Afzalpur | ಕೆರೆ ತುಂಬಿಸುವ ಯೋಜನೆಯಲ್ಲಿ ಅನ್ಯಾಯ ಆರೋಪ; ಸೆ.21ರಂದು ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆ

ಅಫಜಲಪುರ, ಸೆ.20: ಭೀಮಾ ನದಿಯಿಂದ ಅಫಜಲಪುರ ಹಾಗೂ ಆಳಂದ ತಾಲೂಕಿನ ಕೆರೆಗಳು ಮತ್ತು ಅಮರ್ಜಾ ಡ್ಯಾಮ್ ತುಂಬಿಸುವ ಯೋಜನೆಯಲ್ಲಿ ಅಫಜಲಪುರ ತಾಲೂಕಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಸೆಪ್ಟೆಂಬರ್ 21ರಂದು ಮಲ್ಲಾಬಾದ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಮಹಾಂತೇಶ ಜಮಾದಾರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ₹318 ಕೋಟಿ ವೆಚ್ಚದ ಯೋಜನೆಯಿಂದ ಅಫಜಲಪುರ ತಾಲೂಕಿಗೆ ನಿರೀಕ್ಷಿತ ಪ್ರಯೋಜನ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಯೋಜನೆಯಡಿ ಮೊದಲು ಅಫಜಲಪುರ ತಾಲೂಕಿನ ಕೆರೆಗಳನ್ನು ತುಂಬಿಸಿ, ನಂತರ ಆಳಂದ ತಾಲೂಕಿನ ಕೆರೆಗಳು ಹಾಗೂ ಅಮರ್ಜಾ ಡ್ಯಾಮ್‌ಗೆ ನೀರು ಹರಿಸಬೇಕು. ಆದರೆ, ಆಳಂದ ತಾಲೂಕಿಗೆ ದೊಡ್ಡ ಗಾತ್ರದ ಪೈಪ್‌ಗಳನ್ನು ಅಳವಡಿಸಿ, ಅಫಜಲಪುರ ಭಾಗಕ್ಕೆ ಕೇವಲ ಎರಡರಿಂದ ಮೂರು ಇಂಚಿನ ಪೈಪ್‌ಗಳನ್ನು ಹಾಕಿರುವುದರಿಂದ ತಾಲೂಕಿನ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
“ಆಳಂದ ತಾಲೂಕಿಗೆ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮೊದಲು ಅಫಜಲಪುರ ತಾಲೂಕಿನ ಕೆರೆಗಳನ್ನು ತುಂಬಿಸಿ, ನಂತರ ಆಳಂದ ತಾಲೂಕಿಗೆ ನೀರು ಹರಿಸಬೇಕು. ಇದೇ ನಮ್ಮ ಪ್ರಮುಖ ಬೇಡಿಕೆ,” ಎಂದು ಮಹಾಂತೇಶ ಜಮಾದಾರ ಹೇಳಿದರು.
ಅಫಜಲಪುರ ತಾಲೂಕಿನ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದೆ ರೈತರು ಸಂಕಷ್ಟ ಅನುಭವಿಸುತ್ತಿದ್ದು, ನೀರಿನ ಅಭಾವದಿಂದ ಪ್ರತಿ ವರ್ಷ ತಾಲೂಕಿನ ಹಲವು ರೈತರು ಆತ್ಮಹತ್ಯೆಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಈ ಭಾಗವನ್ನು ಹಸಿರು ಕ್ರಾಂತಿಯ ತಾಣವನ್ನಾಗಿಸುವ ಉದ್ದೇಶದಿಂದ ಸೊನ್ನ ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಈಗ ಯೋಜನೆಯ ನೀರು ಹಂಚಿಕೆಯಲ್ಲಿ ಅಫಜಲಪುರ ತಾಲೂಕಿಗೆ ಅನ್ಯಾಯವಾಗುತ್ತಿದೆ ಎಂದು ಜಮಾದಾರ ಹೇಳಿದರು.
ಅಫಜಲಪುರ ತಾಲೂಕಿನ ರೈತರ ಹಿತದೃಷ್ಟಿಯಿಂದ ಸೆಪ್ಟೆಂಬರ್ 21ರಂದು ಮಲ್ಲಾಬಾದ ಬಳಿ ನಡೆಯಲಿರುವ ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕಾಧ್ಯಕ್ಷ ಮಂಜುನಾಥ ನಾಯಕೋಡಿ, ಶ್ರೀಶೈಲ್ ಗೋಳೆ, ದತ್ತು ಪೂಜಾರಿ, ಅರವಿಂದ್ ದೊಡ್ಮನಿ, ರವಿಕಾಂತ ಸಕ್ಕರಗಿ, ಉಮೇಶ್ ಅಂದೋಡಗಿ, ಸೋಮನಾಥ್ ನಾಯಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






