Afzalpur | ಅಂಬೇಡ್ಕರ್ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಜ್ಞಾನಪ್ರಕಾಶ ಸ್ವಾಮೀಜಿ

ಅಫಜಲಪುರ : ಮಹಾಪುರುಷರು, ಸಂತರು ಹಾಗೂ ಶರಣರನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದ ನ್ಯಾಶನಲ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, “ಅಂಬೇಡ್ಕರ್ ಅವರನ್ನು ಕೇವಲ ಮೆರವಣಿಗೆ ಹಾಗೂ ಪ್ರತಿಮೆಗಳಿಗೆ ಸೀಮಿತಗೊಳಿಸದೆ, ಅವರ ಸಿದ್ಧಾಂತಗಳನ್ನು ತಿಳಿದುಕೊಂಡು ಜೀವನದಲ್ಲಿ ಅನುಸರಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ, “ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾನ್ ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವದ ಮಾರ್ಗದಲ್ಲಿ ನಡೆಯುವುದು ಅಗತ್ಯ” ಎಂದು ಹೇಳಿದರು.
ಡಾ. ಸಿದ್ದರಾಮ ಬೆಲ್ದಾಣ ಶರಣರು ಮಾತನಾಡಿ, “ಆಧುನಿಕ ಭಾರತದ ಪಿತಾಮಹ ಅಂಬೇಡ್ಕರ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ದಾಳಿಗಳು ನಡೆಯುತ್ತಿದ್ದು, ಮೀಸಲಾತಿ ವಿರೋಧಿ ಮನೋಭಾವದ ಶಕ್ತಿಗಳು ಕುತಂತ್ರ ನಡೆಸುತ್ತಿರುವುದು ಆತಂಕಕಾರಿ” ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ್ದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, “ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನ ಓದಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅಗತ್ಯ” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ನಾಗೇಶ ಕೊಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ತಹಶೀಲ್ದಾರ್ ಸಂಜೀವಕುಮಾರ ದಾಸರ , ಜಯಂತೋತ್ಸವ ಸಮಿತಿ ಅಧ್ಯಕ್ಷ ಶಿವರಾಜ ಹೊಸಮನಿ ಬಾದನಳ್ಳಿ, ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ. ಕೊರಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತೀನ್ ಪಟೇಲ, ಸಿದ್ದಾರ್ಥ ಬಸರಿಗಿಡ, ಅಫಜಲಪುರ-ಗಾಣಗಾಪೂರ ಅಭಿವೃದ್ಧಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕರಜಗಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಮುಖಂಡರಾದ ಪಪ್ಪು ಪಟೇಲ, ವಿಜಯಕುಮಾರ ಸಾಲಿಮನಿ, ಮಳೇಂದ್ರ ಡಾಂಗೆ, ಶಿವಾನಂದ ಗಾಡಿ ಸಾಹುಕಾರ, ನಾಗೇಶ ಕೊಳ್ಳಿ, ರಾಜಕುಮಾರ ಬಬಲಾದ, ದಯಾನಂದ ದೊಡ್ಮನಿ, ಅರವಿಂದ ದೊಡ್ಮನಿ, ಶರಣು ಕುಂಬಾರ, ಭೀಮರಾಯ ಗೌರ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖರ್ಗೆ, ವಕೀಲ ಎಸ್.ಎಸ್. ಪಾಟೀಲ, ಮಾಜೀದ್ ಪಟೇಲ, ಗುಂಡಪ್ಪ ಹೊಸ್ಮನಿ, ಮಹಾನಿಂಗ ಅಂಗಡಿ, ಮಹೇಶ ಹೊಸಮನಿ, ರವಿ ಗೌರ, ಅನಸೂಯಾ ಸುಲೇಕಾರ, ಮಲ್ಲಿಕಾರ್ಜುನ ಸಿಂಗೆ ಹಾಗೂ ರಾಜು ಆರೇಕಾರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜಕುಮಾರ ಬಬಲಾದ ನಿರೂಪಿಸಿದರು. ಭೀಮರಾಯ ಗೌರ ವಂದಿಸಿದರು.






