Afzalpur | ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ವಿತರಣೆ ಭರವಸೆ ಹಿನ್ನೆಲೆ: ಮೇ 11ರ ಹೋರಾಟ ವಾಪಸ್

ಅಫಜಲಪುರ : ತಳವಾರ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣ ಪತ್ರಗಳನ್ನು ತಕ್ಷಣ ವಿತರಿಸುವಂತೆ ಆಗ್ರಹಿಸಿ ಮೇ 11ರಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ಹೋರಾಟವನ್ನು ವಿವಿಧ ಸಂಘಟನೆಗಳು ಹಿಂತೆಗೆದುಕೊಂಡಿವೆ.
ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ, ಕರ್ನಾಟಕ ರಾಜ್ಯ ತಳವಾರ ಮಹಾಸಭಾ ತಾಲೂಕು ಘಟಕ, ಪರಿಶಿಷ್ಟ ಪಂಗಡ ಸಮಾಜ ಸೇವಾ ಸಂಸ್ಕೃತ ಸಂಘ ಹಾಗೂ ಎಸ್‌ಟಿ ಮೋರ್ಚಾ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಈ ಹಿಂದೆ ಪ್ರತಿಭಟನೆ ಘೋಷಿಸಲಾಗಿತ್ತು.
ಸಂಘಟನೆಗಳ ಪದಾಧಿಕಾರಿಗಳು ಮೇ 4ರಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಹಾಗೂ ತಹಸೀಲ್ದಾರ್ ಸಂಜಯಕುಮಾರ ದಾಸರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಶಾಲಾ ದಾಖಲಾತಿಗಳಲ್ಲಿ “ತಳವಾರ” ಎಂದು ನಮೂದಾಗಿರುವುದು ಹಾಗೂ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಅಧಿಕಾರಿಗಳ ಪಂಚನಾಮೆ ವರದಿಗಳಲ್ಲಿಯೂ ತಳವಾರ ಜಾತಿಗೆ ಸೇರಿದವರು ಎಂಬುದು ಸ್ಪಷ್ಟವಾಗಿರುವುದರಿಂದ ಅರ್ಹರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದರು.
ಬೇಡಿಕೆ ಈಡೇರದಿದ್ದಲ್ಲಿ ಮೇ 11ರಂದು ಶ್ರೀ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ಕಚೇರಿ ಬಂದ್ ಮಾಡುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ಆದರೆ, ಕಲಬುರಗಿ ಜಿಲ್ಲಾಧಿಕಾರಿಗಳು ಮೇ 7ರಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರೇಡ್-2 ತಹಸೀಲ್ದಾರರಿಗೆ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ವಿತರಿಸುವ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂತೆಗೆದುಕೊಳ್ಳಲಾಗಿದೆ.
ಅಫಜಲಪುರ ತಾಲೂಕಿನ ಗ್ರೇಡ್-2 ತಹಶೀಲ್ದಾರರು ತಳವಾರ ಸಮುದಾಯದ ಜನರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವರೆಂಬ ಭರವಸೆಯ ಮೇರೆಗೆ ಮೇ 11ರಂದು ನಿಗದಿಯಾಗಿದ್ದ ಹೋರಾಟವನ್ನು ಹಿಂಪಡೆಯಲಾಗಿದೆ ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






