ಅಫಜಲಪುರ | ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದಿಸಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಕಲಬುರಗಿ: ಆರೆಸ್ಸೆಸ್ ಸಂಘಟನೆಯವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕಾಂಗ್ರೆಸ್ ಪಕ್ಷ ಮತ್ತು ಅಫಜಲಪುರ ಬ್ಲಾಕ್ ಕಾಂಗ್ರೆಸ್ಸಿನ ಮುಖಂಡರು, ಪದಾಧಿಕಾರಿಗಳು, ಸೇರಿದಂತೆ ಸಮಸ್ತ ಜನತೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಗೌಡ ಪಾಟೀಲ್ ಹೇಳಿದ್ದಾರೆ.
ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಫಜಲಪುರ ಬ್ಲಾಕ್ ಯುತ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಒಂದು ಸಂಘಟನೆ ದುರ್ಬಳಕೆ ಮಾಡಿಕೊಂಡು ತಮ್ಮ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅಫಜಲಪುರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್ ಪೂಜಾರಿ ಮಾತನಾಡಿ, ಇಂತಹ ಗೊಡ್ಡು ಬೆದರಿಕೆಗಳಿಗೆ ಸಚಿವರಾಗಿರಲಿ ಪಕ್ಷವಾಗಲಿ ಎಂದಿಗೂ ಹೆದರುವುದಿಲ್ಲ, ಒಂದು ವೇಳೆ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಚರ್ಚೆಗೆ ಮುಕ್ತವಾದ ಅವಕಾಶವಿದೆ, ತಾಕತ್ತಿದ್ದರೆ ಸಚಿವರು ಕೇಳಿದ ಹತ್ತು ಪ್ರಶ್ನೆಗಳಿಗೆ ಯಾವುದೇ ಆರೆಸ್ಸೆಸ್ ಕಾರ್ಯಕರ್ತ ಅಥವಾ ನಾಯಕ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಮಾಜಿ ಅಧ್ಯಕ್ಷ ಶರಣು ಕುಂಬಾರ್, ಯುವ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಅವರು ಮಾತನಾಡಿದರು.
ಅಂಬೇಡ್ಕರ್ ವೃತ್ತದಲ್ಲಿ ಜವಾಯಿಸಿದ ಯುವ ಕಾಂಗ್ರೆಸ್ ಸದಸ್ಯರು ಕೈಯಲ್ಲಿ "ಬ್ಯಾನ್ ಆರೆಸ್ಸೆಸ್" , "ಪ್ರಿಯಾಂಕ್ ಖರ್ಗೆ ಜಿಂದಾಬಾದ್"ಎಂದು ಬರೆದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ ಜಮಾದಾರ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತೀನ್ ಅಹ್ಮದ್ ಪಟೇಲ್, ಪಪ್ಪುಪಟೇಲ್, ಸಿದ್ದಾರ್ಥ ಬಸರಿಗಡದ, ಪುರಸಭೆ ಸದಸ್ಯ ಹಾಜಿ ಮುಜಾವರ್ ಖಾಸಿಂಸಾಬ್, ರವೀಂದ್ರ ಶೆಟ್ಟಿ, ಸೈಫನ್ ಚಿಕ್ಕಳಿಗೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸಿಂಗೆ, ಕಾಂಗ್ರೆಸ್ ಮುಖಂಡ ಸಿದ್ದು ಸಿರಸಗಿ ಯುವ ಕಾಂಗ್ರೆಸ್ ಮುಖಂಡ ಗೌತಮ್ ಬಳೂರಗಿ, ಖೀಮ್ ಸಿಂಗ್ ರಾಥೋಡ್, ಗುರುದೇವ್ ಪೂಜಾರಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಮಠಪತಿ, ಬ್ಲಾಕ್ ಕಾಂಗ್ರೆಸ್ ಕಮಿಟಿ (ಯೂತ್) ಅಧ್ಯಕ್ಷರಾದ ಪ್ರವೀಣ್ ಕಲ್ಲೂರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.







