Afzalpur | ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

ಅಫಜಲಪುರ: ಕಬ್ಬು ಬೆಳೆಗಾರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಫಜಲಪುರ ತಾಲೂಕಿನಲ್ಲಿ ಹಗಲು-ರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಮುಖಂಡ ಗುರು ಚಾಂದಕವಟೆ ಮಾತನಾಡಿ, ಶೇ. 8.5ರ ರಿಕವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಬೇಕು. ಎಫ್‌ಆರ್‌ಪಿ (FRP) ದರವನ್ನು ಪ್ರತಿ ಟನ್‌ಗೆ 5,500 ರೂ. ಗೆ ಹೆಚ್ಚಿಸಬೇಕು ಹಾಗೂ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ರಮೇಶ ಪಾಟೀಲ ಮಾತನಾಡಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅನೇಕ ರೈತರ ಕಬ್ಬಿನ ಬೆಳೆ ಸುಟ್ಟುಹೋಗುತ್ತಿದೆ. ಅಲ್ಲದೆ, ಕಬ್ಬು ಒಣಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕಾರ್ಖಾನೆಗಳ ಆರಂಭವನ್ನು ವಿಳಂಬ ಮಾಡದೆ ನವೆಂಬರ್ 1ರಿಂದಲೇ ಕಬ್ಬು ಅರೆಯುವಿಕೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಹಾಗೂ ವಕೀಲ ಕೆ.ಜಿ. ಪೂಜಾರಿ ಮಾತನಾಡಿ, ರೈತರ ಕಷ್ಟ ಮತ್ತು ಸಂಕಷ್ಟಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಹೋರಾಟ ಅರ್ಥಪೂರ್ಣವಾಗಿದ್ದು, ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಲತೀಪ್ ಪಟೇಲ, ರಮೇಶ್ ಶೆಟ್ಟಿ, ಶಾಂತು ಅಂಜುಟಗಿ, ಭೀಮರಾಯ ಗೌರ, ಅಣ್ಣಾರಾಯ ಪಾಟೀಲ್, ನಾಮದೇವ ಕಡಕೋಳ, ಸದಾನಂದ ಹಿರಿಯಾಳ, ಶರಣಗೌಡ ಪಾಟೀಲ್, ಸಿದ್ದು ದೇವರನಾವದಗಿ, ಬಸು ಮಂಗಳೂರು, ಚಂದು ಕರಜಗಿ, ಬಸವರಾಜ ಪಾಟೀಲ್, ಅವಣ್ಣ ಪೂಜಾರಿ, ಅವಧೂತ ಚಂದು ಬನ್ನೆಟಿ, ತುಕಾರಾಮ ಸಿಂದೆ, ಮಹಾದೇವಪ್ಪ ಕಲಕೇರಿ, ಸಂಗಣ್ಣ ವಾಲಿ, ಅಶೋಕ ಬಟಗೇರಿ, ಮಳೆಪ್ಪ ಡಾಂಗೆ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರು ಭಾಗವಹಿಸಿದ್ದರು.






