಆಟೋಮೊಬೈಲ್ ಗ್ಯಾರೇಜ್ ಮಾಲೀಕ ರಫೀಕ್ ಜವಳಿ ಮಾತನಾಡಿ, ಸಾಲ ಮಾಡಿ ಶೆಡ್ ನಿರ್ಮಿಸಿ ಗ್ಯಾರೇಜ್ ಆರಂಭಿಸಿದ್ದೆ. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ವೆಲ್ಡಿಂಗ್ ಯಂತ್ರಗಳು, ಕಟರ್ ಮಷಿನ್, ಡ್ರಿಲ್ ಮಷಿನ್, ನೆಟ್ ಬೋಲ್ಟ್ ಮಷಿನ್, ವೈರಿಂಗ್ ಸಾಮಗ್ರಿಗಳು, ಮಷಿನರಿ ಆಯಿಲ್, ಗ್ರೀಸ್, ದಾಖಲೆಗಳು ಹಾಗೂ ಕೌಂಟರ್ ಸೇರಿದಂತೆ ಸುಮಾರು 32 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ನಮ್ಮ ಬದುಕಿನ ಆಧಾರವೇ ಕಳೆದುಹೋಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಸ್ಟಾರ್ ಕಾರ್ ಗ್ಯಾರೇಜ್ ಮಾಲೀಕ ಮಂಜೂರು ದಫೇದಾರ್ ಮಾತನಾಡಿ, ಗ್ಯಾರೇಜ್‌ನಲ್ಲಿದ್ದ ಎರಡು ಬೆಲೆಬಾಳುವ ಸ್ವಿಫ್ಟ್ ಡಿಜೈರ್ ಕಾರುಗಳು, ನಾಲ್ಕು ಕಾರುಗಳ ಇಂಜಿನ್‌ಗಳು, ಒಂದು ಬಜಾಜ್ ಡಿಸ್ಕವರ್ ಬೈಕ್, ಸುಮಾರು 500 ಲೀಟರ್ ಆಯಿಲ್ ಹಾಗೂ 15 ಲಕ್ಷ ರೂ. ಮೌಲ್ಯದ ಬಿಡಿಭಾಗಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಸುಮಾರು 35 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.
ಎ.ಕೆ. ಟೈಯರ್ಸ್ ಅಂಗಡಿ ಮಾಲಕ ಮಹಿಬೂಬ್ ಆಗರಖೇಡ ಮಾತನಾಡಿ, ಅಂಗಡಿಯಲ್ಲಿದ್ದ ಹಲವು ಯಂತ್ರಗಳು ಹಾಗೂ ಸಲಕರಣೆಗಳು ಸುಟ್ಟು ಹೋಗಿದ್ದು, ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟ ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ. ಈ ಕುರಿತು ತಂದೆಯವರೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಆಟೋಮೊಬೈಲ್ ಮತ್ತು ಗ್ಯಾರೇಜ್ ಸಂಘದ ಅಧ್ಯಕ್ಷ ಜಾವಿದ್ ಅಬ್ದುಲ್ ಗಫುರ್‌ಸಾಬ್ ಮನಿಯಾರ್, ಆಟೋ ರಿಕ್ಷಾ ಸಂಘದ ಅಧ್ಯಕ್ಷ ಸೈಪನ್ ಸಿರ್, ರಾಹತ್ ಹಸನ್ ಅಬ್ಜಲ್ ಜಾಗೀರದಾರ, ಇರ್ಫಾನ್ ಚೌದರಿ, ಸೈಫನ್ ಚಿಕ್ಕಳಗಿ, ರಫೀಕ್ ತೋಟೆಗಾರ, ಮಂಜೂರು ದಫೇದಾರ್, ರಫೀಕ್ ಜವಳಿ ಹಾಗೂ ಮಹಿಬೂಬ್ ಆಗರಖೇಡ ಸೇರಿದಂತೆ ಗ್ಯಾರೇಜ್ ಮಾಲೀಕರು ಮತ್ತು ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸಂಕಷ್ಟದಲ್ಲಿರುವ ಐದು ಕುಟುಂಬಗಳಿಗೆ ಸರ್ಕಾರ ಮತ್ತು ಸ್ಥಳೀಯ ಶಾಸಕರು ತಕ್ಷಣ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮತಿನ್ ಪಟೇಲ್, ಮುಖಂಡರಾದ ಮಳೇಂದ್ರ ಡಾಂಗೆ, ಮಲ್ಲಿಕಾರ್ಜುನ ನಿಂಗದಳ್ಳಿ, ಮಂಜು ಮನ್ಮಿ, ಮುಸ್ತಫಾ ಬನ್ನಟ್ಟಿ, ಕುಮಾರಸ್ವಾಮಿ, ಬಾಬುಗೌಡ ಪಾಟೀಲ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.






