Afzalpur | ಹದಗೆಟ್ಟ ರಸ್ತೆಯಿಂದ ಬಸ್ ಸಂಚಾರ ಸ್ಥಗಿತ; ಬಿಲ್ವಾಡ(ಕೆ) ಗ್ರಾಮಸ್ಥರ ಪರದಾಟ

ಅಫಜಲಪುರ: ತಾಲೂಕಿನ ಬಿಲ್ವಾಡ(ಕೆ) ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುಸ್ಥಿತಿಯಿಂದ ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದ್ದು, ಅಗತ್ಯ ಕೆಲಸಗಳಿಗಾಗಿ ಪಟ್ಟಣಕ್ಕೆ ತೆರಳಲು ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮಸ್ಥರಾದ ದೊಂಡಿಬಾ ಬಂಡಗಾರ ಹಾಗೂ ಸಂಗಮರಾಯ ದೊಡ್ಮನಿ ಮಾತನಾಡಿ, ಹಲವು ವರ್ಷಗಳಿಂದ ರಸ್ತೆ ದುರಸ್ತಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಖಾಸಗಿ ವಾಹನಗಳ ಸಂಚಾರವೂ ದುಸ್ತರವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಉದ್ಯೋಗಸ್ಥರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ತುರ್ತು ಆರೋಗ್ಯ ಸಮಸ್ಯೆಗಳು ಹಾಗೂ ಹೆರಿಗೆ ಸಂದರ್ಭಗಳಲ್ಲಿ ಆಸ್ಪತ್ರೆಗೆ ತಲುಪುವುದೇ ಜೀವದ ಹಂಗಿನ ಕೆಲಸವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಹದಗೆಟ್ಟ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ಗ್ರಾಮಕ್ಕೆ ನಿಯಮಿತ ಸಾರಿಗೆ ಬಸ್ ಸೇವೆ ಪುನರಾರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.




