ಅಫಜಲಪುರ | ಕೇಂದ್ರ ಬಜೆಟ್ ವಿರುದ್ಧ ರೈತ–ಕಾರ್ಮಿಕರ ಆಕ್ರೋಶ : ಬಜೆಟ್ ಪ್ರತಿಗೆ ಬೆಂಕಿ

ಅಫಜಲಪುರ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತರು ಹಾಗೂ ಅಸಂಘಟಿತ ಕಾರ್ಮಿಕರು ಕೇಂದ್ರ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಪ್ರತಿಗೆ ಬೆಂಕಿ ಹಚ್ಚಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಹಾಗೂ ಕಾರ್ಮಿಕ ಹೋರಾಟಗಾರ ಶ್ರೀಮಂತ ಬಿರಾದಾರ, ಕೇಂದ್ರ ಬಜೆಟ್ ರೈತ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದರು.
ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಭದ್ರತೆ, ಗ್ರಾಮೀಣ ಉದ್ಯೋಗ ಸೃಷ್ಟಿ ಕುರಿತು ಯಾವುದೇ ಸ್ಪಷ್ಟ ಹಾಗೂ ಪರಿಣಾಮಕಾರಿ ಪ್ರಸ್ತಾವನೆಗಳು ಇಲ್ಲ. ಅಲ್ಲದೆ ರಸಗೊಬ್ಬರ ಸಬ್ಸಿಡಿಯನ್ನು 15,679 ಕೋಟಿ ರೂ. ಕಡಿತಗೊಳಿಸಿರುವುದು ರೈತರ ಮೇಲಿನ ಮತ್ತೊಂದು ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಿ.ಐ.ಟಿ.ಯು ಅಧ್ಯಕ್ಷೆ ಶಾಂತಾ ಘಂಟೆ ಮಾತನಾಡಿ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ನೌಕರರು ಸೇರಿದಂತೆ ದುಡಿಯುವ ವರ್ಗದ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಗುಣವಾದ ಆರ್ಥಿಕ ಭದ್ರತೆ ನೀಡದೇ ಕೇಂದ್ರ ಸರ್ಕಾರ ಬಡ ಕಾರ್ಮಿಕರಿಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜನಜೀವನದ ಆಧಾರವಾಗಿರುವ ಕೃಷಿ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ಬದಲು, ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಕೃಷಿಯನ್ನು ನಿರ್ಲಕ್ಷಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ರೈತರ ಕುರಿತು ಕೇವಲ ಒಮ್ಮೆ ಮಾತ್ರ ಉಲ್ಲೇಖ ಮಾಡಿರುವುದಲ್ಲದೆ, ಗ್ರಾಮೀಣ ಕಾರ್ಮಿಕರ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು.
ಈ ವೇಳೆ ಫೆ.12ರಂದು ದೇಶಾದ್ಯಂತ ನಡೆಯುವ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ರೈತರು ಮತ್ತು ಕಾರ್ಮಿಕರಿಗೆ ಕರೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಶಿವಾನಂದ ಹೋಟಕರ್, ಬಿಸ್ಮಿಲ್ ಖೇಡಗಿ, ಕಲಾವತಿ ಯಳಸಂಗಿ, ಶಿವಲೀಲ ಪಾಟೀಲ್, ಮಹಾಂತೇಶ ಬಳೂಂಡಗಿ, ಶ್ರೀಶೈಲ ಪತ್ತಾರ, ಶಾಂತಾ ಕುಂಬಾರ, ಶರಣಬಸು, ಜಗದೇವಿ ಕರಜಗಿ, ಶಿವು ಪೂಜಾರಿ, ಬೀರಣ್ಣ ನಿಂಬಾಳ, ಶ್ರೀಮಂತ ಸಿಂದಗಿ, ಅಶೋಕ ಛತ್ರಿ, ಚಾಂದಸಾಹೇಬ ಶೇಖ್, ಮಷಾಕ್ ನದಾಪ್, ಪ್ರಮೋದ, ಸಿದ್ದು ಜಮಾದಾರ, ವಿಜಯಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.







