Afzalpur | ಭೀಮಾ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆ : 5 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತ

ಅಫಜಲಪುರ: ಭೀಮಾ ಏತ ನೀರಾವರಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಅತನೂರು ಹೆದ್ದಾರಿಯಲ್ಲಿ ಶಾಂತಿಯುತ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದ ಅತನೂರು ಹೆದ್ದಾರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಅತನೂರು, ಇಂಗಳಗಿ (ಬಿ), ಅವರಾದ, ತೆಲ್ಲೂರು, ಕೆರಕನಹಳ್ಳಿ, ಬಟಗೇರಿ, ಸಿನ್ನೂರ, ಭೋಗನಹಳ್ಳಿ, ಧಣ್ಣೂರು ಹಾಗೂ ಅಂಕಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಭೀಮಾ ಏತ ನೀರಾವರಿ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ತಲುಪದೆ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವರ್ಷವೂ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೂಡಲೇ ಕಾಲುವೆಗಳಿಗೆ ನೀರು ಹರಿಸಿ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು ಎಂದು ಆಗ್ರಹಿಸಿದರು.
ರೈತರು ಭೀಮಾ ಏತ ನೀರಾವರಿ ಕಾಲುವೆಗಳಿಗೆ ತಕ್ಷಣ ನೀರು ಹರಿಸುವುದು, ಬಡದಾಳ–ಅರ್ಜುಣಗಿ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಹಾನಿಗೊಳಗಾದ ಪೈಪ್‌ಲೈನ್ ದುರಸ್ತಿ, 2024–25ನೇ ಸಾಲಿನ ಬೆಳೆ ವಿಮೆ ಹಣವನ್ನು ಅರ್ಹ ರೈತರ ಖಾತೆಗಳಿಗೆ ಬಿಡುಗಡೆ ಮಾಡುವುದು ಹಾಗೂ ಕಾಲುವೆ ಕಾಮಗಾರಿ ನಡೆಸಿದ ರೈತರಿಗೆ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದರು.
ಇದರೊಂದಿಗೆ ಅಫಜಲಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಕಲಬುರಗಿ ಜಿಲ್ಲೆಗೆ 1,000 ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ 5,000 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಕೊರಳ್ಳಿ ಡ್ಯಾಂನಿಂದ ಅಮರ್ಜಾ ಹಳ್ಳಕ್ಕೆ ಜಾನುವಾರುಗಳ ಕುಡಿಯುವ ನೀರಿಗಾಗಿ ನೀರು ಹರಿಸಬೇಕು. ಭಾರತ್‌ಮಾಲಾ ರಸ್ತೆ ಕಾಮಗಾರಿಯಿಂದ ಬಂದ್ ಆಗಿರುವ ರೈತರ ಹೊಲಗಳ ಪ್ರವೇಶ ದಾರಿಗಳನ್ನು ಪುನಃ ತೆರೆಯಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.
ಅತನೂರು ಗ್ರಾಮದ ಗುರು ಬಸವ ಶ್ರೀಗಳು ಮಾತನಾಡಿ, ಈ ಭಾಗದ ಅನೇಕ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ. ಕೆಲ ರೈತರ ಖಾತೆಗಳಿಗೆ ಕೇವಲ 20 ರೂ. ಮಾತ್ರ ಜಮೆಯಾಗಿದೆ. ಈ ಲೋಪವನ್ನು ಸರಿಪಡಿಸಿ ಅರ್ಹ ರೈತರ ಖಾತೆಗಳಿಗೆ ಸಂಪೂರ್ಣ ಬೆಳೆ ವಿಮೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಕರವೇ ಅಧ್ಯಕ್ಷ ಶ್ರೀಕಾಂತ್ ದಿವಾಣಜಿ ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವಾಗ ಆಳಂದ ತಾಲೂಕಿನ ಅಮರ್ಜಾ ನದಿಗೆ ನೀರು ಬಿಡುವುದು ಸರಿಯಲ್ಲ. ಮೊದಲು ಅಫಜಲಪುರ ತಾಲೂಕಿನ ಜನರು ಹಾಗೂ ರೈತರ ನೀರಿನ ಸಮಸ್ಯೆ ಪರಿಹರಿಸಬೇಕು. ಭೀಮಾ ನದಿಯಿಂದ ಅಮರ್ಜಾ ನದಿಗೆ ನೀರು ಬಿಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.
ಬಳಿಕ ರೈತರು ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾಲುವೆಗಳಿಗೆ ಶೀಘ್ರ ನೀರು ಹರಿಸುವುದರ ಜತೆಗೆ ರೈತರ ಇತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಹೋರಾಟಗಾರ ಶರಣಬಸಪ್ಪ ಮಮಶೇಟ್ಟಿ, ಮುಖಂಡರಾದ ಅಶೋಕ ಹೂಗಾರ, ಶರಣಗೌಡ ಪಾಟೀಲ್, ಅಣ್ಣಾರಾಯ ಪಾಟೀಲ್, ಬಸವರಾಜ ಚಾಂದಕವಟೆ, ಮಲ್ಲಿಕಾರ್ಜುನ ಖರ್ಗೆ, ಶಿವರಾಯಗೌಡ ಪಾಟೀಲ್, ಮಹಾಂತಗೌಡ ಬಿರಾದಾರ್, ಶಂಕ್ರಯ್ಯ ಮಠಪತಿ, ಸಿದ್ದು ಚೌಕಿಮಠ, ಸಿದ್ದು ಹುಲಿ, ಹಣಮಂತರಾಯ ಕಲಬುರಗಿ, ಮಹೇಶ್ ಕುಮುಸಗಿ, ಶಿವಕುಮಾರ ರೇವೂರ್, ಲತೀಫ್ ಪಟೇಲ್, ಮಹಿಬೂಬ್ ಸಿದ್ದನೂರ, ಸೌಮ್ಯ ಪಟ್ನೆ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಕಲಬುರಗಿ ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಅಧಿಕಾರಿಗಳು ವಿಳಂಬ ಮಾಡದೆ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಬೇಕು. ರೈತರ ಸಂಕಷ್ಟವನ್ನು ಸರ್ಕಾರ ನಿರ್ಲಕ್ಷಿಸಬಾರದು.
-ಸಿದ್ದು ದಣ್ಣೂರು, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಕಾಲುವೆಗಳಿಗೆ ನೀರು ಹರಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳು ನೀಡಿದ ಭರವಸೆಯಂತೆ ಕೂಡಲೇ ಕಾರ್ಯಗತಗೊಳಿಸಬೇಕು. ಇದು ತಾತ್ಕಾಲಿಕ ಹೋರಾಟ ಮಾತ್ರ. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.
-ರಾಜು ಶೆಟ್ಟಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಲಬುರಗಿ
ಮಳೆ ಕೊರತೆ ಮತ್ತು ಕೃಷಿ ಸಂಕಷ್ಟವನ್ನು ಪರಿಗಣಿಸಿ ಅಫಜಲಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಕಲಬುರಗಿ ಜಿಲ್ಲೆಗೆ 1,000 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವುದರ ಜತೆಗೆ ಕಾಲುವೆಗಳಿಗೆ ನೀರು ಹರಿಸಿ ರೈತರ ಹಿತವನ್ನು ಕಾಪಾಡಬೇಕು.
-ಸಂತೋಷ ಮಲಗೊಂಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಅಫಜಲಪುರ






