Afzalpur | ರಾಷ್ಟ್ರಕೂಟರ ಸಾಹಿತ್ಯಿಕ ಸಾಧನೆಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಲಿ: ಡಾ.ವಿಕ್ರಂ ವಿಸಾಜಿ

ಅಫಜಲಪುರ: ರಾಷ್ಟ್ರಕೂಟರ ಆಡಳಿತವು ಕನ್ನಡ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಗೆ ಅಪಾರ ಕೊಡುಗೆ ನೀಡಿದೆ. ಇಂತಹ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಮೂರನೇ ಗೋಷ್ಠಿಯಲ್ಲಿ ರಾಷ್ಟ್ರಕೂಟರ ಕಾಲದ ಸಾಹಿತ್ಯ ಕುರಿತು ಮಾತನಾಡಿದ ಅವರು, ಮಾನ್ಯಖೇಟವು ಕನ್ನಡಿಗರ ಶಕ್ತಿಕೇಂದ್ರವಾಗಿತ್ತು. ರಾಷ್ಟ್ರಕೂಟರ ಕಾಲದ ಸಾಹಿತ್ಯಿಕ ಸಾಧನೆಗಳ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಚಾರ್ಯ ಡಾ. ಶಿವರಾಜ ಎಂ. ದೇವಪ್ಪ ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ. ಸುಭಾಷಚಂದ್ರ ದೊಡ್ಮನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಸಿದ್ರಾಮ ಬಣಗಾರ, ಡಾ. ಗುಲಾಮ ಮಹಿಬೂಬ, ಭೀಮಣ್ಣ ಬೆಡರಪಳ್ಳಿ ಹಾಗೂ ರಾಘವೇಂದ್ರ ದೇಶಪಾಂಡೆ ಉಪಸ್ಥಿತರಿದ್ದರು. ಡಾ. ಸಂಗಣ್ಣ ಸಿಂಗೆ ನಿರೂಪಿಸಿದರು. ಡಾ. ಮಮತಾ ಪಾಟೀಲ ಸ್ವಾಗತಿಸಿದರು. ಮುಸ್ತಾಫಾ ವಂದಿಸಿದರು.




