Afzalpur | ಸಿದ್ದು ಹಿರೇಮಠ್, ಅಂದೋಲಾ ಸ್ವಾಮಿ ಗಡಿಪಾರಿಗೆ ಲಚ್ಚಪ್ಪ ಜಮಾದಾರ ಅಭಿಮಾನಿಗಳ ಆಗ್ರಹ

ಅಫಜಲಪುರ: ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ್ ಅವರನ್ನು ಗಡಿಪಾರು ಮಾಡಬೇಕು ಹಾಗೂ ಆಂದೋಲ ಸ್ವಾಮಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಲಚ್ಚಪ್ಪ ಜಮಾದಾರ ಅವರ ಅಭಿಮಾನಿಗಳು, ದಲಿತಪರ ಸಂಘಟನೆಗಳ ಮುಖಂಡರು ಮತ್ತು ಕೋಲಿ ಸಮಾಜದ ಸದಸ್ಯರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸಿದ್ದು ಹಿರೇಮಠ್ ಮತ್ತು ಆಂದೋಲ ಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರ ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಭೀಮಾಶಾ ಖನ್ನಾ, ರಾಮಲಿಂಗ ನಾಟೀಕಾರ, ಮಹಾಂತೇಶ ಬಳೂಂಡಗಿ, ಕಾಂಗ್ರೆಸ್ ಮುಖಂಡ ಶರಣು ಕುಂಬಾರ, ಮಹಾನಿಂಗ ಅಂಗಡಿ, ಬಸವರಾಜ ಜಮಾದಾರ ಸೇರಿದಂತೆ ಹಲವು ಮುಖಂಡರು, ಸಿದ್ದು ಹಿರೇಮಠ್ ವಿರುದ್ಧ ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದರು.
ಇಂತಹ ಬೆಳವಣಿಗೆಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಲಚ್ಚಪ್ಪ ಜಮಾದಾರ ಅವರ ವಿರುದ್ಧದ ಅವಹೇಳನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖಂಡರು ಹೇಳಿದರು.
ಸಮಾಜದಲ್ಲಿ ಅಶಾಂತಿ ಮತ್ತು ವೈಮನಸ್ಸು ಸೃಷ್ಟಿಸುವ ಪ್ರಯತ್ನಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಿದ್ದು ಹಿರೇಮಠ್ ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಸಿದ್ದು ಹಿರೇಮಠ್ ಹಾಗೂ ಆಂದೋಲ ಸ್ವಾಮಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಸಂಜೀವಕುಮಾರ ದಾಸರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ಗೌರ, ಮಹಾಂತೇಶ್ ಬಡಿಗೇರ್, ಸತೀಶ ಜಮಾದಾರ, ದುಂಡಪ್ಪ ಜಮಾದಾರ, ಬಸವರಾಜ ಬಿಲ್ಕರ್, ಸಿದ್ದಪ್ಪ ಸಿನ್ನೂರ, ಪಾಂಡುರಂಗ ಬಿಲ್ಕರ್, ಉಮೇಶ್ ಅಂದೋಡಗಿ, ರಾಮು ಉಮ್ಮರಗಿ, ದೇವಿಂದ್ರ ಕಿರಸಾವಳಗಿ, ಗುರುಶಾಂತ್ ಡಾಂಗೆ, ಹಣಮಂತ ಆನೂರ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






