Afzalpur | 1 ಲಕ್ಷ ರೂ. ನಗದು ಇದ್ದ ಬ್ಯಾಗ್ ಅನ್ನು ಮರಳಿಸಿದ ಕೆಫೆ ಮಾಲಕನಿಗೆ ಪೊಲೀಸ್ ಠಾಣೆಯಲ್ಲಿ ಸನ್ಮಾನ

ಅಫಜಲಪುರ: ಕೆಫೆಯಲ್ಲಿ ಮರೆತು ಬಿಟ್ಟಿದ್ದ 1 ಲಕ್ಷ ರೂ. ನಗದು ಇದ್ದ ಬ್ಯಾಗ್ ಅನ್ನು ಯಾವುದೇ ಅಪೇಕ್ಷೆಯಿಲ್ಲದೆ ಪೊಲೀಸ್ ಠಾಣೆಗೆ ಒಪ್ಪಿಸಿ ಅದರ ನಿಜವಾದ ಮಾಲೀಕರಿಗೆ ಮರಳಿಸಲು ನೆರವಾದ ಕರುನಾಡು ಕೆಫೆಯ ಮಾಲೀಕ ಮಂಜು ಬುತಾಳೆ ವಠಾರ ಅವರ ಪ್ರಾಮಾಣಿಕತೆಯನ್ನು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.
ಜುಲೈ 20ರಂದು ಒಎನ್‌ಜಿಸಿ (ONGC) ಸಂಸ್ಥೆಯ ವಿಜಿಲೆನ್ಸ್ ವಿಭಾಗದ ಸೆಕ್ಯೂರಿಟಿ ಇನ್ಸ್‌ಪೆಕ್ಟರ್ ಶಿವಾಜಿ ಚವ್ಹಾಣ ಅವರು ವೈಯಕ್ತಿಕ ಕೆಲಸದ ನಿಮಿತ್ತ ಅಫಜಲಪುರಕ್ಕೆ ಬಂದಿದ್ದರು. ಈ ವೇಳೆ ಪಟ್ಟಣದ ಕರುನಾಡು ಕೆಫೆಯಲ್ಲಿ ಚಹಾ ಸೇವಿಸಿ ತೆರಳುವಾಗ ತಮ್ಮ ಬ್ಯಾಗ್ ಅನ್ನು ಅಲ್ಲಿಯೇ ಮರೆತು ಹೋಗಿದ್ದರು. ಬಳಿಕ ಕೆಫೆ ಸಿಬ್ಬಂದಿಗೆ ಬ್ಯಾಗ್ ಸಿಕ್ಕಿದ್ದು, ಪರಿಶೀಲಿಸಿದಾಗ ಅದರೊಳಗೆ 1 ಲಕ್ಷ ರೂ. ನಗದು ಇರುವುದನ್ನು ಕಂಡುಬಂದಿತು.
ಕೆಫೆಯ ಮಾಲೀಕರಾದ ಮಂಜು ಬುತಾಳೆ ವಠಾರ ಅವರು ಯಾವುದೇ ಲೋಭಕ್ಕೆ ಒಳಗಾಗದೆ ಬ್ಯಾಗ್ ಅನ್ನು ಅಫಜಲಪುರ ಪೊಲೀಸ್ ಠಾಣೆಗೆ ಒಪ್ಪಿಸಿದರು. ಪೊಲೀಸರು ಬ್ಯಾಗ್‌ನ ಮಾಲಕರನ್ನು ಸಂಪರ್ಕಿಸಿ, ಪರಿಶೀಲನೆಯ ಬಳಿಕ ನಗದು ಸಹಿತ ಬ್ಯಾಗ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು.
ಮಂಜು ಬುತಾಳೆ ವಠಾರ ಅವರ ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯವನ್ನು ಮೆಚ್ಚಿದ ಅಫಜಲಪುರ ಪೊಲೀಸ್ ಠಾಣೆಯ ಪಿಎಸ್‌ಐ ವಾತ್ಸಲ್ಯ ಅವರು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಪುಂಡಲೀಕ ಹೊಸಮನಿ, ಇತ್ತೀಚಿನ ದಿನಗಳಲ್ಲಿ ಕಳ್ಳತನ, ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೂ ಯಾವುದೇ ಸ್ವಾರ್ಥವಿಲ್ಲದೆ ನಗದು ಇದ್ದ ಬ್ಯಾಗ್ ಅನ್ನು ನಿಜವಾದ ಮಾಲೀಕರಿಗೆ ಮರಳಿಸಿರುವ ಮಂಜು ಬುತಾಳೆ ವಠಾರ ಅವರ ನಡೆ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವಂತಿದೆ ಎಂದು ಶ್ಲಾಘಿಸಿದರು.






