Afzalpur | ಉಜನಿಯಿಂದ 15 ಟಿಎಂಸಿ ನೀರು ಹರಿಸಲು ಆಗ್ರಹ

ಅಫಜಲಪುರ: ಬಚಾವತ್ ಆಯೋಗದ ಶಿಫಾರಸಿನಂತೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಹಂತ ಹಂತವಾಗಿ ಹರಿಸಬೇಕು. ಇಲ್ಲವಾದರೆ ಭೀಮಾ ನದಿ ದಡದ ರೈತರು ಒಗ್ಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಫಜಲಪುರ ತಾಲೂಕು ಸಮಗ್ರ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ರಮೇಶ್ ಶೆಟ್ಟಿ ಹಾಗೂ ಶಾಂತಕುಮಾರ ಅಂಜುಟಗಿ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಭೀಮಾ ನದಿ ಸಂಪೂರ್ಣ ಬತ್ತಿ ಹೋಗುವುದರಿಂದ ತಾಲೂಕಿನ ಜನರು ನಾಲ್ಕೈದು ತಿಂಗಳ ಕಾಲ ಕುಡಿಯುವ ನೀರು ಹಾಗೂ ಕೃಷಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಮಹಾರಾಷ್ಟ್ರ ಸರ್ಕಾರದಿಂದ ಬಿಡುಗಡೆ ಮಾಡಿಸಲು ಒತ್ತಡ ಹೇರುವಂತೆ ಭೀಮಾ ನದಿ ದಡದ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಬಹುತೇಕ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಹಂತ ಹಂತವಾಗಿ ಬಿಡುಗಡೆ ಮಾಡಬೇಕು. ಅಫಜಲಪುರ ತಾಲೂಕಿನಲ್ಲಿ ಸುಮಾರು 5 ಟಿಎಂಸಿ ನೀರು ಸಂಗ್ರಹಿಸಿಕೊಳ್ಳುವಷ್ಟು ಅವಕಾಶಗಳಿದ್ದು, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರು ಹರಿಸಿದರೆ ಕುಡಿಯುವ ನೀರು ಮತ್ತು ಕೃಷಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಭೀಮಾ ನದಿ ದಡದ ಶಾಸಕರು ಬೆಂಬಲ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಆ. 27ರೊಳಗೆ ನದಿ ದಡದ ಶಾಸಕರು ಹಾಗೂ ರೈತ ಮುಖಂಡರ ಸಭೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಭೀಮಾ ನದಿ ಉಳಿವಿಗಾಗಿ ಪಂಚಪ್ಪ ಕಲಬುರಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆ. 31ರಂದು ಅಫಜಲಪುರ ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಭೀಮಾ ನದಿ ದಡದ ಶಾಸಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಮೇಶ್ ಪಾಟೀಲ್,ಲತೀಫ್ ಪಟೇಲ್, ಭೀಮರಾಯ ಗೌರ, ಮುರುಘೇಂದ್ರ ಮಸಳಿ,ನೂರ ಅಹ್ಮದ್ ಬಾಗವಾನ, ಚಂದ್ರಶೇಖರ ಕರಜಗಿ, ನಾಮದೇವ ಕಡಕೋಳ, ಬಸವರಾಜ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






