Afzalpur | ಮೂರು ದಶಕಗಳ ಸೇವೆ ಬಳಿಕ ಕೆಕೆಆರ್‌ಟಿಸಿ ಚಾಲಕ ಲಕ್ಷ್ಮಣ ರಾಠೋಡ್ ನಿವೃತ್ತಿ : ಅದ್ದೂರಿ ಬೀಳ್ಕೊಡುಗೆ

ಅಫಜಲಪುರ: ಕೆಕೆಆರ್‌ಟಿಸಿ ಅಫಜಲಪುರ ಬಸ್ ಘಟಕದಲ್ಲಿ ಸುಮಾರು 29 ವರ್ಷಗಳ ಕಾಲ ಚಾಲಕರಾಗಿ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ ಲಕ್ಷ್ಮಣ ರಾಠೋಡ್ ಅವರು ಸೇವಾ ನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಘಟಕದ ವತಿಯಿಂದ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಘಟಕದ ವ್ಯವಸ್ಥಾಪಕ ಎಸ್.ಎಂ. ವಾಲಿಕಾರ, ಲಕ್ಷ್ಮಣ ರಾಠೋಡ್ ಅವರು ಸಾರಿಗೆ ಇಲಾಖೆಯಲ್ಲಿ ದೀರ್ಘಾವಧಿ ಪ್ರಾಮಾಣಿಕ ಹಾಗೂ ಶಿಸ್ತಿನ ಸೇವೆ ಸಲ್ಲಿಸಿದ್ದಾರೆ. ಅವರ ಸರಳತೆ, ಸಜ್ಜನಿಕೆ ಹಾಗೂ ಕರ್ತವ್ಯನಿಷ್ಠೆ ಇತರ ಸಿಬ್ಬಂದಿಗೆ ಮಾದರಿಯಾಗಿದೆ ಎಂದು ಹೇಳಿದರು.
ಪ್ರಯಾಣಿಕರ ಸುರಕ್ಷತೆಗೆ ಸದಾ ಆದ್ಯತೆ ನೀಡುತ್ತಿದ್ದ ಅವರು, ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇಂತಹ ನಿಷ್ಠಾವಂತ ಸಿಬ್ಬಂದಿಯ ಸೇವೆಯನ್ನು ಇಲಾಖೆ ಸದಾ ಸ್ಮರಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವಾ ನಿವೃತ್ತಿ ಹೊಂದಿದ ಲಕ್ಷ್ಮಣ ರಾಠೋಡ್ ಮಾತನಾಡಿ, ಸಾರಿಗೆ ಇಲಾಖೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ತಮ್ಮ ಜೀವನದ ಸ್ಮರಣೀಯ ಅವಧಿಯಾಗಿದೆ. ಈ ಅವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ರಾಠೋಡ್ ಅವರನ್ನು ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ, ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಎಂ. ವಾಲಿಕಾರ, ಆನಂದ ರಾಠೋಡ್, ಜಯರಾಮ ರಾಠೋಡ್, ಮನೋಹರ ರಾಠೋಡ್, ಸಾರಿಗೆ ನಿಯಂತ್ರಕ ಸಿದ್ದಪ್ಪ, ರವಿ ನಾಯ್ಕೋಡಿ, ಸರ್ವೇಶ ಲಿಂಬಿತೋಟ, ನಿವೃತ್ತಿ ಹೊಂದಿದ ಚಾಲಕರ ಕುಟುಂಬಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ದಯಾನಂದ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.






