ಅಫಜಲಪುರ | ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಲಿ: ಶಶೀಲ್ ನಮೋಶಿ

ಅಫಜಲಪುರ: ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ನಡುವೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪೈಪೋಟಿ ಇರಬೇಕು. ಆಗಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.
ತಾಲೂಕಿನ ಶಿರವಾಳ ಗ್ರಾಮದ ಶ್ರೀ ವೀರಸಂಗಮೇಶ್ವರ ವಿದ್ಯಾಪೀಠ ಹಾಗೂ ಗ್ರಾಮೀಣಾಭಿವೃದ್ಧಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ದಿ. ರಾಯಗೊಂಡಪ್ಪ ಅಂಜುಟಗಿ ಅವರ ಮೂರ್ತಿ ಅನಾವರಣ ಹಾಗೂ 12ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಹಲವು ಸೌಲಭ್ಯಗಳಿರಬೇಕೆಂಬ ನಿಯಮಗಳಿದ್ದರೂ, ಅವುಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಿತ್ತೂರು ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಭಾಗಗಳಂತೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಮತ್ತು ಅವಕಾಶಗಳನ್ನು ನೀಡಿದಾಗ ಮಾತ್ರ ಈ ಭಾಗದಲ್ಲಿ ಶಿಕ್ಷಣದ ಮಟ್ಟದಲ್ಲಿ ಬದಲಾವಣೆ ಕಾಣಬಹುದು. ಇಲ್ಲವಾದರೆ ಮುಂದಿನ 50 ವರ್ಷಗಳಲ್ಲೂ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಶಿಕ್ಷಣ ಸಂಸ್ಥೆ ಪ್ರಾರಂಭದ ಹಂತದಲ್ಲಿ ಹಲವು ಅಡೆತಡೆಗಳಿದ್ದರೂ, ದಿ. ರಾಯಗೊಂಡಪ್ಪ ಅಂಜುಟಗಿ ಅವರ ಶ್ರಮದಿಂದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅವರು ದೈಹಿಕವಾಗಿ ಇಲ್ಲದಿದ್ದರೂ, ಈ ಸಂಸ್ಥೆಯ ಮೂಲಕ ನಮ್ಮೊಡನೆ ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಕಾಸ ಅಂಜುಟಗಿ, ಸಂಸ್ಥೆಯ ಅಧ್ಯಕ್ಷ ಸಂಗಮೇಶ ಅಂಜುಟಗಿ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಕೈಲಾಸಲಿಂಗ ಶಿವಾಚಾರ್ಯರು, ಶ್ರೀ ಶಂಭುಲಿಂಗ ಶಿವಯೋಗಿ ಶಿವಾಚಾರ್ಯರು, ಬಸವರಾಜ ಬಳೂಂಡಗಿ, ಮಹೇಶ್ ಹೂಗಾರ, ದಾನಪ್ಪ ಹೇರೂರ, ಜಗದೇವಪ್ಪ ಅಂಜುಟಗಿ, ಡಾ. ವಿಕ್ರಮ ಹಿರೇಮಠ, ಶಾಮರಾಯಗೌಡ ಪಾಟೀಲ್, ತುಕರಾಮಗೌಡ ಪಾಟೀಲ್, ಮಲ್ಲು ಯಂಕಂಚಿ, ಸಾಧಿಕ್ ಅಹ್ಮದ್, ಭಗವಂತ್ರಾಯ ಸಂಕೋಳಿ, ಬಿಲಾಲ್ ಚೌಧರಿ, ಸೌಮ್ಯಾ ಅಂಜುಟಗಿ, ಸದಾಶಿವ ಅಂಜುಟಗಿ, ಶ್ರೀಮಂತ ಅಂಜುಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







