ಅಫಜಲಪುರ | ಶಿಕ್ಷಣಕ್ಕೆ ಆದ್ಯತೆ ನೀಡಿ : ಶಾಸಕ ಎಂ.ವೈ.ಪಾಟೀಲ್

ಅಫಜಲಪುರ : ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ಪೋಷಕರು ಯಾವುದೇ ಸಂಕಷ್ಟ ಎದುರಾದರೂ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಹೂಗಾರ ಸಮಾಜ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೂಗಾರ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಹೂಗಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. ಸಮಾಜದವರು ಎಲ್ಲ ವರ್ಗಗಳಿಗೂ ಅಗತ್ಯವಾದ ಸೇವೆ ಸಲ್ಲಿಸುತ್ತಿದ್ದು, ಅವರ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖಂಡರು ಮನವಿ ಸಲ್ಲಿಸಿದ್ದು, ಪುರಸಭೆಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಲೇಔಟ್‌ಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೆ ಸಭಾಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೂಗಾರ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಹೂಗಾರ ಮಾತನಾಡಿ, “ಹೂಗಾರರು ಹೂವು ಕಟ್ಟುವವರೇ ಹೊರತು ದ್ವೇಷ ಕಟ್ಟುವವರಲ್ಲ. ರಾಜ್ಯದಲ್ಲಿ ಸುಮಾರು 13 ಲಕ್ಷ ಜನಸಂಖ್ಯೆ ಇದ್ದರೂ ಸಮಾಜಕ್ಕೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಸಿಗದಿರುವುದು ಬೇಸರದ ಸಂಗತಿ” ಎಂದು ಹೇಳಿದರು.
ಸಮಾಜಕ್ಕೆ ಕಲ್ಯಾಣ ಮಂಟಪ ನಿರ್ಮಾಣ, ಅಭಿವೃದ್ಧಿ ನಿಗಮದ ಸಮರ್ಪಕ ಅನುಷ್ಠಾನ ಹಾಗೂ ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರ್ಕಾರ ಶೀಘ್ರ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ. ಕೊರಬು, ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ ಮ್ಯಾಕರಿ, ಅಫಜಲಪುರ-ದೇವಲಗಾಣಗಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಎಪಿಎಂಸಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಅಂಜುಟಗಿ, ಶ್ರೀಶೈಲ ಬಳೂರ್ಗಿ, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ತಾಲೂಕು ಹೂಗಾರ ಸಮಾಜದ ಅಧ್ಯಕ್ಷ ಚಂದ್ರಕಾಂತ ಘತ್ತರಗಿ , ರಾಜ್ಯ ಸಂಘಟನಾ ಕಾರ್ಯದರ್ಶಿ, ಅಶೋಕ ಆರ್. ಹೂಗಾರ, ಪುಟ್ಟು ಹೂಗಾರ ರಮೇಶ ಹೂಗಾರ, ಡಾ.ಲಕ್ಷ್ಮೀಕಾಂತ ಹೂಗಾರ,ಶಿವಾನಂದ ಹೂಗಾರ, ಮಲ್ಲಿಕಾರ್ಜುನ ಹೂಗಾರ,ಕಲ್ಲಪ್ಪ ಹೂಗಾರ,ಗ್ರಾಪಂ ಅಧ್ಯಕ್ಷೆ ನೀಲಮಾ, ಚಂದ್ರಕಾಂತ ಹೂಗಾರ ಹೂಗಾರ, ಸಂತೋಷ ಹೂಗಾರ, ಗುರುಸಿದ್ದ ಹೂಗಾರ, ಸಿದ್ದು ಅವಟಿ, ರಶ್ಮೀ ಹೂಗಾರ, ರೇವಣಸಿದ್ದ ಹೂಗಾರ, ಶಿವಾನಂದ ಹೂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಿಂಚೋಳಿಯ ಶರಣಬಸವ ಶರಣರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸಮಾಜದ ಪದಾಧಿಕಾರಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.






