Afzalpur | ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಲು ಆಗ್ರಹ
ಟನ್ ಕಬ್ಬಿಗೆ 5 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯ

ಅಫಜಲಪುರ, ಸೆ.8: ಟನ್ ಕಬ್ಬಿಗೆ 5,000 ರೂ. ಬೆಂಬಲ ಬೆಲೆ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಫಜಲಪುರ ತಾಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಕಬ್ಬು ಬೆಳೆಗಾರರ ಸಮ್ಮೇಳನ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತರಾಜ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕ್ಕರೆ ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿರುವುದರಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಒಂದು ಟನ್ ಕಬ್ಬಿನಿಂದ ಸಕ್ಕರೆ, ಎಥನಾಲ್, ಬಗಾಸ್, ಕಾಕಂಬಿ, ಕೊಜೆನ್, ಡಿಸ್ಟಿಲರಿ, ಪ್ರೆಸ್‌ಮಡ್ ಹಾಗೂ ಬಯೋ ಕಾಂಪೋಸ್ಟ್ ಸೇರಿದಂತೆ ವಿವಿಧ ಉಪ ಉತ್ಪನ್ನಗಳಿಂದ 13 ರೂ. ನಿಂದ 14 ಸಾವಿರ ರೂ.ವರೆಗೆ ಆದಾಯ ಬರುತ್ತದೆ. ಆದರೆ ರೈತರಿಗೆ ಮಾತ್ರ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬಿನಿಂದ ಉತ್ಪಾದನೆಯಾಗುವ ಸ್ಪಿರಿಟ್‌ನಿಂದ ಸರ್ಕಾರಕ್ಕೆ ಭಾರಿ ಪ್ರಮಾಣದ ಅಬಕಾರಿ ಆದಾಯ ಬರುತ್ತಿದ್ದರೂ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು. 2022–23ನೇ ಸಾಲಿನ ರಾಜ್ಯ ಸಲಹಾ ಬೆಲೆ (SAP)ಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ತಮಿಳುನಾಡು, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರತಿ ಟನ್ ಕಬ್ಬಿಗೆ 500 ರೂ. ಎಸ್‌ಎಪಿ ನಿಗದಿಪಡಿಸಬೇಕು. ಕೇಂದ್ರ ಸರ್ಕಾರ ಎಫ್‌ಆರ್‌ಪಿಯನ್ನು ಕೇವಲ 100 ರೂ. ಹೆಚ್ಚಿಸಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಅಫಜಲಪುರ ತಾಲೂಕು ಸಂಪೂರ್ಣ ನೀರಾವರಿಯಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ಕೆರೆಗಳನ್ನು ಹೂಳೆತ್ತಿ ಪುನಶ್ಚೇತನಗೊಳಿಸಬೇಕು. ಅವೈಜ್ಞಾನಿಕ ಕೆರೆ ತುಂಬುವ ಯೋಜನೆಯನ್ನು ಮರುಪರಿಶೀಲಿಸಿ ವೈಜ್ಞಾನಿಕವಾಗಿ ಜಾರಿಗೊಳಿಸಬೇಕು. ಕಾಲುವೆಗಳಿಗೆ ಕಾಡಾ ಗೇಟ್‌ಗಳನ್ನು ಅಳವಡಿಸಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಮಾತನಾಡಿ, ಕಾಲುವೆಗಳಿಗೆ ಕಾಡಾ ಗೇಟ್ ಅಳವಡಿಸುವ ಸಿದ್ಧತೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಾಂತು ಅಂಜುಟಗಿ ಹಾಗೂ ಸ್ವಾಭಿಮಾನಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಹಾಗೂ ರೈತರ ನಡುವೆ ದ್ವಿಪಕ್ಷೀಯ ಸಮಿತಿ ರಚಿಸಬೇಕು. ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ರೈತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಚಿದಾನಂದ ಮಠ ವಹಿಸಿದ್ದರು. ಭೀಮಾ ನದಿ ನೀರಾವರಿ ಹೋರಾಟ ಸಮಿತಿಯ ಪಂಚಪ್ಪ ಕಲಬುರಗಿ ಸಮ್ಮೇಳನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಮುಖಂಡ ಗುರು ಚಾಂದಕೋಟೆ, ನೀರಾವರಿ ಸಮಿತಿ ಅಧ್ಯಕ್ಷ ರಮೇಶ್ ಪಾಟೀಲ, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರೆ, ನಾಮದೇವ ಕಡಕೋಳ, ನೂರಾಹ್ಮದ ಭಾಗವಾನ, ಲತೀಫ್ ಪಟೇಲ್, ಮಹಿಬೂಬ ನದಾಫ್, ಬಸವರಾಜ ಘಾಣೂರ, ಭೀಮರಾಯ ತಳವಾರ, ಸಂಜೀವ ಶಿವೂರ, ಸೋಮಶೇಖರ ರೇವೂರ, ಶರಣು ದಿವಾಣಜಿ, ಶರಣಗೌಡ ಕರಿಗೌಡ, ರಾಜುಗೌಡ ಬಾಸಗಿ, ಬಸವರಾಜ ಕಲಶೆಟ್ಟಿ, ಮುರುಗೇಂದ್ರ ಮಸಳಿ, ಸಿದ್ದರಾಮ ಶಿರಸಿಗಿ, ಅಪ್ಪಸಾಹೇಬ ಪಾಣೆಗಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. ಶಿಕ್ಷಕಿ ಚಿತ್ರಕಲಾ ಪಾಟೀಲ ನಿರೂಪಿಸಿ, ವಂದಿಸಿದರು.






