ಕಲಬುರಗಿ ಜಿಲ್ಲೆಯನ್ನು ತೀವ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ರೈತ ಸಂಘಟನೆ ಆಗ್ರಹ

ಕಲಬುರಗಿ: ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತಕ್ಷಣವೇ ‘ತೀವ್ರ ಬರಗಾಲ ಪೀಡಿತ’ ಎಂದು ಘೋಷಿಸಿ ರೈತರಿಗೆ ಸಮರ್ಪಕ ಪರಿಹಾರ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಬಳಿಕ ಮುಖ್ಯಮಂತ್ರಿಗಳಿಗೆ ಉದ್ದೇಶಿಸಿದ ಮನವಿಯನ್ನು ಜಿಲ್ಲಾಡಳಿತದ ಮೂಲಕ ಸಲ್ಲಿಸಿದ ಸಂಘಟನೆಯ ಮುಖಂಡರು, ರಾಜ್ಯ ಸರ್ಕಾರ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ತಾಂತ್ರಿಕ ವರದಿ ಸಲ್ಲಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತೀವ್ರ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪರಿಹಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ರೈತರು ಅನುಭವಿಸಿರುವ ನೈಜ ಬೆಳೆ ನಷ್ಟವನ್ನು ಪರಿಗಣಿಸಿ ಪರಿಹಾರ ನೀಡಬೇಕು. ಸಂಪೂರ್ಣ ಬೆಳೆ ನಷ್ಟವಾಗಿರುವ ಮುಂಗಾರು ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (ಡಿಬಿಟಿ) ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿರುವ ಎಲ್ಲಾ ರೈತರಿಗೆ ವಿಮಾ ಕಂಪನಿಗಳು ತಕ್ಷಣವೇ ಪರಿಹಾರ ಪಾವತಿಸಬೇಕು. ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳ ಕೃಷಿ ಸಾಲವನ್ನು ಪ್ರಸಕ್ತ ವರ್ಷಕ್ಕೆ ಸಂಪೂರ್ಣ ಮನ್ನಾ ಮಾಡಬೇಕು. ಮುಂದಿನ ಹಿಂಗಾರು ಹಂಗಾಮಿಗೆ ಯಾವುದೇ ಷರತ್ತಿಲ್ಲದೆ ಪ್ರತಿ ಎಕರೆಗೆ ₹20 ಸಾವಿರ ಶೂನ್ಯ ಬಡ್ಡಿ ಸಾಲ ನೀಡಬೇಕು ಹಾಗೂ ರೈತರಿಗೆ ನೀಡಲಾಗುತ್ತಿರುವ ಬ್ಯಾಂಕ್ ನೋಟಿಸ್‌ಗಳನ್ನು ತಡೆಹಿಡಿದು ಬಲವಂತದ ವಸೂಲಾತಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ, ದಿನಗೂಲಿಯನ್ನು 600 ರೂ. ಗೆ ಪರಿಷ್ಕರಿಸಬೇಕು. ವಲಸೆ ತಡೆಯುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಮೂರು ಹೊಸ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಉಚಿತ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಪ್ರತಿದಿನ ಉಚಿತ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕು. ಕೃಷಿ ಬಿಕ್ಕಟ್ಟು ಹಾಗೂ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಿ, ಅವರ ಮಕ್ಕಳ ಸಂಪೂರ್ಣ ಉಚಿತ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಕೆ. ಮಾನೆ, ಮಹೇಶ್ ಎಸ್. ಬಿ., ರಾಜೇಂದ್ರ ಅತನೂರ್, ವಿಶ್ವನಾಥ್ ಸಿಂಗೆ, ಮಲ್ಲಣ್ಣ ದಂಡಬಾ, ಶಂಕರ್ ಹೂಗಾರ್, ಭೀಮಾಶಂಕರ್ ಆಂದೋಲ, ನೀಲಕಂಠ ಎಂ. ಹುಲಿ, ಮಹೇಬುಬ್ ಪಟೇಲ್, ಚೌಡಪ್ಪ ಗಂಜಿ, ಸಾಯಬಣ್ಣ, ವಿರೇಶ್ ನಾಲವರ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.






