Afzalpur | ಗಣೇಶೋತ್ಸವ ಸಮಾಜದ ಸಾಮರಸ್ಯದ ಪ್ರತೀಕ : ಶಂಕರ ಮ್ಯಾಕೇರಿ

ಅಫಜಲಪುರ: ಗಣೇಶೋತ್ಸವವು ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಯುವಕರು ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಉದ್ಯಮಿ ಶಂಕರ ಮ್ಯಾಕೇರಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿ ಶ್ರೀ ನಿಜ ಶರಣ ಯುವಕ ಮಂಡಳಿ ವತಿಯಿಂದ 21 ದಿನಗಳ ಕಾಲ ಆಯೋಜಿಸಿದ್ದ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಭವ್ಯ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
21 ದಿನಗಳ ಕಾಲ ಶಿಸ್ತು, ಭಕ್ತಿಭಾವ ಹಾಗೂ ಸಂಭ್ರಮದಿಂದ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿರುವ ಶ್ರೀ ನಿಜ ಶರಣ ಯುವಕ ಮಂಡಳಿಯ ಕಾರ್ಯ ಶ್ಲಾಘನೀಯ. ಇಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಬೆಳೆಸಲು ಸಹಕಾರಿಯಾಗುತ್ತವೆ. ಗಣೇಶನ ಕೃಪೆಯಿಂದ ನಾಡಿನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಅವರು ಹಾರೈಸಿದರು.
ಶ್ರೀ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಣೇಶನ ಜಯಘೋಷಗಳೊಂದಿಗೆ ವಿಸರ್ಜನಾ ಮೆರವಣಿಗೆ ಆರಂಭವಾಯಿತು.
ಮೆರವಣಿಗೆಯಲ್ಲಿ ಯುವಕರು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಮೂಲಕ ಭಕ್ತಿ ಹಾಗೂ ಉತ್ಸಾಹ ಮೆರೆದರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾರ್ವಜನಿಕರು ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಫಜಲಪುರ ಪೊಲೀಸ್ ಠಾಣೆಯ ಸಿಪಿಐ ಲಖನ್ ಮಸಗುಪ್ಪಿ, ಮುಖಂಡರಾದ ಸಿದ್ದು ಮ್ಯಾಕೇರಿ, ಬಸವರಾಜ ಚಿಂಚೋಳಿ ಸೇರಿದಂತೆ ನೂರಾರು ಯುವಕರು ಹಾಗೂ ಪಟ್ಟಣದ ಭಕ್ತರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು.






