Afzalpur | ವಿದ್ಯಾರ್ಥಿ ವಸತಿ ನಿಲಯಗಳ ಆಹಾರ ಧಾನ್ಯ ವಿತರಣೆಯಲ್ಲಿ ಅಕ್ರಮ ಆರೋಪ : ತನಿಖೆಗೆ ಒತ್ತಾಯ

ಅಫಜಲಪುರ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ 14 ವಿದ್ಯಾರ್ಥಿ ವಸತಿ ನಿಲಯಗಳಿಗೆ ಸರ್ಕಾರದಿಂದ ಹಂಚಿಕೆಯಾಗಿರುವ ಆಹಾರ ಧಾನ್ಯಗಳ ಎತ್ತುವಳಿ, ವಿತರಣೆ ಹಾಗೂ ಬಳಕೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಮತ್ತು ಅವ್ಯವಹಾರ ನಡೆದಿದೆ ಎಂದು ದಲಿತ ಮುಖಂಡರಾದ ಅಶೋಕ ಸಿಂಗೆ, ಸಾಗರ ಈಸ್ಫೂರ, ಭೀಮರಾವ ಗೌರ ಹಾಗೂ ಪುಂಡಲೀಕ ಹೊಸಮನಿ ಆರೋಪಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ, ಜನ ಕಲ್ಯಾಣ ಸೇವಾ ಸಂಘಟನೆ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2) ಅವರು 2025ರ ಜೂನ್ 10ರಂದು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ಲಿಮಿಟೆಡ್‌ಗೆ ಪತ್ರ ಬರೆದು ಡಿಸೆಂಬರ್-2024, ಜನವರಿ-2025 ಹಾಗೂ ಫೆಬ್ರವರಿ-2025ರ ಆಹಾರ ಧಾನ್ಯಗಳನ್ನು ಒಂದೇ ಇಂಡೆಂಟ್ ಮೂಲಕ ಎತ್ತುವಳಿ ಮಾಡಲು ಕ್ರಮ ಕೈಗೊಂಡಿರುವುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಅವರು ದೂರಿದರು.
ತಾಲೂಕಿನ 14 ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 1,398 ವಿದ್ಯಾರ್ಥಿಗಳಿಗೆ ಸರ್ಕಾರದ ಮಾನದಂಡದಂತೆ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಗೋಧಿ ವಿತರಿಸಬೇಕಿದೆ. ಮೂರು ತಿಂಗಳ ಅವಧಿಗೆ 419 ಕ್ವಿಂಟಲ್ ಅಕ್ಕಿ ಹಾಗೂ 209 ಕ್ವಿಂಟಲ್ ಗೋಧಿ ಅಗತ್ಯವಿದೆ. ಆದರೆ ಇದೇ ಪ್ರಮಾಣದ ಆಹಾರ ಧಾನ್ಯಗಳನ್ನು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬಿಡುಗಡೆ ಮಾಡಿರುವ ದಾಖಲೆಗಳು ಕಂಡುಬಂದಿದ್ದು, ಒಟ್ಟು ಆರು ತಿಂಗಳ ಅವಧಿಗೆ 838 ಕ್ವಿಂಟಲ್ ಅಕ್ಕಿ ಹಾಗೂ 418 ಕ್ವಿಂಟಲ್ ಗೋಧಿಯ ಎತ್ತುವಳಿ ಮತ್ತು ವಿತರಣೆಯ ಕುರಿತು ಅನುಮಾನ ಮೂಡಿದೆ ಎಂದು ಹೇಳಿದರು.
ಉಗ್ರಾಣದಿಂದ ಬಿಡುಗಡೆಯಾದ ಆಹಾರ ಧಾನ್ಯಗಳು ವಸತಿ ನಿಲಯಗಳಿಗೆ ಡೋರ್ ಡೆಲಿವರಿ ಮೂಲಕ ತಲುಪಿರುವ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಸಾಗಾಣಿಕೆ ವಾಹನಗಳ ವಿವರ, ಜಿಪಿಎಸ್ ಮಾಹಿತಿ, ವಸತಿ ನಿಲಯಗಳ ಮೇಲ್ವಿಚಾರಕರ ದೃಢೀಕರಣ ಪತ್ರಗಳು ಹಾಗೂ ಸ್ಟಾಕ್ ರಿಜಿಸ್ಟರ್‌ಗಳ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಇಂಡೆಂಟ್‌ಗಳು, ಉಗ್ರಾಣ ಬಿಡುಗಡೆ ದಾಖಲೆಗಳು, ಸಾಗಾಣಿಕೆ ದಾಖಲೆಗಳು, ವಾಹನಗಳ ವಿವರಗಳು, ಜಿಪಿಎಸ್ ಮಾಹಿತಿ, ಸ್ಟಾಕ್ ರಿಜಿಸ್ಟರ್‌ಗಳು ಹಾಗೂ ಸ್ವೀಕೃತಿ ಪತ್ರಗಳನ್ನು ಪರಿಶೀಲಿಸಿ ಸ್ವತಂತ್ರ ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅರವಿಂದ ದೊಡ್ಡಮನಿ, ಮಹಾಂತೇಶ ಬಡದಾಳ, ಶ್ರೀಮಂತ ಬಿರಾದಾರ, ವಿಠ್ಠಲ್ ಸಿಂಗೆ, ಮುತ್ತು ಕುರಿಮನಿ, ಪ್ರಕಾಶ ತೆಲ್ಲುಣಗಿ, ಕುಪೇಂದ್ರ ಸಿಂಗೆ, ಗುರುಶಾಂತ ದೊಡ್ಡಮನಿ, ಶರಣು ದೊಡ್ಡಮನಿ, ಚಿದಾನಂದ ಗುಡ್ಡಡಗಿ, ಚಿದಾನಂದ ಬಸರಿಗೆಡ್ಡಿ, ಪೀರಪ್ಪ ಜಮಖಂಡಿ, ಚಂದ್ರಕಾಂತ ಬಿಲ್ವಾಡ, ರಮೇಶ ನೂಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






